ರೋಣ: ಗ್ರಾಮೀಣ ಜನರ ದಾಹ ನೀಗಿಸಲು ಪ್ರತಿ ಮನೆಗೂ ದಿನದ 24 ತಾಸು ಶುದ್ಧ ನೀರು ಪೂರೈಕೆ ಮಾಡುವ ಆಶಯದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಬಂಧಿಸಿದ ಇಲಾಖೆಗಳ ಜಡತ್ವದಿಂದಾಗಿ ನಿಗದಿತ ಗುರಿ ಸಾಧಿಸಿಲ್ಲ. ರೋಣ ತಾಲ್ಲೂಕಿನ ಗ್ರಾಮಗಳ ಜನರ ದಾಹ ನಿಗಿಸುವಲ್ಲಿ ಯೋಜನೆಯು ಸಂಪೂರ್ಣ ವಿಫಲವಾಗಿದೆ.
ತಾಲ್ಲೂಕಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ತಾಲ್ಲೂಕಿನ ಬೆಳವಣಿಕಿ, ಮಲ್ಲಾಪುರ, ಸಂದಿಗವಾಡ, ಸವಡಿ, ಹೂಳೆಆಲೂರು, ಮಾಡಲಗೇರಿ, ನೈನಾಪುರ, ಹುಲ್ಲೂರು, ಬೆನಹಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕಾಮಗಾರಿ ತ್ರಿಶಂಕು ಸ್ಥಿತಿಯಲ್ಲಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ.
ಸವಡಿ, ಬೆಳವಣಿಕಿ, ಮಲ್ಲಾಪುರ ಸೇರಿದಂತೆ ಹಲವೆಡೆ ಕುಡಿಯುವ ನೀರು ಲಭ್ಯವಾಗುವ ಕನಸು ಕನಸಾಗಿಯೇ ಉಳಿದಿದೆ. ಈ ಗ್ರಾಮಗಳಲ್ಲಿ ಪೈಪ್‌ಲೈನ್ ಅಳವಡಿಸಿ ವರ್ಷಗಳೇ ಕಳೆದಿದ್ದರೂ ನಲ್ಲಿಗಳ ಜೋಡಣೆಯಾಗಿಲ್ಲ. ಜತೆಗೆ ಪೈಪ್‌ಲೈನ್ ಅಳವಡಿಕೆಗಾಗಿ ಅಗೆದಿರುವ ಸಿಸಿ ರಸ್ತೆಗಳನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ಅವ್ಯವಸ್ಥೆ, ಅನೈರ್ಮಲ್ಯ ಉಂಟಾಗಿದೆ.
ಸವಡಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು ಯೋಜನೆ ಪೂರ್ಣಗೊಳ್ಳಲು ಮತ್ತು ಜಾರಿಗೊಳ್ಳಲು ಮತ್ತಷ್ಟು ಸಮಯಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ತಾಲ್ಲೂಕಿನ ಇನ್ನುಳಿದ ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ಯೋಜನೆ ಅಡಿ ಜೆಜೆಎಂ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತಿದ್ದರೂ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಪ್ರತಿ ಎರಡು ದಿನಕ್ಕೊಮ್ಮೆ ಒಂದು ಅಥವಾ ಎರಡು ತಾಸು ನೀರು ಬಿಡಲಾಗುತ್ತಿದ್ದು, ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಸಣ್ಣಗೆ ಬರುವ ನೀರು ಎತ್ತರ ಪ್ರದೇಶದಲ್ಲಿ ಬರುವುದೇ ದುಸ್ತರವಾಗಿದೆ.
ಶುದ್ಧ ಕುಡಿಯುವ ನೀರಿಗಾಗಿ ಜೆಜೆಎಂ ನಲ್ಲಿಗಳ ಮೇಲೆ ಅವಲಂಬಿತವಾಗಿರುವ ಕೊತಬಾಳ ಗ್ರಾಮಸ್ಥರು ಜೆಜೆಎಂ ನೀರು ಪಡೆಯಲು ನಲ್ಲಿಗಳಿಗೆ ಮೋಟರ್ ಜೋಡಣೆ ಮಾಡುತ್ತಿದ್ದಾರೆ.
‘ಒಂದು ವೇಳೆ ಮೋಟಾರ್ ಜೋಡಣೆ ಮಾಡದಿದ್ದಲ್ಲಿ ನೀರು ದೊರೆಯುವುದೇ ಇಲ್ಲ’ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.ಯೋಜನೆಯ ಉದ್ದೇಶ ಸರಿಯಾಗಿದ್ದು ಅದರ ಅನುಷ್ಠಾನ ಸರಿ ಇಲ್ಲ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ –ಎಂ.ಎಚ್.ನದಾಫ ಅಧ್ಯಕ್ಷರು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ
ಯೋಜನೆಯ ಸಮರ್ಪಕ ಅನುಷ್ಠಾನ ಮತ್ತು ನೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಜರೂರಾಗಿ ಆಗಬೇಕಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸದೆ ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು–ಸೋಮು ನಾಗರಾಜ ಕೊತಬಾಳ ಗ್ರಾಮಸ್ಥ
ಯೋಜನೆಯ ಉದ್ದೇಶ ಸರಿಯಾಗಿದ್ದು ಅದರ ಅನುಷ್ಠಾನ ಸರಿ ಇಲ್ಲ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ–ಎಂ.ಎಚ್.ನದಾಫ ಅಧ್ಯಕ್ಷರು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.