ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿಗಿಂತ ಕರಾಳ ವಾತಾವರಣ: ಎಸ್.ಆರ್‌. ಹಿರೇಮಠ

Last Updated 15 ಮಾರ್ಚ್ 2021, 3:11 IST
ಅಕ್ಷರ ಗಾತ್ರ

ಗದಗ: ‘ದೇಶ ಕವಲು ದಾರಿಯಲ್ಲಿದೆ. ಪ್ರಧಾನಿ ಮೋದಿ ಅವರು ರಾಜಕೀಯ ಅಜ್ಞಾನಿ. ದೇಶದಲ್ಲಿ ಇಂದು ತುರ್ತು ಪರಿಸ್ಥಿತಿಗಿಂತ 20 ಪಟ್ಟು ಹೆಚ್ಚಿನ ಕರಾಳ ವಾತಾವರಣವಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಹೇಳಿದರು.

ಇಲ್ಲಿನ ಹಾತಲಗೇರಿ ರಸ್ತೆಯ ನಿಸರ್ಗ ಬಡಾವಣೆಯ ಬಸವ ಭವನದಲ್ಲಿ ಖಾಸಗೀಕರಣ ವಿರೋಧಿ ಹೋರಾಟ ವೇದಿಕೆ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶತ ಶತಮಾನಗಳಿಂದ ಶೋಷಣೆಗೆ ಒಳಗಾದ ಸಮಾಜದ ಜನತೆಗೆ ಮೀಸಲಾತಿ ಸಿಗಬೇಕು. ಅಂಬಾನಿ, ಅದಾನಿ ಹಾಗೂ ಹಮಾಲಿ ನೀಡುವ ಮತಕ್ಕೆ ಒಂದೇ ಮೌಲ್ಯವಿದೆ. ಆದರೆ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಇಲ್ಲ’ ಎಂದು ಹೇಳಿದರು.

ಡಾ.ಟಿ.ಆರ್.ಚಂದ್ರಶೇಖರ ಅವರು ಕರ್ನಾಟಕದ ಮೀಸಲಾತಿ ಚಳವಳಿಗಳು ಮತ್ತು ಪ್ರಭುತ್ವ ಕುರಿತು ಮಾತನಾಡಿ, 1931ರ ನಂತರ ದೇಶದಲ್ಲಿ ಜಾತಿ ಗಣತಿ ನಡೆದಿಲ್ಲ. ಅದು ನಡೆದಾಗ ಮಾತ್ರ ಮೀಸಲಾತಿ ನೀಡಲು ಸಾಧ್ಯ. ಜಾತಿ ಗಣತಿ ಜನಗಣತಿ ಮಾದರಿಯಲ್ಲಿ ನಡೆದಾಗ ಮಾತ್ರ ಎಲ್ಲ ಜಾತಿಗಳ ಸ್ಥಿತಿಗತಿ ಅರಿಯಲು ಸಾಧ್ಯ ಎಂದು ಹೇಳಿದರು.

60ರ ದಶಕದಲ್ಲಿ ಮೀಸಲಾತಿಗೆ ನಡೆದ ಚಳವಳಿಯಲ್ಲಿ ಯಾವ ರೈತರೂ ಮೀಸಲಾತಿ ಕೇಳಲಿಲ್ಲ. ಆದರೆ, ಇಂದು ಕೇಳುತ್ತಿರುವುದಕ್ಕೆ ಆರ್ಥಿಕ ಕುಸಿತ ಕಾರಣ. ಇದರಿಂದಾಗಿಯೇ ಇಂದು ಎಲ್ಲರೂ ಮೀಸಲಾತಿ ಹೋರಾಟ ನಡೆಸುವಂತಾಗಿದೆ ಎಂದು ಹೇಳಿದರು.

‘ಶೇ 10 ಮೀಸಲಾತಿ ಎಂಬುದು ಜನಸಾಮಾನ್ಯರ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿದಂತಿದೆ. ನೀತಿ ಆಯೋಗದಿಂದ ಅನೀತಿ ಬೆಳೆಯುತ್ತಿದೆ’ ಎಂದು ಹೇಳಿದರು.

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಸಾಹಿತಿ ಬಸವರಾಜ ಸೂಳಿಭಾವಿ, ಶೇಖಣ್ಣ ಕವಳಿಕಾಯಿ, ಹೋರಾಟಗಾರ ರವೀಂದ್ರ ಹೊನವಾಡ, ಡಾ.ಎನ್.ಬಿ.ಪಾಟೀಲ, ಜೆ.ಕೆ.ಜಮಾದಾರ, ನಿವೃತ್ತ ನ್ಯಾಯಾಧೀಶ ಎಸ್.ಜಿ.ಪಲ್ಲೇದ, ಕೆ.ಎಚ್.ಬೇಲೂರ, ಕೆ.ಬಿ.ಭಜಂತ್ರಿ, ಮುತ್ತು ಬಿಳೆಯಲಿ, ರಮೇಶ ಕೋಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT