ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಹ: ಶಾಶ್ವತ ಪರಿಹಾರ ಯಾವಾಗ?

ಅಪಾರ ಬೆಳೆ ಹಾನಿ: ಪುಡಿಗಾಸಿನ ಪರಿಹಾರ– 17 ಗ್ರಾಮಗಳ ಸಂತ್ರಸ್ತರ ಅಳಲು
Published : 12 ಆಗಸ್ಟ್ 2024, 6:03 IST
Last Updated : 12 ಆಗಸ್ಟ್ 2024, 6:03 IST
ಫಾಲೋ ಮಾಡಿ
Comments

ನರಗುಂದ: ಬಯಲುಸೀಮೆ ಪ್ರದೇಶವಾದ ನರಗುಂದ ತಾಲ್ಲೂಕು ಅರೆ ನೀರಾವರಿ ಹೊಂದಿದ್ದು, ನೀರು ಹಾಯಿಸಿ ಒಂದು ಬೆಳೆ ಬೆಳೆಯಲು ಹರಸಾಹಸ ಪಡಬೇಕಿದೆ. ಅರೆ ನೀರಾವರಿಗೆ ಸವದತ್ತಿ ಬಳಿಯ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯ ತಾಲ್ಲೂಕಿನ 15 ಗ್ರಾಮಗಳಿಗೆ ವರವಾದರೆ, 10 ಗ್ರಾಮಗಳಿಗೆ ಶಾಪವಾಗಿ ಪರಿಣಮಿಸುತ್ತಿದೆ.

ತಾಲ್ಲೂಕಿನಲ್ಲಿ ಮಳೆ ಆಗದಿದ್ದರೂ ಮಲಪ್ರಭೆಯ ಮೇಲ್ಭಾಗದಲ್ಲಿ ಖಾನಾಪುರದ ಕಣಕುಂಬಿಯ ಬಳಿ ಅತಿಯಾಗಿ ಮಳೆ ಬಿದ್ದರೆ ನವಿಲುತೀರ್ಥ ಜಲಾಶಯ ಭರ್ತಿಯಾಗುತ್ತದೆ. ಆದರೆ ವಾಡಿಕೆಗೂ ಮೀರಿ ಮಳೆ ಬಿದ್ದಾಗ ಈ ಜಲಾಶಯದ ಭರ್ತಿಯಾಗಿ ನೀರು ಹೊರಬಿಡಲಾಗುತ್ತದೆ. ಇದರ ಪರಿಣಾಮ ತಾಲ್ಲೂಕಿನ ಗ್ರಾಮಗಳು ಮಲಪ್ರಭಾ ಪ್ರವಾಹಕ್ಕೆ ತುತ್ತಾಗುತ್ತವೆ. ಬೆಳೆ ಹಾನಿಯಾಗಿ, ಕೆಲವು ಮನೆಗಳಿಗೆ ನೀರು ಕೂಡ ನುಗ್ಗುತ್ತದೆ.

ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ ಎಂಬ ಮಾತು ಮಲಪ್ರಭಾ ಪ್ರವಾಹಕ್ಕೆ ಒಳಗಾಗುವ ತಾಲ್ಲೂಕಿನ ಕೊಣ್ಣೂರ ಸುತ್ತಲಿನ 9 ಗ್ರಾಮಗಳು, ಬೆಣ್ಣೆಹಳ್ಳದ ಪ್ರವಾಹಕ್ಕೆ ಒಳಗಾಗುವ 8 ಗ್ರಾಮಗಳಿಗೆ ನಿಜ ಎನಿಸುತ್ತದೆ. ಕಳೆದವಾರ ಕಣಕುಂಬಿಯಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ನವಿಲುತೀರ್ಥ ಜಲಾಶಯ ಭರ್ತಿ ಹಂತಕ್ಕೆ ಬಂದಿದೆ. ಇದರ ಪರಿಣಾಮ ನಾಲ್ಕು ದಿನಕ್ಕೂ ಹೆಚ್ಚು ಕಾಲ 15,000 ಕ್ಯುಸೆಕ್‌ ನೀರು ಹೊರಬಿಟ್ಟಿದ್ದರಿಂದ ಲಕಮಾಪುರ, ವಾಸನ, ಬೆಳ್ಳೇರಿ, ಕೊಣ್ಣೂರ, ಹಳೆ ಬೂದಿಹಾಳ ಗ್ರಾಮಗಳು ಪ್ರವಾಹದ ತೊಂದರೆಗೆ ಒಳಗಾದವು. ಅಪಾರ ಬೆಳೆ ಹಾನಿ ಉಂಟಾದರೆ ಲಕಮಾಪುರ ಗ್ರಾಮದ ನಾಲ್ಕು ಮನೆಗಳಿಗೆ ನೀರು ನುಗ್ಗಿ ಆ ನಾಲ್ಕು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಹಳೆ ಬೂದಿಹಾಳದಲ್ಲಿದ್ದ ಕೆಲವು ಕುಟುಂಬಗಳು ಪ್ರವಾಹ ಬರುತ್ತಲೇ ತಮ್ಮ ಸಾಮಾನುಗಳೊಂದಿಗೆ ನವ ಗ್ರಾಮಕ್ಕೆ ಬಂದವು. ಕೊಣ್ಣೂರ ಸುತ್ತಮುತ್ತಲಂತೂ ಮಲಪ್ರಭಾ ಪ್ರವಾಹ ತೋಟದ ಬೆಳೆಗಳನ್ನು ಸಂಪೂರ್ಣ ಆಪೋಶನ ಪಡೆದಿದೆ.

2019ರ ಪ್ರವಾಹದ ತೊಂದರೆ, ಹಾನಿ ನೆನಪು ಹಾಗೆ ಇರುವಾಗ ಮತ್ತೇ ಪ್ರವಾಹದ ಛಾಯೆ ಉಂಟಾಗಿದೆ. ಜತೆಗೆ ಆ ಸಂದರ್ಭದಲ್ಲಿ ಆಗಸ್ಟ್‌ ಕೊನೆ ಮತ್ತು ಸೆಪ್ಟೆಂಬರ್‌ ಮಧ್ಯದಲ್ಲಿ ಪ್ರವಾಹ ಸಂಭವಿಸಿತ್ತು. ಈಗ ಜುಲೈ ಅಂತ್ಯದಲ್ಲಿಯೇ ಪ್ರವಾಹ ಬಂದಿದ್ದು, ಮುಂದೆ ಇನ್ನೂ ಎಷ್ಟರ ಮಟ್ಟಿಗೆ ಪ್ರವಾಹ ಬರಬಹುದು ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ಜಲಾಶಯ ಸಾಮರ್ಥ್ಯ: ನವಿಲುತೀರ್ಥ ಜಲಾಶಯದ ಸಾಮರ್ಥ್ಯ 2,079 ಅಡಿ ಇದ್ದು, 37 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದೆ. ಈಗಾಗಲೇ 34 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಮುಂದೆ ಆಗುವ ಅನಾಹುತ ತಪ್ಪಿಸಲು ಮುಂಗಡ ನೀರು ಬಿಟ್ಟು ಪ್ರವಾಹ ಉಂಟಾಗುವಂತಾಯಿತು. ಇದರಿಂದ ಬೆಳೆ ಸಂಪೂರ್ಣ ಹಾನಿಯಾಗಿದೆ.

ಲಕಮಾಪುರ ಬೆಳೆ ಹಾನಿ:

ನವಿಲುತೀರ್ಥ ಜಲಾಶಯ ಭರ್ತಿಯಾದ ತಕ್ಷಣ ತೊಂದರೆಗೆ ಒಳಗಾಗುವ ಮೊದಲ ಗ್ರಾಮ ಲಕಮಾಪುರ. ಇದು ಕಳೆದ ಬಾರಿ ಬಂದ ಪ್ರವಾಹಕ್ಕೆ ಸಾಕಷ್ಟು ತೊಂದರೆ ಅನುಭವಿಸಿ ನಡುಗಡ್ಡೆಯಂತಾಗಿತ್ತು. ಆದರೆ, ಗ್ರಾಮ ಪ್ರವೇಶದ ಆರಂಭದಲ್ಲಿಯೇ ಇರುವ ಹೊಳೆಗೆ ಹೊಸದಾಗಿ ಸೇತುವೆ ನಿರ್ಮಿಸಿದ ಪರಿಣಾಮ ಅಷ್ಟಾಗಿ ತೊಂದರೆ ಆಗಲಿಲ್ಲ. ಆದರೆ, ಗ್ರಾಮದ ಹೊಳೆಗೆ ಸಮೀಪವಿರುವ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದರಿಂದ ಆ ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆಯಲಾಗಿತ್ತು. ಆದರೆ ಗ್ರಾಮದಲ್ಲಿನ ಸಂಬಂಧಿಕರ ಮನೆಯಲ್ಲಿ ಉಳಿದು ನೀರು ಕಡಿಮೆಯಾದ ನಂತರ ಮರಳಿದರು. ಅವರಿಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಜಿಲ್ಲಾಡಳಿತ ವಿತರಿಸಿತ್ತು.

ಸ್ಥಳಾಂತರದ ಬೇಡಿಕೆ:

ಲಕಮಾಪುರ ಗ್ರಾಮವನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆ ಎರಡು ದಶಕಗಳಿಂದ ಇದೆ. ಆದರೆ, ಅವರು ಗ್ರಾಮಕ್ಕೆ ಸಮೀಪವಿರುವ ಜಾಗದಲ್ಲಿಯೇ ನಮಗೆ ನವಗ್ರಾಮ ನಿರ್ಮಿಸಬೇಕು ಎಂದು ಆಗ್ರಹಿಸುತ್ತಾರೆ. ಆದರೆ ಗ್ರಾಮ ಗದಗ ಜಿಲ್ಲೆಯಲ್ಲಿ, ಗ್ರಾಮಸ್ಥರು ಬೇಡುವ ಜಾಗ ಬೆಳಗಾವಿ ಜಿಲ್ಲೆಯಲ್ಲಿ. ಇದರಿಂದ ಸ್ಥಳಾಂತರ ಆಡಳಿತಾತ್ಮಕವಾಗಿ ಕಗ್ಗಂಟಾಗಿ ಉಳಿದಿದೆ. ಈ ಸಲ ಕಡಿಮೆ ನೀರು, ಹೊಸ ಸೇತುವೆ ನಿರ್ಮಾಣದಿಂದ ತೊಂದರೆ ಉಂಟಾಗಿಲ್ಲ. 50 ಸಾವಿರ ಕ್ಯುಸೆಕ್‌ ನೀರು ಹೊರ ಬಂದರೆ ಲಕಮಾಪುರ ಸಂಕಷ್ಟಕ್ಕೆ ಈಡಾಗುವುದು ನಿಶ್ಚಿತ. ಈ ಸಲದ ಪ್ರವಾಹಕ್ಕೆ 500 ಎಕರೆಯಲ್ಲಿನ ಮೆಕ್ಕೆಜೋಳ, ಕಬ್ಬು, ಪೇರಲ, ತರಕಾರಿ ಹಾನಿಯಾಗಿದೆ.

ಪ್ರವಾಹದ ನೀರು ವಾಸನ ಗ್ರಾಮಕ್ಕೆ ಪ್ರವೇಶ ಮಾಡುವುದು ಕಡಿಮೆ. ಆದರೆ 70 ಸಾವಿರ ಕ್ಯುಸೆಕ್‌ ನೀರು ಬಿಟ್ಟರೆ ತೊಂದರೆ ಉಂಟಾಗುತ್ತದೆ. ಈಗ ಬಂದ ಪ್ರವಾಹಕ್ಕೆ 450 ಎಕರೆಯಲ್ಲಿನ ಕಬ್ಬು, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಕೆಲವು ದಶಕಗಳ ಹಿಂದೆ ಸ್ಥಳಾಂತರಗೊಂಡಿದೆ. ಈಗ ಪ್ರವಾಹ ಹೆಚ್ಚಾಗುತ್ತಿರುವುದರಿಂದ ಮತ್ತೆ ಸ್ಥಳಾಂತರದ ಬೇಡಿಕೆ ಇಟ್ಟಿದ್ದಾರೆ.

ಬೆಳ್ಳೇರಿ, ಕಪಲಿ ಗ್ರಾಮಗಳಲ್ಲಿ ಪ್ರವಾಹದಿಂದ ಬೆಳೆ ಹಾನಿಯಾಗಿದೆ. ಕೊಣ್ಣೂರ ಗ್ರಾಮದಲ್ಲಿ ಖಾಜಿ ಓಣಿಗೆ ನೀರು ಹರಿದು ತೊಂದರೆ ಉಂಟಾಗಿದೆ. 1 ಸಾವಿರ ಎಕರೆಯಲ್ಲಿನ ಮೆಕ್ಕೆಜೋಳ, ಹೆಸರು, ಪೇರಲ ಬೆಳೆ ಹಾನಿಯಾಗಿವೆ.

ಈಗಾಗಲೇ ಬೂದಿಹಾಳ ಗ್ರಾಮ ಸ್ಥಳಾಂತರಗೊಂಡಿದೆ. ಕೆಲವರು ಮನೆಗಳಿಲ್ಲದ ಪರಿಣಾಮ ಹಳೆ ಬೂದಿಹಾಳದಲ್ಲಿಯೇ ವಾಸಿಸುವಂತಾಗಿದೆ. ವಿಶೇಷವಾಗಿ ತರಕಾರಿ ಬೆಳೆಯುವ ಈ ಗ್ರಾಮಗಳು ಅಪಾರ ಹಾನಿಯುಂಟಾಗಿ 500 ಎಕರೆಗೂ ಹೆಚ್ಚು ಹಾನಿಯಾಗಿದೆ. ಹಳೆ ಬೂದಿಹಾಳ ಗ್ರಾಮಕ್ಕೆ ತೆರಳುವ ರಸ್ತೆ ಕಿತ್ತು ಹೋಗಿದೆ. ಜಮೀನುಗಳಿಗೆ ತೆರಳಲು ತೊಂದರೆ ಪಡುವಂತಾಗಿದೆ.

ನರಗುಂದ ತಾಲ್ಲೂಕಿನ ಲಕಮಾಪುರಕ್ಕೆ ಮಲಪ್ರಭಾ ಪ್ರವಾಹದ ನೀರು ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನ ಲಕಮಾಪುರಕ್ಕೆ ಮಲಪ್ರಭಾ ಪ್ರವಾಹದ ನೀರು ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನಲ್ಲಿ ಮಲಪ್ರಭಾ ಪ್ರವಾಹದ ನೀರು ಹರಿಯುತ್ತಿರುವ ದೃಶ್ಯ
ನರಗುಂದ ತಾಲ್ಲೂಕಿನಲ್ಲಿ ಮಲಪ್ರಭಾ ಪ್ರವಾಹದ ನೀರು ಹರಿಯುತ್ತಿರುವ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳದ ಸಂಪರ್ಕ ರಸ್ತೆ ಕಿತ್ತು ಹೋಗಿರುವುದು
ನರಗುಂದ ತಾಲ್ಲೂಕಿನ ಬೂದಿಹಾಳದ ಸಂಪರ್ಕ ರಸ್ತೆ ಕಿತ್ತು ಹೋಗಿರುವುದು
ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿ ಮಲಪ್ರಭಾ ಪ್ರವಾಹ ತೋಟಗಳಿಗೆ ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿ ಮಲಪ್ರಭಾ ಪ್ರವಾಹ ತೋಟಗಳಿಗೆ ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳ ರಸ್ತೆ ಸ್ಛಗಿತಗೊಂಡಿದ್ದ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳ ರಸ್ತೆ ಸ್ಛಗಿತಗೊಂಡಿದ್ದ ದೃಶ್ಯ
ನರಗುಂದ ತಾಲ್ಲೂಕಿನ ಮಲಪ್ರಭಾ ಪ್ರವಾಹದ ದೃಶ್ಯ
ನರಗುಂದ ತಾಲ್ಲೂಕಿನ ಮಲಪ್ರಭಾ ಪ್ರವಾಹದ ದೃಶ್ಯ
ಮಲ್ಲನಗೌಡ ಪಾಟೀಲ
ಮಲ್ಲನಗೌಡ ಪಾಟೀಲ
ಶಿವಾನಂದ ಗಾಳಪ್ಪನವರ
ಶಿವಾನಂದ ಗಾಳಪ್ಪನವರ
ಶ್ರೀಶೈಲ ತಳವಾರ
ಶ್ರೀಶೈಲ ತಳವಾರ
ಮಲಪ್ರಭಾ ಪ್ರವಾಹ ತೊಂದರೆ ನಿವಾರಿಸಲು ಮಲಪ್ರಭಾ ಹೊಳೆಯನ್ನು ನಾಲ್ಕು ಕಿ.ಮೀ. ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತಾವ ಸಲ್ಲಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
–ಎಚ್.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರು
ಬೂದಿಹಾಳ ಗ್ರಾಮದ ಜನರಿಗೆ ನವ ಗ್ರಾಮ ನಿರ್ಮಿಸಲಾಗಿದೆ. ಆದರೆ ಅಲ್ಲಿ ನಾಲ್ಕು ಕುಟುಂಬಗಳಿಗೆ ಮನೆ ಹಂಚಿಕೆಯಾಗಿಲ್ಲ. ಅವರಿಗೆ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
–ಮಂಜುನಾಥ್ ಗಣಿ ಪಿಡಿಒ ಗ್ರಾಮ ಪಂಚಾಯಿತಿ ಕೊಣ್ಣೂರ

ಯಾರು ಏನಂತಾರೆ?

ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಕೊಡಲಿ ನಮ್ಮ ಗ್ರಾಮ ಸ್ಥಳಾಂತರವಾಗಿ ದಶಕ ಕಳೆದಿದೆ. ಇಡೀ ಗ್ರಾಮದಲ್ಲಿ ನಮ್ಮದು ದೊಡ್ಡ ಕುಟುಂಬ. ಆದರೆ ನಮ್ಮ ತಂದೆ ಹೆಸರಿನಲ್ಲಿ ಒಂದೇ ಮನೆ ನೀಡಿದ್ದಾರೆ. ನಾವು ಎಂಟು ಜನ ಸಹೋದರರಿದ್ದೇವೆ. ನವಗ್ರಾಮದಲ್ಲಿ ನಮಗೆ ಮನೆ ವಿತರಿಸಿಲ್ಲ. ನವಗ್ರಾಮದಲ್ಲಿ ಸಾಕಷ್ಟು ನಿವೇಶನ ಖಾಲಿ ಇವೆ. ಆದರೂ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಮನೆ ನೀಡುವ ಬಗ್ಗೆ ಗಮನಹರಿಸಿಲ್ಲ. ಈ ಕಾರಣದಿಂದಗಿ ಹಳೆ ಬೂದಿಹಾಳದಲ್ಲಿ ವಾಸಿಸುವಂತಾಗಿದೆ. ಪ್ರವಾಹ ಬಂದರೆ ನಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಜೊತೆಗೆ ಹಾನಿಯಾದ ಬೆಳೆಗೆ ಒಂದು ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕು – ಮಲ್ಲನಗೌಡ ಪಾಟೀಲ ಹಳೆ ಬೂದಿಹಾಳ ವಾಸನ ಗ್ರಾಮ ಸ್ಥಳಾಂತರಿಸಿ ವಾಸನ ಗ್ರಾಮವು ಮಲಪ್ರಭಾ ಪ್ರವಾಹಕ್ಕೆ ತೊಂದರೆಗೆ ಒಳಗಾಗುತ್ತಿದೆ. ಆದ್ದರಿಂದ ಸ್ಥಳಾಂತರ ಮಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿ ನಿರಂತರವಾಗಿದೆ. ಎಕರೆಗೆ ₹50 ಸಾವಿರ ಬೆಳೆ ಹಾನಿ ಪರಿಹಾರ ವಿತರಿಸಬೇಕು –ಶಿವಾನಂದ ಗಾಳಪ್ಪನವರ ರೈತ ವಾಸನ ಹೆಚ್ಚು ನೀರು ಬಂದರೆ ತೊಂದರೆ ಈಚೆಗಿನ ಪ್ರವಾಹಕ್ಕೆ ಬೆಳೆ ಹಾನಿಯಾಗಿದೆ. ಸ್ಥಳಾಂತರದ ಬೇಡಿಕೆ ಇದೆ ಆದರೆ ಈಡೇರಿಲ್ಲ. 50 ಸಾವಿರ ಕ್ಯುಸೆಕ್‌ ನೀರು ಬಂದರೆ ತೊಂದರೆಯಾಗುತ್ತದೆ –ಬಸನಗೌಡ ನಡಮನಿ ಗ್ರಾಮ ಪಂಚಾಯಿತಿ ಸದಸ್ಯ ಲಕಮಾಪುರ ಪರಿಹಾರ ಒದಗಿಸಲು ಕ್ರಮ ಪ್ರವಾಹವನ್ನು ಸಮರ್ಥವಾಗಿ ಎದುರಿಸಲು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಡ್ರೋಣ್ ಕ್ಯಾಮೆರಾ ಮೂಲಕ ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದೆ. ಬೆಳೆ ಹಾನಿ ಸಮೀಕ್ಷೆ ವರದಿ ಆಧರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಮನೆ ಸಮಸ್ಯೆ ಪರಿಶೀಲಿಸಲಾಗುವುದು –ಶ್ರೀಶೈಲ ತಳವಾರ ತಹಶೀಲ್ದಾರ್ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT