ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಗಾವಲಿಗೆ ಒಳಪಡದ ಗಜೇಂದ್ರಗಡ

ಅರ್ಧಕ್ಕೆ ನಿಂತ ಸಿಸಿಟಿವಿ ಅಳವಡಿಸುವ ಕಾಮಗಾರಿ; ವರ್ಗಾವಣೆಯಾಗದ ಮಾನಿಟರಿಂಗ್ ಘಟಕ
Published 15 ಏಪ್ರಿಲ್ 2024, 4:07 IST
Last Updated 15 ಏಪ್ರಿಲ್ 2024, 4:07 IST
ಅಕ್ಷರ ಗಾತ್ರ

ಗಜೇಂದ್ರಗಡ: ಅಪರಾಧ, ಅಪಘಾತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪಟ್ಟಣದ ಆಯಕಟ್ಟಿನ 19 ಸ್ಥಳಗಳಲ್ಲಿ ಹೈಟೆಕ್ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ನಿರ್ವಹಣೆ ಇಲ್ಲದಂತಾಗಿದೆ. ಹೀಗಾಗಿ ಗಜೇಂದ್ರಗಡ ಪಟ್ಟಣ ಕ್ಯಾಮೆರಾ ಕಣ್ಗಾವಲಿಗೆ ಒಳಪಡುವ ಕನಸು ನನಸಾಗಿಲ್ಲ.

ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಗಜೇಂದ್ರಗಡದಲ್ಲಿ ಹೈಟೆಕ್ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ನಿಟ್ಟಿನಲ್ಲಿ 2021ರಲ್ಲಿ ಪೊಲೀಸ್ ಇಲಾಖೆ ಮತ್ತು ಅಂದಿನ ಶಾಸಕ ಕಳಕಪ್ಪ ಬಂಡಿ ಅವರ ಮುತುವರ್ಜಿಯಿಂದ ಸಂಸದರ ಅನುದಾನದಲ್ಲಿ ₹20 ಲಕ್ಷ ವೆಚ್ಚದಲ್ಲಿ ಪಟ್ಟಣದ 19 ಸ್ಥಳಗಳಲ್ಲಿ 40 ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕಾಮಗಾರಿಯನ್ನು ಶಿವಮೊಗ್ಗ ಮೂಲದ ಕಂಪನಿ ನೀಡಲಾಗಿತ್ತು. ಅದರಂತೆ ಕಂಪನಿಯವರು ಈ ಮೊದಲು ನಿಗದಿ ಪಡಿಸಿದ ಬಹುತೇಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಸಲು ನಿಗದಿಪಡಿಸಿದ್ದ ಸ್ಥಳಗಳು: ಪಟ್ಟಣದ ಕೆ.ಕೆ.ವೃತ್ತ, ಎಪಿಎಂಸಿ, ಬಸ್ ನಿಲ್ದಾಣ, ಪುರ್ತಗೇರಿ ಕ್ರಾಸ್, ಚೆನ್ನಮ್ಮ ವೃತ್ತ, ಟಿಟಿಡಿ ಕಲ್ಯಾಣ ಮಂಟಪದ ಹತ್ತಿರ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಭಜರಂಗಧಳ ವೃತ್ತ, ಕೊಳ್ಳಿಯವರ ಕತ್ರಿ, ರಂಗ ಮಂದಿರದ ಹತ್ತಿರ, ಈದ್ಗಾ ಮೈದಾನದ ಹತ್ತಿರ, ಜವಳಿ ಪ್ಲಾಟ್, ಹಿರೇಮನಿ ಪ್ಲಾಟ್, ಅಲಂಕಾರ ಟಾಕೀಜ್ ಹತ್ತಿರ, ರಂಗ್ರೇಜಿ ಆಸ್ಪತ್ರೆ ಹತ್ತಿರ ಒಟ್ಟು 19 ಸ್ಥಳಗಳಲ್ಲಿ ಅಳವಡಿಸಲಾಗಿತ್ತು.

ಕೊಳ್ಳಿಯವರ ವೃತ್ತ, ರಂಗ ಮಂದಿರದ ಹತ್ತಿರ, ಗದಗ ರಸ್ತೆಯಲ್ಲಿ ಟಿಟಿಡಿ ಕಲ್ಯಾಣ ಮಂಟಪದ ಹತ್ತಿರ, ಚನ್ನಮ್ಮ ವೃತ್ತ, ಹಾಗೂ ಪುರ್ತಗೇರಿ ಕ್ರಾಸ್ ಹತ್ತಿರ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಂಬದ ಸಿಸಿ ಬೆಡ್ ಮಾತ್ರ ಹಾಕಲಾಗಿದ್ದು, ಈವರೆಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಅಲ್ಲದೆ ಈ ಎಲ್ಲ ಕ್ಯಾಮೆರಾಗಳ ನಿರ್ವಹಣೆ (ಮಾನಿಟರಿಂಗ್) ಹಳೆ ಪೊಲೀಸ್ ಠಾಣೆ ಕಟ್ಟಡದಲ್ಲಿದ್ದು, ಹೊಸ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿಲ್ಲ. ಹೀಗಾಗಿ ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಇದ್ದು ಇಲ್ಲದಂತಾಗಿದ್ದು, ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡಿಲ್ಲ. ಹೀಗಾಗಿ ಹಳೆ ಠಾಣೆಯಲ್ಲಿರುವ ನಿರ್ವಹಣೆ ಘಟಕವನ್ನು ಹೊಸ ಪೊಲೀಸ್ ಠಾಣೆಗೆ ಸ್ಥಳಾಂತರಿಸಿಲ್ಲ. ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆ ಕುರಿತು ಪುರಸಭೆಯವರಿಗೆ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಪುರಸಭೆ ಸಿಸಿ ಕ್ಯಾಮರಾಗಳ ನಿರ್ವಹಣೆ ಮಾಡುವುದಿದೆಯೋ ಇಲ್ಲವೋ ಎಂಬ ಕುರಿತು ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ ಈ ವಿಷಯವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ

-ರೇಣುಕಾ ದೇಸಾಯಿ ಪುರಸಭೆ ಮುಖ್ಯಾಧಿಕಾರಿ ಗಜೇಂದ್ರಗಡ

ಸಿಸಿಟಿವಿ ಕ್ಯಾಮೆರಾಗಳು ಹೈಟೆಕ್ ಏಕೆ?

ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು 90 ದಿನಗಳ ಡೆಟಾ ಬ್ಯಾಕಪ್ ಹಾಗೂ ಬ್ಯಾಟರಿ ಒಳಗೊಂಡ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬುಲೆಟ್ ರೊಟೇಟ್ ಮತ್ತು ಸ್ಟಿಲ್ ಸಿಸಿ ಕ್ಯಾಮೆರಾಗಳ ಜತೆಗೆ ಪಟ್ಟಣಕ್ಕೆ ಬರುವ ಮತ್ತು ಹೋಗುವ ವ್ಯಕ್ತಿ ಹಾಗೂ ವಾಹನಗಳ ನೋಂದಣಿ ಸಂಖ್ಯೆ ಸಹ ಗುರುತಿಸಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಪಟ್ಟಣ ಪ್ರವೇಶಿಸುವ ರಸ್ತೆಗಳಲ್ಲಿ ಹೈ ರೆಜಲ್ಯೂಷನ್ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಉದ್ದೇಶ ಹೊಂದಲಾಗಿತ್ತು. ಅಲ್ಲದೆ ಹೆಚ್ಚು ಸಂಚಾರ ದಟ್ಟಣೆ ಹಾಗೂ ಪ್ರತಿಭಟನೆಗಳು ನಡೆಯುವ ಸ್ಥಳಗಳಾದ ಕಾಲಕಾಲೇಶ್ವರ ವೃತ್ತ ಅಂಬೇಡ್ಕರ್ ವೃತ್ತ ಹಾಗೂ ಬಸ್ ನಿಲ್ದಾಣದ ಹತ್ತಿರ ಸಿಸಿಟಿವಿ ಕ್ಯಾಮೆರಾ ಜೊತೆಗೆ ಧ್ವನಿವರ್ಧಕ ಸಹ ಅಳವಡಿಸಿ ಪೊಲೀಸ್ ಠಾಣೆಯಲ್ಲಿಯೇ ಕುಳಿತುಕೊಂಡು ಮೈಕ್ ಮೂಲಕ ಸೂಚನೆ ಮತ್ತು ಸಂದೇಶ ನೀಡುವ ಯೋಜನೆಯನ್ನು ಕಾಮಗಾರಿ ಒಳಗೊಂಡಿತ್ತು.

ಸಿಸಿ ಕ್ಯಾಮರಾ ನಿರ್ವಹಣೆ ಯಾರು ಮಾಡಬೇಕು?

ಪಟ್ಟಣದಲ್ಲಿ 2021ರಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ನಿರ್ವಹಣೆ ಶಿವಮೊಗ್ಗ ಕಂಪನಿ ಒಂದು ವರ್ಷ ಮಾತ್ರ ನಿರ್ವಹಣೆ ಜವಾಬ್ದಾರಿ ಹೊಂದಿತ್ತು. ಕಳೆದ ವರ್ಷವೇ ಅದು ಮುಗಿದಿದ್ದು ಇವುಗಳ ನಿರ್ವಹಣೆ ಪುರಸಭೆ ಮಾಡಬೇಕೋ ಅಥವಾ ಪೊಲೀಸ್ ಇಲಾಖೆಯೇ ಮಾಡಬೇಕೋ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಕೆಲ ತಿಂಗಳ ಹಿಂದ ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಮಾಡುವುದರ ಜೊತೆಗೆ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಪುರಸಭೆಗೆ ಪತ್ರ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT