ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಿ: ಧನ್ಯಕುಮಾರ ಜಿನಪ್ಪ ಗುಂಡೆ

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಜಿನಪ್ಪ ಗುಂಡೆ
Last Updated 5 ಏಪ್ರಿಲ್ 2022, 4:47 IST
ಅಕ್ಷರ ಗಾತ್ರ

ಗದಗ: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ಬಿಡುಗಡೆಯಾಗುತ್ತಿದ್ದು, ಈ ಹಣವನ್ನು ಬಳಸುವುದರ ಜತೆಗೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಜಿನಪ್ಪ ಗುಂಡೆ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿದ್ದು ಸಾಮಾಜಿಕ ಅಭಿವೃದ್ಧಿಯಡಿ ರೈತರಿಗೆ ನೀರು, ಬಿತ್ತನೆಬೀಜ ಮೊದಲಾದ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಎಫ್.ಯು.ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ 1,53,400 ಮಂದಿ ಅಲ್ಪಸಂಖ್ಯಾತರಿದ್ದಾರೆ. 2021-22ನೇ ಸಾಲಿನಲ್ಲಿ ರಾಜ್ಯ ವಲಯಕ್ಕೆ ಕ್ರೈಸ್ತ ಸಮುದಾಯ ಭವನ, ಮದರಸ ಆಧುನೀಕರಣ, ವಿದ್ಯಾಸಿರಿ, ಮೊರಾರ್ಜಿ ವಸತಿ ಶಾಲೆಗಳ ನಿರ್ವಹಣೆ ವೆಚ್ಚ, ಕಾನೂನು ಪದವೀಧರರಿಗೆ ತರಬೇತಿ ಸೇರಿದಂತೆ ₹1.84 ಕೋಟಿ ಖರ್ಚು ಮಾಡಲಾಗಿದ್ದು, ಜಿಲ್ಲೆಯಲ್ಲಿ ಆರು ಮೌಲಾನಾ ಆಝಾದ್ ಶಾಲೆಗಳು, ಮೂರು ಮೊರಾರ್ಜಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ಮಾತನಾಡಿ, ‘2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರಿಗೆ ನಿಗದಿಪಡಿಸಲಾದ ಗುರಿಯಲ್ಲಿ ಬೀಜ ವಿತರಣೆಯಲ್ಲಿ ಶೇಕಡ 97, ಮಣ್ಣಿನ ಸತ್ವ ಹೆಚ್ಚುಸುವಿಕೆ ಶೇಕಡ 95, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಅಡಿ ಶೇ 98 ಹಾಗೂ ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಶೇಕಡ 96 ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ ನುಚ್ಚಿನ ಮಾತನಾಡಿ, ಜಿಲ್ಲೆಯಲ್ಲಿ 15-17 ವಯೋಮಾನದ ಮಕ್ಕಳಿಗೆ ಮೊದಲನೇ ಡೋಸ್ ಶೇಕಡ 104, ಎರಡನೇ ಡೋಸ್ ಶೇಕಡ 95ರಷ್ಟು ನೀಡಲಾಗಿದ್ದು,12-14 ವಯೋಮಾನದ ಮಕ್ಕಳಿಗೆ ಲಸಿಕಾಕರಣ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT