ಸೋಮವಾರ, ಸೆಪ್ಟೆಂಬರ್ 16, 2019
29 °C

ಬೆಂಕಿ ಆಕಸ್ಮಿಕ:ಸುಟ್ಟು ಭಸ್ಮವಾದ ಬಾಳೆ ತೋಟ

Published:
Updated:
Prajavani

ಮುಂಡರಗಿ: ಬಾಳೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಪುರಸಭೆ ವ್ಯಾಪ್ತಿಯ ಹೆಸರೂರ ರಸ್ತೆಯಲ್ಲಿರುವ ಎಸ್.ವಿ.ಪಾಟೀಲ ಅವರ ಜಮೀನಿನಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

4 ಎಕರೆ ನೀರಾವರಿ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ಫಲ ಕೊಡುವ ಹಂತದಲ್ಲಿತ್ತು. ಘಟನೆಯಲ್ಲಿ 4,500ಕ್ಕೂ ಹೆಚ್ಚು ಬಾಳೆ ಗಿಡಗಳು ಮತ್ತು ಹನಿ ನೀರಾವರಿ ಸಲಕರಣೆಗಳು ಸುಟ್ಟು ಹೋಗಿವೆ.

'ಕೊಯ್ಲಿಗೆ ಬಂದಿದ್ದ ಬಾಳೆ ತೋಟಕ್ಕೆ ಬೆಂಕಿ ಬಿದ್ದು ಸಂಪೂರ್ಣವಾಗಿ ನಾಶವಾಗಿರುವುದು ತೀವ್ರ ನೋವು ತಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಯಿತು. ಕೇವಲ ಒಂದು ವಾಹನದಲ್ಲಿ ಜಮೀನಿಗೆ ಆಗಮಿಸಿದ ಸಿಬ್ಬಂದಿ, ಜಮೀನಿನ ಒಂದು ಬದಿಯ ಬೆಂಕಿಯನ್ನು ನಂದಿಸುವಷ್ಟರಲ್ಲಿ ವಾಹನದಲ್ಲಿದ್ದ ನೀರು ಖಾಲಿಯಾಯಿತು. ಪರ್ಯಾಯ ವ್ಯವಸ್ಥೆ ಇಲ್ಲದ್ದರಿಂದ ಹಾನಿ ಹೆಚ್ಚಿತು’ ಎಂದು ಜಮೀನಿನ ಮಾಲೀಕ ಎಸ್.ವಿ.ಪಾಟೀಲ ಹೇಳಿದರು.

ಘಟನಾ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಕಂದಾಯ ನಿರೀಕ್ಷಕ ಎಚ್.ಎಂ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಆಕಸ್ಮಿಕದಿಂದ ಆಗಿರುವ ಬೆಳೆಹಾನಿಗೆ ಪರಿಹಾರ ನೀಡಲು ಅವಕಾಶವಿಲ್ಲ. ಬಾಳೆಗಿಡ ಮತ್ತು ಹನಿ ನೀರಾವರಿ ಪೈಪ್‍ಗೆ ಸಬ್ಸಿಡಿ ನೀಡುವ ಮೂಲಕ ಅನುಕೂಲ ಮಾಡಿಕೊಡಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದರು.

Post Comments (+)