ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಕ್ರಮವಹಿಸಿ: ಸಚಿವ ಸಿ.ಸಿ.ಪಾಟೀಲ

ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳ ಜತೆಗೆ ಸಭೆ
Last Updated 4 ಮೇ 2021, 3:46 IST
ಅಕ್ಷರ ಗಾತ್ರ

ಗದಗ: ‘ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೋವಿಡ್‌–19 ಪ್ರಕರಣಗಳು ಅತಿ ಹೆಚ್ಚು ದಾಖಲಾಗುತ್ತಿದ್ದು, ಸೋಂಕು ಹರಡುವುದನ್ನು ನಿಯಂತ್ರಿಸಲು ಪೊಲೀಸ್‌ ಹಾಗೂ ಇತರೆ ಇಲಾಖೆ ಸಿಬ್ಬಂದಿ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಕೋವಿಡ್-19 ಸ್ಥಿತಿಗತಿ ಕುರಿತು ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಅಧಿಕಾರಿಗಳ ಜತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೋವಿಡ್‌–19 ಮಾರ್ಗಸೂಚಿಗಳ ಅನುಷ್ಠಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಒತ್ತಡದ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ, ಇನ್ನೂ ಹೆಚ್ಚಿನ ಶ್ರಮವಹಿಸಬೇಕು. ಕೋವಿಡ್‌ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಣ್ಣ ನಾಡಗೌಡ್ರ, ‘ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕಷ್ಟಕರ ಪರಿಸ್ಥಿತಿ ನಿಯಂತ್ರಿಸಲು ಈಗಿನಿಂದಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ, ‘ಜಿಮ್ಸ್‌ ಲ್ಯಾಬೊರೇಟರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೋಂಕು ದೃಢಪಟ್ಟ ಕಾರಣ ವರದಿ ನೀಡಲು ವಿಳಂಬವಾಗುತ್ತಿದೆ. ಹೆಚ್ಚಿನ ಪರೀಕ್ಷೆಗೆ ಅನುಕೂಲವಾಗುವಂತೆ ಹೊಸ ಯಂತ್ರ ತರಿಸಿದ್ದು, ಅದನ್ನು ಬಳಸಿಕೊಂಡು 24 ಗಂಟೆಯೊಳಗೆ ವರದಿ ನೀಡಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಅಧಿಕಾರಿಗಳು, ಜನಪ್ರತಿನಿಧಿಗಳ ಸಲಹೆ ಸೂಚನೆ ಆಲಿಸಿದ ಸಚಿವ ಸಿ.ಸಿ.ಪಾಟೀಲ, ‘ತಾಲ್ಲೂಕು ಆಸ್ಪತ್ರೆಗಳಲ್ಲಿ 180 ಹಾಸಿಗೆಗಳು ಲಭ್ಯವಿದ್ದು ರೋಗ ಲಕ್ಷಣಗಳಿರದ ಸೋಂಕಿತರಿಗೆ ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಜಂಬೋ ಆಕ್ಸಿಜನ್ ಟ್ಯಾಂಕ್‌ಗಳ ಖರೀದಿಗೆ ಜಿಲ್ಲಾಡಳಿತ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಅದಕ್ಕೆ ಬೇಕಿರುವ ಅನುದಾನದ ಕೊರತೆ ಇಲ್ಲ’ ಎಂದು ತಿಳಿಸಿದರು.

ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಣ್ಣ ಲಮಾಣಿ ಕೋವಿಡ್–19 ನಿಯಂತ್ರಣಕ್ಕೆ ಅಗತ್ಯದ ಸಲಹೆಗಳನ್ನು ನೀಡಿದರು. ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್., ಎಡಿಸಿ ಎಂ.ಸತೀಶ್ ಕುಮಾರ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

‘ಆಕ್ಸಿಜನ್‌ ಕೊರತೆಯಾಗದಂತೆ ಕ್ರಮವಹಿಸಿ’
‘ರಾಷ್ಟ್ರದಾದ್ಯಂತ ಆಕ್ಸಿಜನ್ ಕೊರತೆ ಉಂಟಾಗಿದ್ದು, ಅಂತಹ ಪರಿಸ್ಥಿತಿ ಜಿಲ್ಲೆಗೂ ಬರದಂತೆ ಈಗಿನಿಂದಲೇ ಎಚ್ಚರ ವಹಿಸಬೇಕು’ ಎಂದು ಶಾಸಕ ಎಚ್.ಕೆ.ಪಾಟೀಲ ಸೂಚಿಸಿದರು.

‘ಕೊರೊನಾ ಮೊದಲ ಅಲೆಯನ್ನು ಜಿಲ್ಲೆ ಅತ್ಯುತ್ತಮವಾಗಿ ನಿರ್ವಹಿಸಿದೆ. ಅದರಂತೆ, ಎರಡನೇ ಅಲೆ ತಡೆಗೂ ಶ್ರಮಿಸಬೇಕು. ಈ ಅಕ್ಟೋಬರ್‌ ಒಳಗಾಗಿ ಜಿಲ್ಲೆಯ ಅರ್ಹ ಪ್ರತಿಯೊಬ್ಬರಿಗೂ ಮೊದಲ ಹಾಗೂ ಎರಡನೇ ಹಂತದ ಲಸಿಕೆ ಒದಗಿಸಲು ಕ್ರಮವಹಿಸಬೇಕು’ ಎಂದು ಸಲಹೆ ನೀಡಿದರು.

‘ಜಿಮ್ಸ್‌ನಲ್ಲಿ 200 ಹೆಚ್ಚುವರಿ ಆಕ್ಸಿಜನ್ ಬೆಡ್‌ ವ್ಯವಸ್ಥೆಗೆ ಕ್ರಮ ವಹಿಸಬೇಕು. ರೈಲ್ವೆ ಇಲಾಖೆಯಿಂದ ಸೋಂಕಿತರ ಚಿಕಿತ್ಸೆಗೆ ನಿರ್ಮಿಸಲಾದ ಕನಿಷ್ಠ ನಾಲ್ಕು ಕೋಚ್‌ಗಳನ್ನು ಪಡೆದುಕೊಳ್ಳಬೇಕು. ಜಿಮ್ಸ್‌ ಆವರಣದಲ್ಲಿ 13 ಕೆ.ಎಲ್. ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣಾ ಘಟಕವಿದ್ದು ಅಂತಹ ಇನ್ನೊಂದು ಘಟಕ ಸ್ಥಾಪಿಸಲು ಕ್ರಮವಹಿಸಬೇಕು’ ಎಂದು ಸೂಚಿಸಿದರು.

‘ಲಸಿಕೆ ಪೂರೈಸಲು ಕ್ರಮವಹಿಸಿ’
‘ಜಿಮ್ಸ್‌ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಆಕ್ಸಿಜನ್ ಹಾಗೂ ರೆಮ್‌ಡಿಸಿವರ್‌ ಲಸಿಕೆ ಪೂರೈಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಆಗ್ರಹಿಸಿದರು.

‘ಸೋಂಕು ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿದ್ದು, ಅದು ಶೀಘ್ರವೇ ದೊರೆಯುವಂತಾಗಬೇಕು. ಹೊರ ರಾಜ್ಯ, ಜಿಲ್ಲೆಗಳಿಂದ ಜಿಲ್ಲೆಗೆ ಬಂದಿರುವ ವಲಸಿಗರ ಮಾಹಿತಿ ಸಂಗ್ರಹಿಸಿ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು. ಕಡ್ಡಾಯವಾಗಿ ಹೋಂ ಐಸೋಲೇಷನ್‌ನಲ್ಲಿ ಇರುವಂತೆ ನಿಗಾವಹಿಸಬೇಕು’ ಎಂದು ಸಲಹೆ ನೀಡಿದರು.

*
ಸರ್ಕಾರದ ನಿರ್ದೇಶನದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಲಾದ ಹಾಸಿಗೆಗೆಳ ವಿವರ ಪಡೆದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು
-ಕಳಕಪ್ಪ ಬಂಡಿ, ರೋಣ ಶಾಸಕ

*
ವೈದ್ಯರು ಸ್ವಪ್ರೇರಣೆಯಿಂದ ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಮುಂದೆ ಬಂದರೆ ಅವರಿಗೆ ಅರ್ಧ ಗಂಟೆಯೊಳಗಾಗಿ ಆದೇಶ ಪ್ರತಿ ನೀಡಲಾಗುವುದು
-ಎಂ.ಸುಂದರೇಶ್‌ ಬಾಬು, ಜಿಲ್ಲಾಧಿಕಾರಿ

*
ಕೋವಿಡ್‌ ಆಸ್ಪತ್ರೆಗಳಿಗೆ ನಿಯಮಿತವಾಗಿ ಆಕ್ಸಿಜನ್ ಸರಬರಾಜು ಆಗುವಂತೆ ನಿಗಾ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮವಹಿಸಬೇಕು
-ಎಚ್‌.ಕೆ.ಪಾಟೀಲ, ಗದಗ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT