ಗುರುವಾರ , ನವೆಂಬರ್ 26, 2020
20 °C
ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ, ವೈದ್ಯರಿಂದ ಎಚ್ಚರಿಕೆ

ಖುಷಿಯಲ್ಲಿ ಮೈಮರೆತರೆ ಆಪತ್ತು ನಿಶ್ಚಿತ

ಕೆ.ಎಂ. ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ ಎಂಬ ಖುಷಿಯಲ್ಲಿ ಮೈಮರೆಯಬಾರದು. ನವೆಂಬರ್‌ 1ರಿಂದ ಚಳಿಗಾಲ ಆರಂಭವಾಗಲಿದ್ದು, 2021ರ ಜನವರಿ 14ರವರೆಗೆ ಜಿಲ್ಲೆಯ ಜನತೆ ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ವಾರದಿಂದ ಈಚೆಗೆ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡುಬಂದಿದ್ದು, ಅ. 23ರಿಂದ 30ರ ನಡುವಿನ ಅವಧಿಯಲ್ಲಿ 12, 14, 22, 04, 15, 22 ಮತ್ತು 12 ಪ್ರಕರಣಗಳು ಮಾತ್ರ ದಾಖಲಾಗಿವೆ. ಈ ಅಂಕಿ– ಅಂಶಗಳು ಜಿಲ್ಲೆಯ ಕೆಲವು ಜನರಲ್ಲಿ ನೆಮ್ಮದಿಯ ಭಾವ ಮೂಡಿಸಿದರೆ; ಮತ್ತೆ ಕೆಲವು ಜನರಲ್ಲಿ ಅನುಮಾನ ಮೂಡಿಸಿವೆ.

‘ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಜಿಮ್ಸ್‌) 300 ಬೆಡ್‌ಗಳ ಪೈಕಿ ಈಗ 80 ಬೆಡ್‌ಗಳಲ್ಲಿ ಮಾತ್ರ ಕೋವಿಡ್‌–19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಐದು ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜತೆಗೆ ಮನೆಯಲ್ಲೇ ಐಸೋಲೇಷನ್‌ ಆಗಿರುವವರನ್ನು ಲೆಕ್ಕಹಾಕಿದರೆ ಜಿಲ್ಲೆಯಲ್ಲಿ ಈಗ 205 ಸಕ್ರಿಯ ಪ್ರಕರಣಗಳು ಇವೆ. ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವುದು ಖುಷಿ ಎನಿಸಿದರೂ; ಆ ಸಂಭ್ರಮದೊಳಗೆ ಕೊರೊನಾ ನಿಯಮಗಳನ್ನು ಪಾಲಿಸುವುದನ್ನು ಬಿಡಬಾರದು. ಮೈಮರೆತರೆ ಆಪತ್ತು ಗ್ಯಾರಂಟಿ’ ಎಂದು ಎಚ್ಚರಿಸುತ್ತಾರೆ ಜಿಮ್ಸ್‌ ನಿರ್ದೇಶಕ ಡಾ. ಬೂಸರೆ‌ಡ್ಡಿ.

ಗಂಟಲು ದ್ರವ ಮಾದರಿಯ ಪರೀಕ್ಷೆ ‍ಪ್ರಮಾಣ ಕಡಿಮೆ ಆಗಿದೆಯೇ ಎಂಬ ಪ್ರಶ್ನೆಗೆ ಡಾ. ಬೂಸರೆಡ್ಡಿ ಉತ್ತರಿಸಿದ್ದು ಹೀಗೆ: ‘ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ಕಡಿಮೆಯಾಗಿರುವುದಕ್ಕೆ ಗಂಟಲು ದ್ರವ ಮಾದರಿಯ ಪರೀಕ್ಷಿಸುವ ಪ್ರಮಾಣ ಕಡಿಮೆ ಆಗಿದೆ ಎಂದು ಭಾವಿಸಬೇಕಿಲ್ಲ. ಪ್ರತಿದಿನ ನಗರದಲ್ಲಿ 1 ಸಾವಿರ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಲಾಗುತ್ತಿದೆ. ಮುಂದೆಯೂ ಪರೀಕ್ಷೆಗಳು ನಿರಂತರವಾಗಿ ನಡೆಯಲಿವೆ’.

‘ತಾಲ್ಲೂಕುಗಳಲ್ಲಿರುವ ಕೋವಿಡ್‌ ಆಸ್ಪತ್ರೆಗಳಲ್ಲಿ ಪ್ರತಿ ದಿನವೂ 300 ರ‍್ಯಾ‍‍ಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಹಾಗೂ 700 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸುವಂತೆ ವೈದ್ಯರಿಗೆ ಸೂಚಿಸಲಾಗಿದೆ. ಪತ್ರಿದಿನವೂ ಅಷ್ಟು ಪರೀಕ್ಷೆಗಳು ತಪ್ಪದೇ ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು ಗದಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್‌ ಬಸರೀಗಿಡದ.

ಗದಗ ಜಿಲ್ಲೆ ಬಿಸಿಲ ನಾಡು. ಬೇಸಿಗೆ ಸಂದರ್ಭದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈಗ ಇಳಿಕೆ ಹಾದಿಯಲ್ಲಿರುವ ಸೋಂಕು ಒಮ್ಮೆಲೆ ಅಧಿಕಗೊಳ್ಳುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಎಲ್ಲರೂ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡುತ್ತಾರೆ ವೈದ್ಯರು.

ಜಾಗೃತಿ ಇರಲಿ

‘ಇದು ಹಬ್ಬದ ಋತು. ಸಾಲು ಸಾಲು ಹಬ್ಬಗಳ ಜತೆಗೆ ಚಳಿಗಾಲವೂ ಸೇರಿಕೊಳ್ಳುತ್ತಿದೆ. ಸೋಂಕು ಇಳಿಮುಖ ಹಾದಿಯಲ್ಲಿದೆ ಎಂದು ಯಾರೊಬ್ಬರೂ ಮೈಮರೆಯಬಾರದು. ಅನವಶ್ಯಕವಾಗಿ ಅಡ್ಡಾಡುವುದನ್ನು ನಿಲ್ಲಿಸಬೇಕು. ಅನಿವಾರ್ಯವಾಗಿ ಹೊರಗೆ ಹೋಗುವ ಸಂದರ್ಭ ಬಂದರೆ ಕಡ್ಡಾಯವಾಗಿ ಮಾಸ್ಕ್‌ ಬಳಕೆ ಮಾಡಬೇಕು. ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಸೋಂಕು ಹರಡುವಿಕೆಯ ಕೊಂಡಿ ಕತ್ತರಿಸಲು ಜಾಗೃತಿಯೇ ಅಸ್ತ್ರವಾಗಬೇಕು’ ಎಂದು ಡಾ. ಬೂಸರೆಡ್ಡಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು