ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯ: ಡಿಆರ್‌ಪಿ

ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ಸಮಾವೇಶಕ್ಕೆ ನಿರ್ಧಾರ
Last Updated 6 ಆಗಸ್ಟ್ 2021, 3:25 IST
ಅಕ್ಷರ ಗಾತ್ರ

ಗದಗ: ‘ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ಕಾಂಗ್ರೆಸ್ ಪಕ್ಷದ ಅಂಗಸಂಸ್ಥೆಯಾಗಿದ್ದು, ಗ್ರಾಮೀಣ ಭಾಗದ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆಯೂ ಹೆಚ್ಚಿನ ಒತ್ತು ನೀಡಲಿದೆ’ ಎಂದು ಮಾಜಿ ಸಂಸದ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸಿ.ನಾರಾಯಣ ಸ್ವಾಮಿ ಹೇಳಿದರು.

ಗುರುವಾರ ನಗರದ ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗದಗ ಸೇರಿದಂತೆ 11 ಜಿಲ್ಲೆಗಳಲ್ಲಿ ಸಂಘಟನೆ ಸಭೆ ನಡೆಸಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ರಾಜ್ಯದ 30 ಜಿಲ್ಲೆಗಳ ಪ್ರವಾಸದ ಬಳಿಕ ರಾಜ್ಯ ಮಟ್ಟದಲ್ಲಿ ಸಂಘಟನೆ ಸಮಾವೇಶ ನಡೆಸಲಾಗುವುದು. ಈಗ ಅಧಿಕಾರ ಕೇಂದ್ರೀಕರಣಕ್ಕೆ ಹುನ್ನಾರ ನಡೆಯುತ್ತಿದ್ದು, ಸಂವಿಧಾನ ಉದ್ದೇಶ ಈಡೇರಿಕೆಗೆ ಜನತೆಗೆ ತರಬೇತಿ ನೀಡಲಾಗುವುದು’ ಎಂದು ಅವರು ಹೇಳಿದರು.

‘ಗ್ರಾಮಸಭೆಗಳಿಗೆ ಹೊಸ ರೂಪ ನೀಡಿದ್ದೇ ಕರ್ನಾಟಕದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ-2015. ಇವುಗಳ ಮೂಲಕವೇ ಕ್ರಿಯಾಯೋಜನೆ, ಫಲಾನುಭವಿಗಳ ಆಯ್ಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಸಂಘಟನೆ ಕೆಲಸ ಮಾಡುತ್ತಿದೆ’ ಎಂದು ಅವರು ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಡಿ.ಆರ್.ಪಾಟೀಲ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ಹಾಗೂ ಸ್ಥಳೀಯ ಆಳಿತದ ಪರಿಕಲ್ಪನೆ ಹೊಂದಿದ್ದ ದಿ.ರಾಜೀವಗಾಂಧಿ ಪ್ರಧಾನಿಯಾಗಿದ್ದಾಗಲೇ ಸಂವಿಧಾನದ 64 ಮತ್ತು 65ನೇ ತಿದ್ದುಪಡಿಗೆ ಮುಂದಾಗಿದ್ದರು. ಆದರೆ, ಅದು ರಾಜ್ಯಸಭೆಯಲ್ಲಿ ಒಂದು ಮತದ ಕೊರತೆಯಿಂದ ಜಾರಿಯಾಗಲಿಲ್ಲ. ಬಳಿಕ ಬಂದ ಸರ್ಕಾರಗಳು ಸ್ಥಳೀಯಾಡಳಿತದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಕೈಬಿಟ್ಟು ಸದಸ್ಯರಲ್ಲಿ ಮಾತ್ರ ಎಸ್‍ಸಿ, ಎಸ್‍ಟಿ ಹಾಗೂ ಮಹಿಳಾ ಮೀಸಲಾತಿಗೆ ಮುಂದಾಗಿದ್ದವು. ಆದರೆ, ನಂತರದ ಕಾಂಗ್ರೆಸ್ ಸರ್ಕಾರವೇ ಮತ್ತೆ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿತು ಎಂದು ಹೇಳಿದರು.

ಸಂಘಟನೆಯ ರಾಜ್ಯ ಸಂಚಾಲಕ ವಿಜಯ ಸಿಂಗ್, ಸಂಘಟನೆ ಕರ್ನಾಟಕ ಉಸ್ತುವಾರಿ ಬಿನತಾ ವೋರಾ, ರಾಜ್ಯ ಸಂಚಾಲಕ ಉಮೇಶ್ ಬ್ಯಾಳಿ, ಚನ್ನಪ್ಪ ಜಗಲಿ, ಮುಖಂಡರಾದ ಗುರಣ್ಣ ಬಳಗಾನೂರ, ಎಂ.ಎಸ್. ದೊಡ್ಡಗೌಡ್ರ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಇದ್ದರು.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ಈ ಕಾಯ್ದೆಯಲ್ಲಿನ ಎಲ್ಲ ಅಂಶಗಳು ಜಾರಿಗೊಂಡರೆ ಗಾಂಧೀಜಿ ಕಂಡ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.
ಡಿ.ಆರ್. ಪಾಟೀಲ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT