ಪ್ರತಿ ವರ್ಷದಂತೆ ವೈಶಾಖ ಬುದ್ಧ ಪೂರ್ಣಿಮಾ ಆಗಿ ಹುಣ್ಣಿಮೆ ಮೇ 23 ರಂದು ರಥೋತ್ಸವ ಶುಕ್ರವಾರ ಕಡುಬಿನ ಕಾಳಗ ಉತ್ಸವ ನೆರವೇರಲಿದೆ. ಮಠದ ಸಂಪ್ರದಾಯದಂತೆ ಕಾರ್ಯಕ್ರಮಗಳು ಜರುಗಲಿವೆ. ‘ಸರ್ವಂ ಲಿಂಗಮಯ ಇದಂ ಜಗತ್’ ಎಂದು ಅರಿತಿರುವ ಪೂಜ್ಯರು ಹಾಗೂ ಶ್ರೀಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಸಮಾಜದ ಕ್ಷೇಮಾಭಿವೃದ್ಧಿಗೆ ಭದ್ರ ಬುನಾದಿ ಧರ್ಮ ಎಂದು ಭಾವಿಸಿ ಮಠವನ್ನು ಧರ್ಮದ ನೆಲೆಯನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಮಠವನ್ನು ಅಭಿವೃದ್ಧಿ ಪಡಿಸಿದ್ದಾರೆ. ಮಠದಲ್ಲಿ ಜರುಗುವ ಸಮಾರಂಭಗಳಿಗೆ ನಾಡಿನ ಹೆಸರಾಂತ ಪೂಜ್ಯರನ್ನು ಸಾಹಿತಿಗಳನ್ನು ಕಲಾವಿದರನ್ನು ಬರಮಾಡಿಕೊಂಡು ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪ್ರತಿ ಅಮಾವಾಸ್ಯೆಯ ದಿನ ಶ್ರೀಮಠದಲ್ಲಿ ಶಿವಾನುಭವ ಕಾರ್ಯಕ್ರಮ ನಡೆಸಿ ಜ್ಞಾನದ ತಿರುಳನ್ನು ಧರ್ಮದ ಮರ್ಮವನ್ನು ಜನತೆಗೆ ತಿಳಿಸುವ ಮೂಲಕ ಸಮಾಜ ಸೇವೆ ಗೈಯುತ್ತಿದ್ದಾರೆ.
ಶ್ರೀಗಳ ಸಾಹಿತ್ಯ ಸೇವೆ
ಫಕೀರ ಸಿದ್ಧರಾಮ ಶ್ರೀಗಳು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ವರದಾನೇಶ್ವರಿ ಗುಡ್ಡಾಪುರದ ದಾನಮ್ಮ ಸದಾಚಾರ ಸಕಲೇಶ ಮಾದರಸ ಸಂಶಿ ಅಜ್ಜನವರು ಅಬಾನಾ ಎಂಬ ಕೃತಿಗಳನ್ನು ರಚಿಸಿದ್ದಾರೆ. ಹುಬ್ಬಳ್ಳಿ ಮೂರುಸಾವಿರ ಮಠದ ಗ್ರಂಥಮಾಲಾ ಪ್ರಕಾಶನದಿಂದ ಪ್ರಕಟಣೆಗೊಂಡಿವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ ವಿಭಾಗದವರು 375ನೇ ಉಪನ್ಯಾಸ ಶಿಬಿರವನ್ನು 18-2-1987 ಹಾಗೂ 19-12-1987ರಂದು ಶಿರಹಟ್ಟಿ ಮಠದಲ್ಲಿ ನಡೆಸಿ ಪೂಜ್ಯರ "ಕರ್ತೃ ಶ್ರೀ ಜಗದ್ಗುರು ಫಕ್ಕೀರೇಶ್ವರರು" ಎನ್ನುವ ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.