ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪಾರ್ಕಿಂಗ್ ಇಲ್ಲ; ರಸ್ತೆಯಲ್ಲಿಯೇ ಎಲ್ಲ!

ಪ್ರಮುಖ ಸ್ಥಳಗಳಲ್ಲಿ ಸಮರ್ಪಕವಾಗಿ ನಡೆಯದ ಪಾರ್ಕಿಂಗ್ ನಿರ್ವಹಣೆ – ತಪ್ಪದ ಪರದಾಟ
Last Updated 20 ಡಿಸೆಂಬರ್ 2021, 2:33 IST
ಅಕ್ಷರ ಗಾತ್ರ

ಗದಗ: ನಗರವೂ ಸೇರಿದಂತೆ ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಪಾರ್ಕಿಂಗ್‌ ಸಮಸ್ಯೆ ತೀವ್ರಗೊಂಡಿದ್ದು, ಜನರು ಹೈರಾಣಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ಪಾರ್ಕಿಂಗ್‌ ತಾಣಗಳಿಲ್ಲ. ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲ್ಲಿಸಿ ಸಂಚಾರ ದಟ್ಟಣೆ ಸೃಷ್ಟಿಸುವುದು ಕೂಡ ತಪ್ಪಿಲ್ಲ. ತರಕಾರಿ ಮಾರುಕಟ್ಟೆ, ಬಸ್‌ ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳಿಂದಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವುದು ಮಾಮೂಲಿಯಾಗಿದೆ.

25 ವರ್ಷಗಳು ಕಳೆದರೂ ಮೂಲಸೌಕರ್ಯಗಳಿಲ್ಲದೇ ಸೊರಗಿರುವ ಜಿಲ್ಲಾ ಕೇಂದ್ರವನ್ನೂ ಪಾರ್ಕಿಂಗ್‌ ಸಮಸ್ಯೆ ದೊಡ್ಡ ಮಟ್ಟದಲ್ಲೇ ಕಾಡುತ್ತಿದೆ. ನಗರ ಬೆಳೆದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾರುಕಟ್ಟೆ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪಾರ್ಕಿಂಗ್ ನಿರ್ವಹಣೆ ನಡೆಯುತ್ತಿಲ್ಲ.

ದೊಡ್ಡ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ಜಾಗ ಕಲ್ಪಿಸಬೇಕು ಎಂಬ ನಿಯಮವಿದ್ದರೂ ಅದು ಇಲ್ಲಿ ಪಾಲನೆಯಾಗುತ್ತಿಲ್ಲ. ನಿಯಮ ಉಲ್ಲಂಘಿಸಿರುವ ಕಟ್ಟಡ ಮಾಲೀಕರಿಗೆ ದಂಡ ಹಾಕುವ ಶ್ರಮವನ್ನೂ ನಗರಸಭೆ ಆಡಳಿತ ತೆಗೆದುಕೊಂಡಿಲ್ಲ. ಜನದಟ್ಟಣೆ ಹೆಚ್ಚಿರುವ ಕೆಲವು ಸ್ಥಳದಲ್ಲಿ ಪೊಲೀಸರು ರಸ್ತೆಯ ಒಂದು ಬದಿಯಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶ ನೀಡಿದ್ದಾರೆ. ಆದರೆ, ಅದು ಕೂಡ ಕಟ್ಟುನಿಟ್ಟಾಗಿ ಪಾಲನೆ ಆಗುವುದಿಲ್ಲ.

ನಗರದ ಸ್ಟೇಷನ್‌ ರಸ್ತೆ, ಟಾಂಗಾ ಕೂಟ್‌, ಎಪಿಎಂಸಿ ಆವರಣ, ದತ್ತಾತ್ತೇಯ ರಸ್ತೆ, ಮಕಾನ ಗಲ್ಲಿ, ಹಳೆ ಡಿಸಿ ವೃತ್ತ, ಮುಳಗುಂದನಾಕಾ ಸರ್ಕಲ್‌ ಎಲ್ಲ ಕಡೆಗಳಲ್ಲೂ ಅಡ್ಡಾದಿಡ್ಡಿಯಾಗಿ ವಾಹನಗಳು ನಿಂತಿರುವ ದೃಶ್ಯಗಳು ಪ್ರತಿನಿತ್ಯ ಕಾಣಿಸುತ್ತವೆ. ಪಾದಚಾರಿ ಸ್ಥಳದಲ್ಲಿ ಆಟೊ ಹಾಗೂ ಬೈಕ್‌ಗಳು ನಿಲ್ಲುವುದರಿಂದ ಬಸ್‌ ನಿಲುಗಡೆ ಇರುವ ಸ್ಥಳದಲ್ಲಿ ಜನರು ರಸ್ತೆ ತುದಿಗೆ ಬಂದು ನಿಲ್ಲುವ ಪರಿಸ್ಥಿತಿ ಇದೆ. ಮಕಾನ ಗಲ್ಲಿಯಲ್ಲಿ ಪ್ರತಿನಿತ್ಯ ನಡೆಯುವ ತರಕಾರಿ ವ್ಯಾಪಾರದಿಂದ ವಾಹನ ದಟ್ಟಣೆ ಹೆಚ್ಚುತ್ತಿದೆ. ರಸ್ತೆಯ ಎರಡೂ ತುದಿಗಳನ್ನು ವ್ಯಾಪಾರಿಗಳು ಆಕ್ರಮಿಸುವುದರಿಂದ ಗ್ರಾಹಕರು ಬೈಕನ್ನು ರಸ್ತೆ ಮಧ್ಯೆ ನಿಲ್ಲಿಸಿಯೇ ವ್ಯಾಪಾರ ಮಾಡುತ್ತಾರೆ.

ರಸ್ತೆಬದಿಯಲ್ಲೇ ವಾಹನ

ಗಜೇಂದ್ರಗಡ: ಪಟ್ಟಣದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇಲ್ಲಿನ ಜೋಡು ರಸ್ತೆ, ಬಸ್ ನಿಲ್ದಾಣದ ರಸ್ತೆ, ರೋಣ ರಸ್ತೆ, ಕುಷ್ಟಗಿ ರಸ್ತೆಗಳಲ್ಲಿರುವ ಪಾದಚಾರಿ ರಸ್ತೆಗಳಲ್ಲಿ ಜನರು ವಾಹನಗಳನ್ನು ನಿಲ್ಲಿಸುತ್ತಿದ್ದಾರೆ.

ಇದರ ಜೊತೆಗೆ ಪಟ್ಟಣದಲ್ಲಿ ಪ್ರತ್ಯೇಕ ಮಾರುಕಟ್ಟೆ ಇಲ್ಲದ ಕಾರಣ ಪಾದಚಾರಿ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ವ್ಯಾಪಾರ ಮಾಡುವವರು ತಳ್ಳು ಗಾಡಿ ಹಾಗೂ ಅಂಗಡಿಗಳನ್ನು ಇಟ್ಟಿರುವುದರಿಂದ ಕೆಲವೊಂದು ಸಾರಿ ಜನರು ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಇದರಿಂದ ಆಗಾಗ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಸದ್ಯ ಕುಷ್ಟಗಿ ರಸ್ತೆ ಹಾಗೂ ರೋಣ ರಸ್ತೆಯಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಸ್ತೆಗೆ ಅಡ್ಡಲಾಗಿರುವ ಚರಂಡಿಗಳ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಈ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಅಂಗಡಿ ಇಟ್ಟಿರುವುದು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಅಂಗಡಿಗಳ ಮುಂದೆ ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಪಾರ್ಕಿಂಗ್‌ಗಾಗಿ ಪರದಾಟ

ಮುಂಡರಗಿ: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಕಚೇರಿ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ವಾಹನ ನಿಲುಡೆ ಸಮಸ್ಯೆ ತೀವ್ರವಾಗಿದ್ದು, ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.

ಅಪರಿಚಿತ ಸ್ಥಳಗಳಲ್ಲಿ ನಿಲ್ಲಿಸಿದ್ದ ಕೆಲವು ವಾಹನಗಳ ಕಳ್ಳತನವಾಗಿರುವುದರಿಂದ ವಾಹನ ಸವಾರರು ತಮ್ಮ ವಾಹನವನ್ನು ರಸ್ತೆಬದಿ ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸರ್ಕಾರಿ ಕಚೇರಿಗಳ ಮುಂದೆ ವಾಹನ ದಟ್ಟಣೆ ಹೆಚ್ಚಾಗಿ ವಾಹನ ನಿಲುಗಡೆಗೆ ತೀವ್ರ ಸಮಸ್ಯೆಯಾಗುತ್ತಿದೆ.

ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ಆದರೆ ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಅಧಿಕಾರಿಗಳು ತಮ್ಮ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್ ಮಾಡದೆ ಬೀಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ.

ಮುಖ್ಯ ಮಾರುಕಟ್ಟೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಬೇಕು ಎನ್ನುವ ಕಾರಣದಿಂದ ಪೊಲೀಸ್‌ ಇಲಾಖೆ ದಿನಕ್ಕೊಂದು ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿತ್ತು. ಪೊಲೀಸರು ಇರುವಾಗ ನಿಯಮಗಳನ್ನು ಪಾಲಿಸುವ ಜನರು ಪೊಲೀಸರು ಇಲ್ಲದಿದ್ದಾಗ ವಾಹನಗಳನ್ನು ಬೀಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿದ್ದಾರೆ.

ಪುರಸಭೆ, ತಾಲ್ಲೂಕು ಪಂಚಾಯ್ತಿ, ಸರ್ಕಾರಿ ಪದವಿ ಮತ್ತು ಪಿಯು ಕಾಲೇಜುಗಳಲ್ಲಿ ಪ್ರತ್ಯೇಕವಾಗಿ ಪಾಕಿಂಗ್ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಅಲ್ಲಿ ಜನರು ಮನ ಬಂದಂತೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ.

ನಾಗರಿಕರಿಗೆ ಕಿರಿಕಿರಿ

ನರಗುಂದ: ಪಟ್ಟಣವು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು ಹೆಚ್ಚಿನ ವಾಹನಗಳು ಪಟ್ಟಣದ ಒಳಗೆ, ಹೊರಗೆ ಸಂಚರಿಸುತ್ತವೆ. ಆದರೆ ವಾಹನಗಳ ಪಾರ್ಕಿಂಗ್‌ಗೆ ಎಲ್ಲಿಯೂ ನಿಗದಿತ ಸ್ಥಳವಿಲ್ಲ.

ಇದರಿಂದ ಎಲ್ಲೆಂದರಲ್ಲಿ ಬೈಕ್, ಕಾರುಗಳ ನಿಲುಗಡೆ ಸಾಮಾನ್ಯವಾಗಿದೆ. ಅದರಲ್ಲೂ ಸವದತ್ತಿ ರಸ್ತೆ, ಬಸ್ ನಿಲ್ದಾಣದ ಸಮೀಪ ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ಪಕ್ಕದಲ್ಲಿ ಯಾವುದೇ ನಿಯಮಗಳನ್ನು ಅನುಸರಿಸದೇ ವಾಹನ ನಿಲ್ಲಿಸಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ನಿರಂತರವಾಗಿದೆ. ಕೆಲವೊಮ್ಮೆ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡಬೇಕಿದೆ.

ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಎದುರಿಗೆ ಹೆದ್ದಾರಿ ಪಕ್ಕದಲ್ಲಿ ಬಾಲಕಿಯರು ಶಾಲೆಗೆ ಬರದ ರೀತಿಯಲ್ಲಿ ಟಂಟಂಗಳ ನಿಲುಗಡೆ ತೀವ್ರ ತೊಂದರೆ ಒಡ್ಡಿವೆ. ಎಲ್ಲಿಯೂ ನೋ ಪಾರ್ಕಿಂಗ್ ನಿಯಮಗಳು ಅನುಷ್ಠಾನಗೊಂಡಿಲ್ಲ. ಜತೆಗೆ ಬಸ್ ನಿಲ್ದಾಣದ ಸಮೀಪ ಸರಿಯಾದ ರೀತಿಯಲ್ಲಿ ಪಾರ್ಕಿಂಗ್‌ಗೆ ಸ್ಥಳ ನಿಗದಿ ಪಡಿಸಬೇಕೆಂದು ಪಟ್ಟಣದ ಚನ್ನು ನಂದಿ ಆಗ್ರಹಿಸುತ್ತಾರೆ.

ದುರ್ಗಾ ಹೋಟೆಲ್‌ ಎದುರು ಪಾರ್ಕಿಂಗ್ ಸಮಸ್ಯೆ

ನರೇಗಲ್:‌ ಪಟ್ಟಣದ ಹೊಸ ಬಸ್‌ ನಿಲ್ದಾಣದ ಹಿಂದೆ ಇರುವ ದುರ್ಗಾ ಹೋಟೆಲ್‌ ಎದುರು ನಿಲ್ಲಿಸುವ ದ್ವಿಚಕ್ರ ವಾಹನಗಳಿಂದಾಗಿ ಬಸ್‌ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಗದಗ-ಗಜೇಂದ್ರಗಡ-ಅಬ್ಬಿಗೇರಿ ಗ್ರಾಮಗಳು ಸೇರುವ ತಿರುವು ಇದಾಗಿರುವ ಕಾರಣ ಇಲ್ಲಿ ಯಾವಾಗಲೂ ಪಾರ್ಕಿಂಗ್‌ ಸಮಸ್ಯೆ ಕಾಡುತ್ತದೆ. ಆಗಾಗ ಅಪಘಾತಗಳೂ ನಡೆಯುತ್ತವೆ.

ಸ್ಥಳೀಯ ಹೊಸ ಬಸ್‌ ನಿಲ್ದಾಣದ ಒಳಗೆ ದ್ವಿಚಕ್ರ ವಾಹನಗಳನ್ನು, ಖಾಸಗಿ ವಾಹನಗಳನ್ನು ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ಸರ್ಕಾರಿ ಬಸ್‌ಗಳಿಗೆ ಸಮಸ್ಯೆ ಆಗುತ್ತಿದೆ. ಆದಕಾರಣ ಎರಡೂ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಪಾರ್ಕಿಂಗ್‌ ವ್ಯವಸ್ಥೆ ಆಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಪಾರ್ಕಿಂಗ್ ಅವ್ಯವಸ್ಥೆ, ಸಂಚಾರ ಸಂಕಟ

ಮುಳಗುಂದ: ಪಟ್ಟಣದಲ್ಲಿ ಬೈಕ್ ಮತ್ತು ಇತರೆ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೆ ಸಂಕಟ ತಂದೊಡ್ಡಿದೆ.

ಕಿರಿದಾದ ರಸ್ತೆಯಲ್ಲಿನ ಮುಖ್ಯ ಮಾರುಕಟ್ಟೆ, ಗಾಂಧಿಕಟ್ಟೆಯ ಬಳಿ ಬೆಳಿಗ್ಗೆ ಮತ್ತು ಸಂಜೆ ಜನದಟ್ಟಣೆ ಹೆಚ್ಚಾಗಿರುತ್ತದೆ. ಇಲ್ಲಿ ಹತ್ತಾರು ಅಂಗಡಿಗಳಿದ್ದು ಖರೀದಿಗೆ ಬರುವ ಗ್ರಾಹಕರು ಬೈಕ್ ಇತರೆ ವಾಹನಗಳನ್ನು ರಸ್ತೆಗೆ ನಿಲ್ಲಿಸುವುದರಿಂದ ಪಾದಚಾರಿಗಳು, ವಾಹನಗಳ ಸಂಚಾರಕ್ಕೂ ಸಮಸ್ಯೆ ಎದುರಿಸುವಂತಾಗಿದೆ. ನೋ ಪಾರ್ಕಿಂಗ್ ಬೋರ್ಡ್‌ಗಳಿದ್ದರೂ ನಿಯಮ ಪಾಲನೆ ಆಗುತ್ತಿಲ್ಲ.

ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆ ದಿನ ಚಿಂಚಲಿ ರಸ್ತೆ ಜನದಟ್ಟಣೆ ಎದುರಿಸುವಂತಾಗಿದೆ. ಸಂತೆಗೆ ಬರುವವರು ರಸ್ತೆ ಬದಿ ಬೈಕ್ ಪಾರ್ಕಿಂಗ್ ಮಾಡುತ್ತಿದ್ದು, ಬಸ್, ಲಾರಿ, ಟಿಪ್ಪರ್ ವಾಹನಗಳು ಎದುರು ಬದುರು ಬಂದಾಗ ಸಮಸ್ಯೆ ಆಗುತ್ತಿದೆ.

ಪಾರ್ಕಿಂಗ್ ನಿರ್ವಹಣೆ ಮಾಡುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸಂಜೆ 4ರಿಂದ 8ರವರೆಗೆ ಟ್ರಾಫಿಕ್‌ ಕಿರಿ ಕಿರಿ ಆಗುತ್ತಿದೆ. ವಾರದ ಸಂತೆ ಮತ್ತು ಗಾಂಧಿ ಕಟ್ಟೆಯ ಬಳಿ ಸಿಬ್ಬಂದಿ ನಿಯೋಜಿಸಿ ನಿರ್ವಹಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಜಾರ್‌ನಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆ

ಲಕ್ಷ್ಮೇಶ್ವರ: ಪಟ್ಟಣದ ಬಜಾರದಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ಉಳಿದ ಕಡೆ ಎಲ್ಲೆಂದರಲ್ಲಿ ವಾಹನಗಳು ನಿಲ್ಲುತ್ತವೆ. ಬಜಾರದಲ್ಲಿ ಪೊಲೀಸರು ಒಂದು ದಿನ ಎಡಕ್ಕೆ ಮತ್ತೊಂದು ಬಲಕ್ಕೆ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡಿದ್ದಾರೆ.

ಆದರೆ ಇಲ್ಲಿನ ಹೊಸ ಬಸ್ ನಿಲ್ದಾಣದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿಯೇ ವಾಹನಗಳು ನಿಲ್ಲುತ್ತಿವೆ. ಇದರಿಂದಾಗಿ ಸುಗಮ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಪ್ರಶಾಂತ ಲಾಡ್ಜ್‌ನಿಂದ ಶಿಗ್ಲಿ ಕ್ರಾಸ್‍ವರೆಗೆ ಪಾರ್ಕಿಂಗ್ ವ್ಯವಸ್ಥೆ ಸರಿ ಇಲ್ಲ. ಪ್ರತಿದಿನ ಈ ರಸ್ತೆ ಜನರು ಮತ್ತು ವಾಹನಗಳಿಂದ ತುಂಬಿರುತ್ತದೆ. ಆದರೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ಅತ್ಯಂತ ಅಪಾಯಕಾರಿಯೂ ಆಗಿದೆ.

ಇನ್ನು ಇದೇ ಪರಿಸ್ಥಿತಿ ಮಹಾಕವಿ ಪಂಪ ವರ್ತುಲದಲ್ಲಿಯೂ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರ ಪಕ್ಕದ ಹುಬ್ಬಳ್ಳಿ ರಸ್ತೆಯ ಒಂದು ಬದಿಯಲ್ಲಿ ಯಾವಾಗಲೂ ವಾಹನಗಳು ನಿಂತಿರುತ್ತವೆ. ಹೀಗಾಗಿ ಇಲ್ಲಿಯೂ ಅಪಘಾತದ ಸೂಚನೆಗಳು ಕಂಡು ಬರುತ್ತಿವೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ಡಾ. ಬಸವರಾಜ ಹಲಕುರ್ಕಿ, ಶ್ರೀಶೈಲ ಎಂ.ಕುಂಬಾರ, ಚಂದ್ರಶೇಖರ ಭಜಂತ್ರಿ, ಚಂದ್ರು ಎಂ.ರಾಥೋಡ್‌, ನಾಗರಾಜ ಎಸ್‌.ಹಣಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT