ಸೋಮವಾರ, ಸೆಪ್ಟೆಂಬರ್ 20, 2021
21 °C
ರಾಸಾಯನಿಕ ಗೊಬ್ಬರಗಳ ಕೊರತೆ ಇಲ್ಲ– ರುದ್ರೇಶಪ್ಪ

ಯೂರಿಯಾ ರಸಗೊಬ್ಬರ ಮಿತವಾಗಿ ಬಳಸಿ: ರೈತರಲ್ಲಿ ರುದ್ರೇಶಪ್ಪ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿ ಭೂಮಿಯ ತೇವಾಂಶ ಹೆಚ್ಚಿದೆ. ಹೀಗಾಗಿ ಕಡಿಮೆ ಪ್ರಮಾಣದ ಯೂರಿಯಾ ರಸಗೊಬ್ಬರ ಬಳಕೆ ಮಾಡಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

‘ಯೂರಿಯಾ ರಸಗೊಬ್ಬರ ಸಸ್ಯಕ್ಕೆ ಸಾರಜನಕ ಒದಗಿಸಿ ಉತ್ತಮ ಫಸಲಿಗೆ ನೆರವಾಗುತ್ತದೆ. ಅಧಿಕ ಫಸಲಿನಾಸೆಗೆ ಹೆಚ್ಚೆಚ್ಚು ಯೂರಿಯಾ ಬಳಸಿದರೆ ಬಂದಿರುವ ಬೆಳೆ ಹಾಳಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಗಿಡಗಳು ಸಾರಜನಕ ಹೀರಿಕೊಳ್ಳುವ ಪ್ರಮಾಣ ಅಧಿಕವಾಗಿದ್ದು, ಸಸ್ಯಗಳ ಶಾರೀರಿಕ ಬೆಳವಣಿಗೆ ಉತ್ತೇಜಿಸುವುದರಿಂದ ಬೆಳೆಯ ಬೆಳವಣಿಗೆಗೆ ನಿಯಂತ್ರಣ ಇರುವುದಿಲ್ಲ. ಇದರಿಂದ ಹೂವುಗಳ ಉತ್ಪಾದನೆ ಕಡಿಮೆಯಾಗಿ ಕಾಳು ಕಟ್ಟುವಿಕೆ ಸಿಮೀತಗೊಂಡು ಉತ್ಪಾದನೆ ಇಳಿಕೆ ಆಗುತ್ತದೆ. ಅಲ್ಲದೇ, ಮುಂದಿನ ಬೆಳೆಗೆ ಭೂಮಿ ತಯಾರಿ ಹಾಗೂ ಬಿತ್ತನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಸ್ಯದ ಶಾರೀರಿಕ ಬೆಳವಣಿಗೆ ಹೆಚ್ಚಾದರೆ ರೋಗ ಹಾಗೂ ಕೀಟಬಾಧೆ ಅಧಿಕವಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಇವುಗಳ ಹತೋಟಿಗಾಗಿ ರೋಗನಾಶಕ, ಕೀಟನಾಶಕ ಬಳಸಬೇಕಾದ ಅನಿವಾರ್ಯತೆಯೊಂದಿಗೆ ವ್ಯವಸಾಯದ ಖರ್ಚು ಹೆಚ್ಚುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಅವೈಜ್ಞಾನಿಕವಾಗಿ ಯೂರಿಯಾ ರಸಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಅನಗತ್ಯವಾಗಿ ಯೂರಿಯಾ ಬಳಸದೇ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ರೈತರಿಗೆ ಸಲಹೆ ನೀಡಿದ್ದಾರೆ.

‘ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರಗಳ ಕೊರತೆ ಇಲ್ಲ. ಹಾಗಾಗಿ, ರೈತರು ಆತಂಕ ಪಡಬಾರದು. ರಸಗೊಬ್ಬರ ಖರೀದಿ ಬಳಿಕ ರಶೀದಿ ಪಡೆದುಕೊಳ್ಳಬೇಕು. ರಸಗೊಬ್ಬರವನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಜಾರಿದಳ ಮೊಬೈಲ್ ಸಂಖ್ಯೆ 86187 42613ಕ್ಕೆ ಸಂಪರ್ಕಿಸಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು