ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಸ್ನೇಹಿ ಯೋಜನೆ ರೂಪಿಸಲು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಸೂಚನೆ

ಸಾಲ ಸಂಪರ್ಕ ಕಾರ್ಯಕ್ರಮ
Last Updated 23 ಅಕ್ಟೋಬರ್ 2021, 4:04 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯು ಕೃಷಿ ಪ್ರಧಾನವಾಗಿರುವುದರಿಂದ ರೈತರನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಸದುಪಯೋಗವಾಗುವಂತಹ ಯೋಜನೆಗಳನ್ನು ರೂಪಿಸಿ, ಅವರನ್ನೂ ಬ್ಯಾಕಿಂಗ್ ವ್ಯವಸ್ಥೆಗೆ ಒಳಪಡಿಸುವ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಹೇಳಿದರು.

ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶುಕ್ರವಾರ ಎಸ್‌ಬಿಐ, ಲೀಡ್ ಬ್ಯಾಂಕ್ ಹಾಗೂ ಬೆಂಗಳೂರಿನ ಎಸ್‌ಎಲ್‌ಬಿಸಿ ಬ್ಯಾಂಕ್ ಸಹಯೋಗದಲ್ಲಿ ನಡೆದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುವಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಪ್ರಮುಖ ಪಾತ್ರವಹಿಸುತ್ತದೆ. ವಿಶ್ವದಲ್ಲಿಯೇ ಐದನೇ ಅತಿ ದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ಭಾರತದ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳ ಕೊಡುಗೆಯೂ ಅಪಾರವಾಗಿದೆ. ಕೋವಿಡ್‌ನಿಂದಾಗಿ ದೇಶವೂ ಸೇರಿದಂತೆ ವಿಶ್ವದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈಗ ಪರಿಸ್ಥಿತಿ ಸುಧಾರಿಸುತ್ತಾ ಬಂದಿದ್ದು, ಸದ್ಯ ಎಲ್ಲ ಕ್ಷೇತ್ರಗಳ ಕಾರ್ಯಚಟುವಟಿಕೆಗಳು ಸುಗಮವಾಗಿ ಸಾಗುತ್ತಿವೆ’ ಎಂದರು.

‘ಪಿ.ಎಮ್.ಕಿಸಾನ್ ಯೋಜನೆಯಲ್ಲಿ ರೈತರಿಗೆ ಶೀಘ್ರ ಪರಿಹಾರ ಒದಗಿಸುವಲ್ಲಿ ಬ್ಯಾಂಕ್‌ಗಳು ಉತ್ತಮ ಕಾರ್ಯನಿರ್ವಹಿಸಿದ್ದರಿಂದಾಗಿ ಗದಗ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನಗಳಿಸಲು ಸಾಧ್ಯವಾಗಿದೆ. ಬಹುತೇಕ ಎಲ್ಲ ರೈತರಿಗೂ ಸಾಲಸೌಲಭ್ಯ ದೊರಕಿಸಿಕೊಡಲಾಗಿದ್ದು, ಈ ಸಾಧನೆಯಲ್ಲಿ ಎಸ್‌ಬಿಐ ಬ್ಯಾಂಕ್‌ನ ಪಾತ್ರ ತುಂಬಾ ಮಹತ್ವದಾಗಿದೆ’ ಎಂದು ಅಭಿನಂದಿಸಿದರು.

ಎಸ್‌ಬಿಐ ಜನರಲ್ ಮ್ಯಾನೇಜರ್ ಶಾಂತನು ಸಿ.ಪೆಂಡ್ಸಿ ಮಾತನಾಡಿ, ‘ವಿಶ್ವದಲ್ಲಿಯೇ ಅತಿ ಹೆಚ್ಚು ಮೊಬೈಲ್ ಬಳಸುತ್ತಿರುವ ರಾಷ್ಟ್ರ ಭಾರತವಾಗಿದ್ದು, ವಿಜ್ಞಾನ-ತಂತ್ರಜ್ಞಾನ, ಮೂಲಸೌಕರ್ಯ, ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ. ಅಟಲ್ ಪಿಂಚಣಿ, ಜೀವ ವಿಮಾ ಯೋಜನೆ, ಕೃಷಿಕರಿಗೆ ಆಶಾಕಿರಣ, ಪಿಎಂಎಫ್‌ಇ, ಪಿಎಂ ಕಿಸಾನ್‌ನಂತಹ ಯೋಜನೆಗಳನ್ನು ರೂಪಿಸುವ ಮೂಲಕ ರೈತರು, ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ’ ಎಂದರು.

ಹುಬ್ಬಳ್ಳಿಯ ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ರಾಜೇಂದ್ರನ್ ಎಸ್., ಬೆಂಗಳೂರಿನ ಉಪ ಪ್ರಧಾನ ವ್ಯವಸ್ಥಾಪಕ ಪಂಕಜ್‌ ತಪ್ಲಿಯಾಳ್, ಗದಗ ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ರವೀಂದ್ರ ಕುಮಾರ ಗುಪ್ತಾ, ಗದಗ ನಬಾರ್ಡ್ ಡಿಡಿಎಂ ರಾಮನ್ ಜಗದೀಶ್, ಗದಗ ಕೆವಿಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಟಿ.ಯು.ಭಾಗವತ್, ಹುಬ್ಬಳ್ಳಿ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಪಿ.ಶ್ರೀನಿವಾಸ್, ಹುಬ್ಬಳ್ಳಿ ಯೂನಿಯನ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸಂತೋಷ್ ಪ್ರಭು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಸಾಂಕೇತಿಕವಾಗಿ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಎಸ್‌ಬಿಐ ಜಿಲ್ಲಾ ಲೀಡ್‌ ಬ್ಯಾಂಕ್ ಮ್ಯಾನೇಜರ್ ಜಬ್ಬಾರ ಅಹ್ಮದ್ ಸ್ವಾಗತಿಸಿದರು. ದೀಪ ಮಾಲಾ ಪ್ರಾರ್ಥಿಸಿದರು, ಮಹಾಂತೇಶ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಬ್ಯಾಂಕ್‌ ವ್ಯವಹಾರದ ಅರಿವು ಮೂಡಿಸಿ

‘ಬ್ಯಾಂಕ್‌ನ ಎಲ್ಲ ವ್ಯವಹಾರಗಳನ್ನು ಮನೆಯಲ್ಲಿ ಕುಳಿತು ಮಾಡಬಹುದಾದ ಪ್ರಸ್ತುತ ದಿನಗಳಲ್ಲಿ ಇಂದಿಗೂ ಅನೇಕ ರೈತರು ಹಾಗೂ ಸಾಮಾನ್ಯ ಜನರಿಗೆ ನೆಟ್ ಬ್ಯಾಂಕಿಂಗ್, ಎಟಿಎಂ ಬಳಕೆ, ಅಕೌಂಟ್ ಟ್ರಾನ್ಸ್‌ಫರ್‌, ಬೀಮ್ ಆ್ಯಪ್‌ಗಳ ಬಗ್ಗೆ ಪರಿಕಲ್ಪನೆ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಹೇಳಿದರು.

***

ರೈತರು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಸಾಲ ಸೌಲಭ್ಯಗಳನ್ನು ಒದಗಿಸಲಿದೆ

- ಶಾಂತನು ಸಿ.ಪೆಂಡ್ಸಿ, ಎಸ್‌ಬಿಐ ಜನರಲ್ ಮ್ಯಾನೇಜರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT