ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರೋಣ: ಪರಿಸರ ಪ್ರೇಮಿ ಪೊಲೀಸ್ ಅಧಿಕಾರಿ

ಠಾಣೆ ಆವರಣದಲ್ಲಿ ಉದ್ಯಾನ ನಿರ್ಮಿಸಿದ ಪಿಎಸ್ಐ ಎಲ್.ಕೆ. ಜೂಲಕಟ್ಟಿ
ಉಮೇಶ ಬಸನಗೌಡರ್
Published 11 ಜೂನ್ 2024, 6:33 IST
Last Updated 11 ಜೂನ್ 2024, 6:33 IST
ಅಕ್ಷರ ಗಾತ್ರ

ರೋಣ: ಕೊಲೆ, ಕಳವು ಇತ್ಯಾದಿ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಹಾಗೂ ಜನರ ಸುರಕ್ಷತೆ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವುದು ಸಾಮಾನ್ಯ. ಆದರೆ ರೋಣ ಪೋಲಿಸ್ ಠಾಣೆಯ ಪಿ.ಎಸ್.ಐ ಎಲ್.ಕೆ. ಜೂಲಕಟ್ಟಿಯವರು ಕರ್ತವ್ಯದ ಜೊತೆಗೆ ಪರಿಸರ ಪ್ರೇಮವನ್ನು ಮೈಗೂಡಿಸಿಕೊಂಡು, ಪರಿಸರ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ.

ಮಳೆಗಾಲ ಪ್ರಾರಂಭವಾಗುತ್ತಿದ್ದು, ಠಾಣೆಯ ವ್ಯಾಪ್ತಿಯಲ್ಲಿ ಗಿಡಗಳ ಸುತ್ತ ಬೆಳೆದಿರುವ ಕಸ ಹಾಗೂ ಕಳೆಗಳನ್ನು ಟ್ರ್ಯಾಕ್ಟರ್ ಮೂಲಕ ಸ್ವಚ್ಛಗೊಳಿಸಿ ಭೂಮಿಯನ್ನು ಹದಗೊಳಿಸಿ ಅಲ್ಲಿರುವ ಗಿಡಗಳಿಗೆ ನೀರು, ಗೊಬ್ಬರ ಹಾಕಿ ಪಾಲನೆ ಮಾಡುತ್ತಿದ್ದಾರೆ. ಗಿಡಗಳಿಗೆ ಸಮರ್ಪಕ ನೀರು ದೊರೆಯಬೇಕು ಎಂಬ ನಿಟ್ಟಿನಲ್ಲಿ ಪೈಪ್ ಮೂಲಕ ನೀರು ಸಹ ಹರಿಸಲಾಗುತ್ತಿದೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಾಲ್ಕು ಎಕರೆ ವಿಸ್ತಾರವಾದ ಭೂಮಿಯಲ್ಲಿ ಪೊಲೀಸ್ ಠಾಣೆ ಇದ್ದು, ಠಾಣೆಯ ಸುತ್ತಲೂ ತೆಂಗು, ಬೇವು, ಮಾವು, ಅರಳಿ, ಶ್ರೀಗಂಧ, ಆಲದ ಮರ, ಹೆಬ್ಬೇವು, ನೀರಲ ಸೇರಿದಂತೆ ಅನೇಕ ಗಿಡಗಳನ್ನು ಬೆಳೆಸಲಾಗಿದೆ. ಬೇಸಿಗೆಯಲ್ಲೂ ಠಾಣೆ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಠಾಣೆಯ ಮುಂಭಾಗದಲ್ಲಿ ಸಣ್ಣ ಉದ್ಯಾನ ನಿರ್ಮಿಸಲಾಗಿದೆ. ಜೂಲಕಟ್ಟಿಯವರ ಪರಿಸರ ಪ್ರೇಮ ಹಾಗೂ ಸಿಬ್ಬಂದಿ ಸಹಕಾರದಿಂದಾಗಿ ರೋಣ ಪೊಲೀಸ್ ಠಾಣೆಯು ಜನರ ಕಣ್ಮನ ಸೆಳೆಯುತ್ತಿದೆ.

ಜನರಿಗೆ ನೆರಳು ನೀಡುವ ಮರಗಳು: ವಿವಿಧ ವ್ಯಾಜ್ಯ ಹಾಗೂ ಕೆಲಸಗಳ ನಿಮಿತ್ತ ಠಾಣೆಗೆ ಆಗಮಿಸುವ ಸಾರ್ವಜನಿಕರಿಗೆ ಗಿಡಗಳ ಕೆಳಭಾಗದಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಂತಹ ಬಿರು ಬೇಸಿಗೆಯಲ್ಲಿಯೂ ಸಮೃದ್ಧವಾಗಿ ಬೆಳೆದಿರುವ ಗಿಡಗಳು ಅವರಿಗೆ ನೆರಳು ನೀಡುವಲ್ಲಿ ಉಪಯುಕ್ತವಾಗಿವೆ. ಅಲ್ಲದೇ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಕ್ಷಿಗಳ ಕಲರವವನ್ನು ಇಲ್ಲಿ ಕಾಣಬಹುದಾಗಿದೆ.

ರೋಣ ಪೊಲೀಸ್ ಠಾಣೆ ಮುಂಭಾಗ ಹಸಿರಿನಿಂದ ಕಂಗೊಳಿಸುವ ಉದ್ಯಾನ
ರೋಣ ಪೊಲೀಸ್ ಠಾಣೆ ಮುಂಭಾಗ ಹಸಿರಿನಿಂದ ಕಂಗೊಳಿಸುವ ಉದ್ಯಾನ
ಪರಿಸರದ ಸಂರಕ್ಷಣೆ ಬಗ್ಗೆ ಪಿ.ಎಸ್.ಐ ಹೊಂದಿರುವ ಕಾಳಜಿ ಶ್ಲಾಘನೀಯ. ಎಲ್ಲರೂ ಪರಿಸರ ಬೆಳೆಸಿ ಉಳಿಸುವಲ್ಲಿ ಪ್ರಾಣಿ ಪಕ್ಷಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು.
–ಮಂಜುನಾಥ ನಾಯಕ, ಪರಿಸರ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT