ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲಿಕೆ ಹಿಂಪಡೆಯಲು ಎಚ್ಕೆ ಆಗ್ರಹ

Last Updated 24 ಏಪ್ರಿಲ್ 2020, 15:25 IST
ಅಕ್ಷರ ಗಾತ್ರ

ಗದಗ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ಸಚಿವ ಸಂಪುಟ ಸಭೆ ಕರೆದು, ಲಾಕ್‌ಡೌನ್‌ ಸಡಿಲಿಕೆ ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಬೇಕು. ಆ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕು’ ಎಂದು ಶಾಸಕ ಎಚ್‌.ಕೆ ಪಾಟೀಲ ಒತ್ತಾಯಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ನಗರವೊಂದರಲ್ಲೇ ಏಪ್ರಿಲ್‌ 24ರಂದು 21 ಸೇರಿ, ಇದುವರೆಗೆ ರಾಜ್ಯಾದ್ಯಂತ 474 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ನಡುವೆ ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದು ದುರಂತಕ್ಕೆ ಆಹ್ವಾನ ಕೊಟ್ಟಂತೆ ಆಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿರುವುದು ಸ್ಪಷ್ಟವಾಗಿ ಗೋಚರಿಸಿದ್ದರೂ, ರಾಜ್ಯ ಸರ್ಕಾರ ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಈವರೆಗೆ 150 ಕೊರೊನಾ ಸೋಂಕಿತ ದೃಢ ಪ್ರಕರಣಗಳು ವರದಿಯಾಗಿಲ್ಲ. ರಾಜ್ಯ ಸರ್ಕಾರ ಕರ್ನಾಟಕವನ್ನು ದುರಂತ ರಾಜ್ಯವನ್ನಾಗಿಸುವ ಮೊದಲು ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೇಕಿದೆ’ ಎಂದು ಎಚ್ಚರಿಸಿದರು.

‘ದೇಶಾದ್ಯಂತ ಮೇ 3ರ ವರೆಗೆ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ರೆಡ್‌ ಅಲರ್ಟ್‌ನಲ್ಲಿರುವ ಬೆಂಗಳೂರು ನಗರದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿರುವುದು ಅನುಮಾನಕ್ಕೀಡು ಮಾಡುವಂತಿದೆ. ಸಂಪನ್ಮೂಲ ಕ್ರೋಢೀಕರಣ ನೆಪದಲ್ಲಿ ಸಿರಿವಂತರ ಹಾಗೂ ಮೇಲ್ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಬಿಡಿಎ ಸೈಟ್‌ ಹರಾಜು, ಅಕ್ರಮ ಸಕ್ರಮ ಯೋಜನೆ ಹಾಗೂ ರೀಯಲ್‌ ಎಸ್ಟೇಟ್‌ಗೆ ಅವಕಾಶ ನೀಡಿರುವುದು ಸರಿಯಾದ ಕ್ರಮವಲ್ಲ' ಎಂದು ಎಚ್‌.ಕೆ. ಪಾಟೀಲ ಹರಿಹಾಯ್ದರು.

‘ರಾಜ್ಯದಲ್ಲಿ ಏಪ್ರಿಲ್‌ 22ರ ವರೆಗೆ 29,512 ಜನರನ್ನು ಕೊರೊನಾ ಸೋಂಕು ಪರೀಕ್ಷೆಗೊಳಪಡಿಸಿದ್ದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಇತರೆ ರಾಜ್ಯಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಜತೆಗೆ ರಾಜ್ಯಕ್ಕೆ ಪೂರೈಕೆಯಾಗಿರುವ ಕೊರೊನಾ ಪರೀಕ್ಷಾ ಕಿಟ್‌ಗಳು ಕಳಪೆಯಾಗಿದ್ದು, ಇದರಲ್ಲಿ ಪರೀಕ್ಷೆ ನಡೆಸದಂತೆ ಐಸಿಎಂಆರ್‌ ತಡೆ ನೀಡಿದೆ. ಕೂಡಲೇ ಸರ್ಕಾರ ಈ ಕಿಟ್‌ಗಳನ್ನು ಪೂರೈಸಿದವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT