ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗೆ ಟ್ಯಾಂಕರ್‌ ಮೂಲಕ ಜೀವಜಲ!

ಕಪ್ಪತಗುಡ್ಡ ತಪ್ಪಲಿನ ಹೊಂಡಗಳಲ್ಲಿ ನೀರು ತುಂಬಿಸಿದರು...
Last Updated 31 ಮಾರ್ಚ್ 2019, 8:09 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ಕಪ್ಪತಗುಡ್ಡ ವಲಯ ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನೊಂದಿಗೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಅರಣ್ಯದಲ್ಲಿ ನಿರ್ಮಿಸಲಾಗಿರುವ ಹೊಂಡಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಮೂಲಕ ಬೇಸಿಗೆಯಲ್ಲಿ ವನ್ಯಪ್ರಾಣಿಗಳ ದಾಹ ನೀಗಿಸುತ್ತಿದ್ದಾರೆ.

ತಾಲ್ಲೂಕಿನ ಹಮ್ಮಿಗಿ ಭಾಗದ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರು ಕುಡಿಯಲು 6 ಹೊಂಡಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಸಮರ್ಪಕ ಮಳೆಯಾಗದ ಕಾರಣ ಮತ್ತು ಬಿಸಿಲಿನ ತಾಪದಿಂದ ಎಲ್ಲ ಹೊಂಡಗಳು ಬರಿದಾಗಿದ್ದವು. ಇದರಿಂದ ವನ್ಯಪ್ರಾಣಿಗಳು ನೀರಿಲ್ಲದೆ ಪರದಾಡುವಂತಾಗಿತ್ತು. ಇದೀಗ ಈ ನೀರಿನ ಹೊಂಡಗಳಿಗೆ ಟ್ಯಾಂಕರ್ ಮೂಲಕ ನೀರು ಭರ್ತಿ ಮಾಡಲಾಗಿದೆ.

ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಈ ಹೊಂಡಗಳಿಗೆ ನೀರು ತುಂಬಿಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಒಂದು ಟ್ಯಾಂಕರ್‌ಗೆ ₹800 ರಂತೆ ಪಾವತಿಸಿ 5 ಟ್ಯಾಂಕರ್‌ ನೀರನ್ನು ಈ ಹೊಂಡಗಳಿಗೆ ಭರ್ತಿ ಮಾಡಿದ್ದಾರೆ.

'ಕಪ್ಪತಗುಡ್ಡದ ಅಂಚಿನಲ್ಲಿರುವ ತಾಲ್ಲೂಕಿನ ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಹಮ್ಮಿಗಿ, ಹಾರೋಗೇರಿ ಮೊದಲಾದ ಭಾಗಗಳಲ್ಲಿ ಕೆಲವು ನೀರಿನ ಹೊಂಡಗಳನ್ನು ನಿರ್ಮಿಸಲಾಗಿದೆ. ಈ ಸಂಘಟನೆ ಸದಸ್ಯರ ನೆರವಿನಿಂದ ಹಮ್ಮಿಗಿ ಗ್ರಾಮದ ತುಂಗಭದ್ರಾ ನದಿ ಪಾತ್ರದಿಂದ ಟ್ಯಾಂಕರ್ ಮೂಲಕ ನೀರನ್ನು ಹೊಂಡದಲ್ಲಿ ತುಂಬಿಸಲಾಗಿದೆ. ವನ್ಯಜೀವಿಗಳ ದಾಹ ನೀಗಿಸಲು ಸಾರ್ವಜನಿಕರು ಮುಂದೆ ಬಂದಿರುವುದು ಸಂತಸದ ವಿಷಯ’ ಎಂದು ವಲಯ ಅರಣ್ಯಾಧಿಕಾರಿ ಎಸ್.ಎಂ.ಶಿವರಾತ್ರೇಶ್ವರಸ್ವಾಮಿ ಹರ್ಷ ವ್ಯಕ್ತಪಡಿಸಿದರು.

‘ಸಕಾಲದಲ್ಲಿ ಮಳೆಯಾಗದಿದ್ದರೆ, ಮತ್ತು ಅಗತ್ಯ ಬಿದ್ದರೆ ಮತ್ತೆ ಹೊಂಡಗಳಿಗೆ ನೀರು ತುಂಬಿಸಲಾಗುವುದು’ ಎಂದು ಸಂಘಟನೆಯ ಸದಸ್ಯರು ಹೇಳಿದರು. ಸಾಮಾಜಿಕ ವಲಯ ಅರಣಾಧಿಕಾರಿ ಎಸ್.ಪಿ.ಹೊಸಳ್ಳಿ, ಮುಖಂಡರಾದ ಚಂದ್ರು ನಾವಿ, ಸಂತೋಷ ಹಿರೇಮನಿ, ಚಂದ್ರು ಬಚ್ಚನಳ್ಳಿ, ಆರ್.ಎಚ್.ಹೊನಕೇರಿ, ಆರ್.ಜಿ.ಲಮಾಣಿ, ಎಸ್.ಎಸ್.ಪೂಜಾರ, ಮೌಲಾಸಾಬ ಬನ್ನಿಕೊಪ್ಪ, ಎಸ್.ಎಫ್.ಶೇಕ್, ಬಸವರಾಜ ಬಾಲವ್ವಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT