ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರ ಮಟ್ಟದ ಸಾಧನೆ; ಓಟದಲ್ಲಿ ರೈತನ ಮಗಳ ಮಿಂಚು

ಅಕ್ಷರ ಗಾತ್ರ

ನರೇಗಲ್:‌ ಕಲಿಕೆಯೊಂದಿಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಿ ಸತತ ಪರಿಶ್ರಮದಿಂದ ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ ನರೇಗಲ್‌ ಹೋಬಳಿಯ ನಿಡಗುಂದಿಕೊಪ್ಪ ಗ್ರಾಮದ ರೈತ ಅಶೋಕ ಅಳೆಹೊನ್ನಪ್ಪನವರ ಮಗಳು ಶ್ವೇತಾ ಅಳೆಹೊನ್ನಪ್ಪನವರ.

ಸ್ಥಳೀಯ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಅಭ್ಯಾಸ ಮಾಡುವಾಗ ಇಲ್ಲಿನ ಉಪನ್ಯಾಸಕರ ಪ್ರೋತ್ಸಾಹದೊಂದಿಗೆ ಅಟ್ಯಾಪಟ್ಯಾ ಆಟವನ್ನು ಆರಂಭ ಮಾಡಿದರು. ಒಡಿಶಾದಲ್ಲಿ ನಡೆದ ರಾಷ್ಟ್ರ ಮಟ್ಟದ ಅಟ್ಯಾಪಟ್ಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಂಚು ಮೂಡಿಸಿದರು. ಸದ್ಯ ಧಾರವಾಡದ ಜೆಎಸ್‌ಎಸ್ ಮಹಾವಿದ್ಯಾಲಯದಲ್ಲಿ ಬಿಸಿಎ ಪದವಿ ಕಲಿಯುತ್ತಿರುವ ಶ್ವೇತಾ ಅಲ್ಲಿನ ತರಬೇತುದಾರ ಗಣೇಶ ನಾಯಕ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಅಥ್ಲೆಟಿಕ್ಸ್‌ ವಿಭಾಗಕ್ಕೆ ಹೆಚ್ಚಿನ ಆಸಕ್ತಿ ನೀಡಿದ್ದಾರೆ. ವಿಶ್ವವಿದ್ಯಾಲಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ 800 ಮೀಟರ್‌, 1,500 ಮೀಟರ್‌, 3,000 ಮೀಟರ್‌, 5,000 ಮೀಟರ್‌ ಓಟ ಹಾಗೂ ಕ್ರಾಸ್‌ ಕಂಟ್ರಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಮಿಂಚಿನ ಓಟಗಾರ್ತಿ ಎಂದು ಹೆಸರು ಮಾಡಿದ್ದಾರೆ.

ಪಟ್ಟಣದ ಪಿಎಸ್‌ಎಸ್ ಪ್ರೌಢಶಾಲೆಯಲ್ಲಿ ಕಲಿಯುವಾಗ 8ನೇ ತರಗತಿಯಿಂದಲೇ ಆಟದ ಕಡೆ ಆಸಕ್ತಿ ವಹಿಸಿದ್ದ ಶ್ವೇತಾ, ಹೆಚ್ಚಿನ ಸಮಯವನ್ನು ಕ್ರೀಡಾಂಗಣದಲ್ಲಿ ಕಳೆದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕುಟುಂಬದವರ ಸಹಕಾರದೊಂದಿಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲಾ ತಂಡಗಳನ್ನು ರಾಜ್ಯ ಮಟ್ಟದವರೆಗೆ ಪ್ರತಿನಿಧಿಸುವ ಮೂಲಕ ಗಮನ ಸೆಳೆದಿದ್ದಾರೆ. ರಾಷ್ಟ್ರ ಮಟ್ಟದ ಸ್ಪರ್ಧೆಯವರೆಗೆ ತಲುಪಬೇಕು ಎನ್ನುವ ಛಲದೊಂದಿಗೆ ಶ್ರದ್ಧೆ ವಹಿಸಿ ಪದವಿ ಕಲಿಯುವಾಗಲೇ ಆ ಸಾಧನೆ ಮಾಡುವ ಮೂಲಕ ಇತರರಿಗೂ ಸ್ಫೂರ್ತಿಯಾಗಿದ್ದಾರೆ.

ಧಾರವಾಡ ವಿಶ್ವವಿದ್ಯಾಲಯದಲ್ಲಿ ನಡೆದ 800 ಮೀಟರ್‌, 1,500 ಮೀಟರ್‌ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಉಡುಪಿಯಲ್ಲಿ ನಡೆದ 5,000 ಮೀಟರ್‌ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ 3,000 ಮೀಟರ್‌ ಸ್ಟಿಪಲ್‌ ಚೆಸ್‌ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಸ್ಸಾಂನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಚಂಡೀಗಡದಲ್ಲಿ ನಡೆದ 6 ಕಿ.ಮೀ. ದೂರದ ಕ್ರಾಸ್‌ ಕಂಟ್ರಿ ವಿಭಾಗದ ಸ್ಪರ್ಧೆಯಲ್ಲೂ ಪ್ರಶಸ್ತಿ ಪಡೆದಿದ್ದಾರೆ.

ಹೀಗೆ ದಿನವೂ ಕಠಿಣ ತಯಾರಿ ನಡೆಸುವ ಶ್ವೇತಾ ಓಟದಲ್ಲಿ ಈವರೆಗೂ ನಿಂತಿರುವ ಉದಾಹರಣೆ ಇಲ್ಲ. ಭಾಗವಹಿಸಿದ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆಯುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಥ್ಲೆಟಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಚಾಂಪಿಯನ್‌ಷಿಪ್‌ ಪಡೆಯಬೇಕು. ಅದಕ್ಕಾಗಿ ನಿರಂತರ ತಾಲೀಮು ನಡೆಸಿದ್ದೇನೆ’ ಎಂದು ಶ್ವೇತಾ ಅಭಿಪ್ರಾಯ ವ್ಯಕ್ತಪಡಿಸಿದರು.

*

ಸತತ ಪ್ರಯತ್ನದಿಂದ ಕಠಿಣ ಶ್ರಮವಹಿಸಿ ದೇಶಕ್ಕೆ ಪದಕ ಗೆದ್ದುಕೊಡಬೇಕು ಎನ್ನುವುದು ನನ್ನ ದೊಡ್ಡ ಆಸೆ.
-ಶ್ವೇತಾ ಅಳೆಹೊನ್ನಪ್ಪನವರ, ಓಟಗಾರ್ತಿ

*

ಗ್ರಾಮೀಣ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಸಿಕ್ಕಲ್ಲಿ ಓಟದ ಸ್ಪರ್ಧೆಯಲ್ಲಿ ಅಂತತರಾಷ್ಟ್ರೀಯ ಮಟ್ಟದ ಸಾಧನೆ ಮಾಡುತ್ತಾಳೆ.
-ಆರ್.‌ಎಸ್.‌ನರೇಗಲ್‌, ದೈಹಿಕ ಶಿಕ್ಷಣ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT