ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಹೊರರಾಜ್ಯದಿಂದ ಬಂದ ಮತ್ತಿಬ್ಬರಿಗೆ ಕೋವಿಡ್‌

ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡಿನಿಂದ ಬರುವವರ ಮೇಲೆ ತೀವ್ರ ನಿಗಾ
Last Updated 21 ಮೇ 2020, 12:35 IST
ಅಕ್ಷರ ಗಾತ್ರ

ಗದಗ: ಲಾಕ್‌ಡೌನ್‌ ಸಡಿಲಿಕೆಯ ಬೆನ್ನಲ್ಲೇ, ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವವರು ತಮ್ಮೊಂದಿಗೆ ಸೋಂಕು ಹೊತ್ತು ತರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮಹಾರಾಷ್ಟ್ರ ಮತ್ತು ಚತ್ತೀಸಗಡದಿಂದ ಬಂದ ಇಬ್ಬರಲ್ಲಿ ಗುರುವಾರ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದ ಮುಂಬೈನಿಂದ ಬಂದ 32 ವರ್ಷದ ಪುರುಷ (ಪಿ–1566) ಮತ್ತು ಚತ್ತೀಸಗಡಿಂದ ಬಂದ 38 ವರ್ಷದ ಮಹಿಳೆಯಲ್ಲಿ (ಪಿ–1567) ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿನ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಪಿ–1566 ಮತ್ತು ಪಿ–1567 ಇಬ್ಬರೂ ಶಿರಹಟ್ಟಿ ತಾಲ್ಲೂಕಿನವರು. ಇದರಲ್ಲಿ 32 ವರ್ಷದ ಪುರುಷ (ಪಿ-1566) ಮುಂಬೈನಿಂದ ಮೇ 19ರಂದು ಜಿಲ್ಲೆಗೆ ಒಬ್ಬರೇ ಬಂದಿದ್ದರು. ಪಿ-1567 ಅದೇ ದಿನ 17 ಜನರ ತಂಡದೊಂದಿಗೆ ಚತ್ತೀಸಗಡದಿಂದ ಜಿಲ್ಲೆಗೆ ಬಂದಿದ್ದರು. ಸೋಂಕಿತ ಪುರುಷ ಒಬ್ಬರೇ ಬಂದಿದ್ದರಿಂದ ಅವರ ಪ್ರಾಥಮಿಕ ಸಂಪರ್ಕಕ್ಕೆ ಯಾರೂ ಬಂದಿಲ್ಲ. ‘ಆದರೆ, ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದ 16 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲ ವರದಿಗಳೂ ನೆಗೆಟಿವ್ ಬಂದಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಮೇ 1ರ ನಂತರ ಹೊರರಾಜ್ಯಗಳಿಂದ ಜಿಲ್ಲೆಗೆ 4112 ಜನರು ಮರಳಿದ್ದಾರೆ. ಇವರಲ್ಲಿ 8 ಜನರಲ್ಲಿ ಇದುವರೆಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದ 500ಕ್ಕೂ ಹೆಚ್ಚು ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ ಇನ್ನೂ ಸಾಕಷ್ಟು ವರದಿ ಬರಲು ಬಾಕಿ ಇದೆ. ಜಿಲ್ಲೆಯ ಪಾಲಿಗೆ ಈ ಫಲಿತಾಂಶ ನಿರ್ಣಾಯಕವಾಗಿದ್ದು, ಈ ಪರೀಕ್ಷಾ ವರದಿಗಳ ಆಧಾರದಲ್ಲಿ ಜಿಲ್ಲೆಯ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ನಿರ್ಧಾರವಾಗಲಿದೆ.

ಸ್ಥಳೀಯವಾಗಿ ವರದಿಯಾಗಿರುವ 5 ಪ್ರಕರಣ ಮತ್ತು ಹೊರ ರಾಜ್ಯಗಳಿಂದ ಬಂದವರ 8 ಪ್ರಕರಣ ಸೇರಿ ಸದ್ಯ ಜಿಲ್ಲೆಯಲ್ಲಿ 13 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಸೋಂಕಿತರೆಲ್ಲರನ್ನೂ ಜಿಲ್ಲಾ ಕೇಂದ್ರದ ಪ್ರತ್ಯೇಕ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಹೊರರಾಜ್ಯದಿಂದ ಬಂದವರಲ್ಲಿ ಮೊದಲ ಪಾಸಿಟಿವ್‌ ಪ್ರಕರಣ ಮೇ 12ರಂದು ವರದಿಯಾಗಿತ್ತು. ಗುಜರಾತ್‌ನಿಂದ ಬಂದ ವ್ಯಕ್ತಿಯಲ್ಲಿ ಮೊದಲ ಬಾರಿ ಸೋಂಕು ಪತ್ತೆಯಾಗಿತ್ತು. ಮೇ 14ರಂದು ಮತ್ತೆ ಗುಜರಾತ್‌ನ ಅಹಮದಾಬಾದ್‌ನಿಂದ ಜಿಲ್ಲೆಗೆ ಬಂದಿದ್ದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ತಮಿಳುನಾಡಿನ ಚೆನ್ನೈನಿಂದ ಜಿಲ್ಲೆಗೆ ಬಂದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಮುಂಬೈನಿಂದ ಜಿಲ್ಲೆಗೆ ಬಂದ ಮಹಿಳೆಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದ 7 ಜನರಲ್ಲಿ ಸೋಂಕು ದೃಡಪಟ್ಟಿತ್ತು. ಇದೀಗ ಮತ್ತೆರಡು ಪ್ರಕರಣ ಈ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಹೊರ ರಾಜ್ಯದಿಂದ ಬಂದ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮಾಸ್ಕ್‌, ಅಂತರ ಮರೆತ ಜನ: ಮಾಸ್ಕ್ ಧರಿಸದೆ, ಅಂತರ ಪಾಲಿಸದೆ, ಇನ್ನಿತರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೆ ಜನರು ಖರೀದಿಗಾಗಿ ಮಾರುಕಟ್ಟೆಗೆ ಮುಗಿಬೀಳುತ್ತಿರುವುದು ಸೋಂಕು ಹರಡುವ ಸಾಧ್ಯತೆಯನ್ನು ಹೆಚ್ಚಿಸಿದೆ. ಜಿಲ್ಲಾ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ವಾಹನ ಮತ್ತು ಜನಸಂಚಾರ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT