ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ |ನಾಲ್ವರ ಬರ್ಬರ ಹತ್ಯೆ; ಬೆಚ್ಚಿಬಿದ್ದ ಜನತೆ

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿ ನಾಲ್ವರ ಕೊಲೆ
ಕೆ.ಎಂ.ಸತೀಶ್‌ ಬೆಳ್ಳಕ್ಕಿ
Published 20 ಏಪ್ರಿಲ್ 2024, 5:55 IST
Last Updated 20 ಏಪ್ರಿಲ್ 2024, 5:55 IST
ಅಕ್ಷರ ಗಾತ್ರ

ಗದಗ: ನಗರದ ದಾಸರ ಓಣಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದ ನಾಲ್ವರ ಬರ್ಬರ ಹತ್ಯೆ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಒತ್ತೊತ್ತಿಗೆ ಮನೆಗಳು ಇರುವ ಪ್ರದೇಶದಲ್ಲೇ ಭೀಕರ ಹತ್ಯೆ ನಡೆದಿದ್ದು ಆತಂಕ ಉಂಟು ಮಾಡಿದೆ.

ಗದಗ–ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್‌ ಬಾಕಳೆ (27), ಕೊಪ್ಪಳದ ಭಾಗ್ಯನಗರ ನಿವಾಸಿಗಳಾದ ಪರುಶುರಾಮ (58), ಅವರ ಪತ್ನಿ ಲಕ್ಷ್ಮಿಬಾಯಿ (50) ಮತ್ತು ಪುತ್ರಿ ಆಕಾಂಕ್ಷಾ (17) ಕೊಲೆಯಾದವರು.  ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪರುಶುರಾಮ ಅವರು ಪ್ರಕಾಶ್‌ ಬಾಕಳೆ ಅವರ ಮೊದಲ ಪತ್ನಿ ರುಕ್ಮಿಣಿ ಅವರ ಸಹೋದರ. ಪರುಶುರಾಮ ಮತ್ತು ಲಕ್ಷ್ಮೀಬಾಯಿ ದಂಪತಿಗೆ ಮಕ್ಕಳಿಲ್ಲದ ಕಾರಣ ಆಕಾಂಕ್ಷಾಳನ್ನು ದತ್ತು ತೊಗೊಂಡು ಪೋಷಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕಾರ್ತಿಕ್‌ ಬಾಕಳೆ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಪರಶುರಾಮ ಹೋಟೆಲ್ ಉದ್ಯಮಿಯಾಗಿದ್ದು, ಎರಡು ಬಾರಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನದ ಚುನಾವಣೆಗೆ ಬಿಜೆಪಿಯಿಂದ  ಸ್ಪರ್ಧಿಸಿ ಸೋತಿದ್ದರು‌. ಲಕ್ಷ್ಮಿಬಾಯಿ ಒಮ್ಮೆ ನಾಮನಿರ್ದೇಶಿತ ಸದಸ್ಯೆಯಾಗಿದ್ದರು.

ಜನ್ಮದಿನ ಆಚರಿಸಿಕೊಂಡಿದ್ದ ಲಕ್ಷ್ಮಿಬಾಯಿ: ಪ್ರಕಾಶ್‌ ಬಾಕಳೆ ಹಾಗೂ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ ಅವರ ನಿಶ್ಚಿತಾರ್ಥ ಮಾತುಕತೆ ಸಮಾರಂಭಕ್ಕಾಗಿ ಏ‌ಪ್ರಿಲ್ 17ರಂದು ಪರುಶುರಾಮ, ಲಕ್ಷ್ಮಿಬಾಯಿ ಮತ್ತು ಆಕಾಂಕ್ಷಾ ಗದಗ ನಗರಕ್ಕೆ ಬಂದಿದ್ದರು. ಲಕ್ಷ್ಮೇಶ್ವರದಲ್ಲಿ ನಡೆದಿದ್ದ ಮಾತುಕತೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಏಪ್ರಿಲ್ 18ರಂದು ಲಕ್ಷ್ಮೀಬಾಯಿ ಅವರು ಗದುಗಿನಲ್ಲೇ ಜನ್ಮದಿನ ಆಚರಿಸಿಕೊಂಡಿದ್ದರು. ರಾತ್ರಿ ಕೊಪ್ಪಳಕ್ಕೆ ತೆರಳಲು ಗದುಗಿನ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ರೈಲು ಸಿಗದ ಕಾರಣ ಪ್ರಕಾಶ್ ಬಾಕಳೆ ಮನೆಗೆ ಮರಳಿದ್ದರು.

‘ಹಂತಕರು ಮನೆಯ ಹಿಂಬದಿಯಲ್ಲಿರುವ ಕಿಟಕಿ ಅಥವಾ ಟೆರೇಸ್‌ ಮೇಲಿನಿಂದ ಕೆಳಗಿಳಿದು ಮನೆ ಪ್ರವೇಶಿಸಿರುವ ಸಾಧ್ಯತೆಗಳಿವೆ. ಮೊದಲ ಮಹಡಿಯಲ್ಲಿದ್ದ ಕಾರ್ತಿಕ್‌ ಮತ್ತು ಪರುಶುರಾಮ ಅವರನ್ನು ಹತ್ಯೆ ಮಾಡಿ, ಬಳಿಕ ಕೆಳಗಿನ ಕೋಣೆಯಲ್ಲಿದ್ದ ಲಕ್ಷ್ಮಿಬಾಯಿ ಮತ್ತು ಆಕಾಂಕ್ಷಾಳನ್ನು ಹತ್ಯೆ ಮಾಡಿರುವ ಸಾಧ್ಯತೆಗಳಿವ. ಗುರುವಾರ ಮಧ್ಯರಾತ್ರಿ 2 ಗಂಟೆಯಿಂದ 2.45ರ ಒಳಗೆ ಕೊಲೆ ನಡೆದಿದ್ದು, ಜನರು ಗಾಢ ನಿದ್ರೆಯಲ್ಲಿರುವ ಸಮಯ ನೋಡಿಕೊಂಡೇ ಹಂತಕರು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳ ಜಪ್ತಿ: ಹಂತಕರು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಮನೆಯ ಹಿಂಬದಿಯಲ್ಲಿ ಪತ್ತೆಯಾಗಿವೆ. ಮೂರು ಜಂಬೆಗಳನ್ನು (ಉದ್ದನೆಯ ಚಾಕು) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಯ ತುಂಬೆಲ್ಲಾ ರಕ್ತದ ಕಲೆ: ನಗರದ ತ್ರಿಕೂಟೇಶ್ವರ ದೇವಸ್ಥಾನದ ಬೆನ್ನಿಗೆ ಅಂಟಿಕೊಂಡಂತಿರುವ ದಾಸರ ಓಣಿ ಸದಾಕಾಲ ಜನಜಂಗುಳಿಯಿಂದ ಕೂಡಿರುವ ಪ್ರದೇಶ. ಬಡಾವಣೆಗಳಲ್ಲಿ ಇರುವಂತೆ ಈ ಓಣಿಯಲ್ಲಿ ವಿಶಾಲ ಮನೆಗಳಿಲ್ಲ. ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ಓಣಿಯಲ್ಲಿ ಪ್ರಕಾಶ್‌ ಬಾಕಳೆ ಅವರ ಆರು ಕೋಣೆಯುಳ್ಳ ದೊಡ್ಡ ಮನೆಯಿದೆ. ಗುರುವಾರ ನಡೆದ ಹತ್ಯೆಯಿಂದ ಮನೆಯ ತುಂಬೆಲ್ಲಾ ರಕ್ತ ಮಡುಗಟ್ಟಿತ್ತು.

ಮುಗಿಲು ಮುಟ್ಟಿದ್ದ ಆಕ್ರಂದನ:

ಮಗನನ್ನು ಕಳೆದುಕೊಂಡ  ಸುನಂದಾ ಬಾಕಳೆ ತೀವ್ರ ದುಃಖಿತರಾಗಿದ್ದರು. ಅವರನ್ನು ನೆರೆಮನೆಯವರು, ಬಂಧುಗಳು ಸಮಾಧಾನ ಪಡಿಸಿದರು. ದುಃಖ ತಾಳಲಾರದೆ ಸುನಂದಾ ಅವರು ನಿಶ್ಯಕ್ತಿಗೆ ಜಾರಿದರು. ಓಣಿಯವರೆಲ್ಲವರೂ ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ಸಂಕದ, ಡಿವೈಎಸ್‌ಪಿ ಇನಾಂದಾರ, ಶಹರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ ಭೇಟಿ ನೀಡಿದರು. ಸಚಿವ ಎಚ್‌.ಕೆ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ ಸೇರಿದಂತೆ ಹಲವರು ಭೇಟಿ ನೀಡಿ ಸಾಂತ್ವನ ಹೇಳಿದರು.

ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬೆಳಗಾಗಿ ಉತ್ತರ ವಲಯ ಐಜಿಪಿ ವಿಕಾಶ್‌ ಕುಮಾರ್‌ ವಿಕಾಶ್‌ ಹಾಗೂ ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ
ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬೆಳಗಾಗಿ ಉತ್ತರ ವಲಯ ಐಜಿಪಿ ವಿಕಾಶ್‌ ಕುಮಾರ್‌ ವಿಕಾಶ್‌ ಹಾಗೂ ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ
ಮಗನನ್ನು ಕಳೆದುಕೊಂಡು ರೋಧಿಸುತ್ತಿದ್ದ ಸುನಂದಾ ಬಾಕಳೆ ಅವರಿಗೆ ಸಚಿವ ಎಚ್‌.ಕೆ.ಪಾಟೀಲ ಸಾಂತ್ವನ ಹೇಳಿದರು
ಮಗನನ್ನು ಕಳೆದುಕೊಂಡು ರೋಧಿಸುತ್ತಿದ್ದ ಸುನಂದಾ ಬಾಕಳೆ ಅವರಿಗೆ ಸಚಿವ ಎಚ್‌.ಕೆ.ಪಾಟೀಲ ಸಾಂತ್ವನ ಹೇಳಿದರು
ಆಕಾಂಕ್ಷಾ ಲಕ್ಷ್ಮೀಬಾಯಿ
ಆಕಾಂಕ್ಷಾ ಲಕ್ಷ್ಮೀಬಾಯಿ
ಪರುಶುರಾಮ
ಪರುಶುರಾಮ
ಕಾರ್ತಿಕ್‌ ಬಾಕಳೆ
ಕಾರ್ತಿಕ್‌ ಬಾಕಳೆ
ಪ್ರಕಾಶ್‌ ಬಾಕಳೆ ಸುನಂದಾ ಬಾಕಳೆ ಆಘಾತಕ್ಕೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಂಡ ಬಳಿಕ ಮಾಹಿತಿ ಕಲೆ ಹಾಕಲಾಗುವುದು. ಕುಟುಂಬಕ್ಕೆ ಪೊಲೀಸ್‌ ರಕ್ಷಣೆ ನೀಡಲಾಗುವುದು.
ವಿಕಾಶ್‌ ಕುಮಾರ್‌ ವಿಕಾಶ್‌ ಐಜಿಪಿ
ಇದು ಅಮಾನುಷ ಕೃತ್ಯ. ಹಂತಕರು ವಿಕೃತಿ ಮೆರೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಲಾಗುವುದು. ಪೊಲೀಸರು ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸ ಇದೆ.
ಎಚ್‌.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
ನಾಲ್ಕು ತಂಡಗಳ ರಚನೆ
‘ಪ್ರಕಾಶ್‌ ಬಾಕಳೆ ನೀಡಿದ ದೂರಿನಂತೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಚುರುಕುಗೊಳಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಶ್‌ ಕುಮಾರ್‌ ವಿಕಾಶ್‌ ತಿಳಿಸಿದ್ದಾರೆ. ‘ಕೊಲೆ ಪ್ರಕರಣ ಭೇದಿಸಲು ಬೇರೆ ಬೇರೆ ಥಿಯರಿಗಳಿದ್ದು ಅದರಂತೆ ತನಿಖೆ ಮುಂದುವರಿಸಲಾಗುವುದು. ಕೊಲೆಗೆ ಸಾಕಷ್ಟು ಕಾರಣಗಳಿರಬಹುದು’ ಎಂದರು.

‘ಸತ್ತವರ ಹಿನ್ನೆಲೆ ಏನು? ಅವರನ್ನು ಕೊಲ್ಲುವಷ್ಟು ದ್ವೇಷವನ್ನು ಯಾರು ಹೊಂದಿದ್ದರು? ಯಾರಾದರೂ ಸುಪಾರಿ ಕೊಟ್ಟಿದ್ದಾರೆಯೇ? ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುವುದು. ಕಾರ್ತಿಕ್‌ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಅಲ್ಲೇನಾದರೂ ವೈಯಕ್ತಿಕ ದ್ವೇಷ ಇತ್ತೇ ಎಂಬುದರ ಕುರಿತು ವಿಸ್ತೃತ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT