ಮುಂಡರಗಿ: ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಎರಡನೇ ಅವಧಿಗೆ ನಡೆದ ಚುನಾವಣೆಯನ್ನು ಸದಸ್ಯರ ಸಂಖ್ಯಾಬಲದ ಕೊರತೆಯ ಕಾರಣದಿಂದಾಗಿ ಮುಂದೂಡಿದ ಘಟನೆ ತಾಲ್ಲೂಕಿನ ಬಿದರಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಗ್ರಾಮ ಪಂಚಾಯ್ತಿಯ ಒಟ್ಟು 12ಸದಸ್ಯರ ಪೈಕಿ ಐವರು ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸ್ಥಳದಲ್ಲಿ ಹಾಜರಿದ್ದರು. ಕೊರಂ ಭರ್ತಿಗೆ ಕನಿಷ್ಠ 6 ಸದಸ್ಯರು ಬೇಕಿತ್ತು. ಹೀಗಾಗಿ ಚುನಾವಣೆಯನ್ನು ಮುಂದೂಡಲಾಯಿತು. ಪುನಃ ಚುನಾವಣೆ ಜರುಗುವ ದಿನಾಂಕವನ್ನು ಅಧಿಕಾರಿಗಳು ನಿಗದಿಗೊಳಿಸಿಲ್ಲ.
ಬಿದರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುನೀತಾ ನಾಗಪ್ಪ ಹಾರೋಗೇರಿ ಹಾಗೂ ಕಮಲಾಕ್ಷಿ ಹನಮಂತಪ್ಪ ವರದಿ ನಾಮಪತ್ರ ಸಲ್ಲಿಸಿದ್ದರು. ಸುನೀತಾ ಅವರು ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರದ ಬಗ್ಗೆ ಕೆಲ ಗ್ರಾಮಸ್ಥರು, ಡಿಎಸ್‍ಎಸ್ ಮುಖಂಡರು ತಕರಾರು ವ್ಯಕ್ತಪಡಿಸಿದರು.
ಎರಡು ಗುಂಪಿನವರ ಗಲಾಟೆಯಿಂದಾಗಿ ಬಿದರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಪೊಲೀಸರು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದಗಳು ನಡೆದವು. ಸ್ಥಳಕ್ಕೆ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡರ, ಸಿಪಿಐ ಈರಣ್ಣ ಹಳ್ಳಿ ಹಾಗೂ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಚರ್ಚಿಸಿದರು.
ಗೊಂದಲ ಹಾಗೂ ಗಲಾಟೆಯ ಕಾರಣದಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯ ಸ್ಥಳದಲ್ಲಿ ಹಾಜರಿದ್ದ ಐವರು ಸದಸ್ಯರು ಸಹ ಹೊರನಡೆದರು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಅಗತ್ಯವಿರುವ ಕೊರಂ ಕೊರತೆಯ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣೆ ಅಧಿಕಾರಿ ವಿಶ್ವನಾಥ ಹೊಸಮನಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.