ಮಂಗಳವಾರ, ಜೂನ್ 15, 2021
27 °C

‘ಗೌರಿ’ಗೆ ಚೊಚ್ಚಿಲ ಸೀಮಂತ: ಕೆಳಗಡಿ ಕುಟುಂಬದವರಿಂದ ಸೀಮಂತ

ಚಂದ್ರು ಎಂ. ರಾಥೋಡ್ Updated:

ಅಕ್ಷರ ಗಾತ್ರ : | |

Prajavani

ನರೇಗಲ್: ಬಾಗಿಲಿಗೆ ತಳಿರು ತೋರಣ ಕಟ್ಟಿ, ಮನೆಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಮಹಿಳೆಯರೆಲ್ಲ ಹೊಸ ರೇಷ್ಮೆ ಸೀರೆಯುಟ್ಟು, ಕೈಯಲ್ಲಿ ಸೀರೆ, ಹಸಿರು ಕುಪ್ಪಸ, ಕುಂಕುಮ, ಬಳೆ, ಹೂವಿನ ಹಾರ ಹಿಡಿದು ಸಮೀಪದ ಜಕ್ಕಲಿ ಗ್ರಾಮದ ಶಿವಪ್ಪ ಕೆಳಗಡಿ ಕುಟುಂಬದ ಮಹಿಳೆಯರು ಗೌರಿಯ ಸೀಮಂತ ಕಾರ್ಯವನ್ನು ಉತ್ಸಾಹದಿಂದ ನೆರವೇರಿಸಿದರು. ಗೌರಿಗೆ ಸಾಲುಸಾಲಗಿ ಬಯಕೆಯ ಊಟ ತಿನ್ನಿಸಿ ಶುಭ ಹಾರೈಸಿದರು.

ಇದು ಮಹಿಳೆಯ ಸೀಮಂತವಲ್ಲ; ಬದಲಿಗೆ ಆಕಳಿನ (ಹಸುವಿನ) ಸೀಮಂತ ಕಾರ್ಯ ಎಂಬುದು ವಿಶೇಷ.

ಎರಡು ತಲೆಮಾರಿನಿಂದ ಆಕಳುಗಳನ್ನು ಪ್ರೀತಿಯಿಂದ ಸಾಕುತ್ತಿರುವ ಕೆಳಗಡಿ ಕುಟುಂಬದವರು ಪ್ರತಿ ಆಕಳು ಮೊದಲ ಗರ್ಭ ಧರಿಸಿದಾಗ ಮನೆ ಮಗಳ ಸೀಮಂತ ಮಾಡಿದಂತೆ ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ.

ಇವರ ಮನೆಯಲ್ಲಿ ವಿವಿಧ ತಳಿಯ 8 ಆಕಳುಗಳಿದ್ದು, ಅವನ್ನು ಮನೆಯ ಸದಸ್ಯರಂತೆ ಅಕ್ಕರೆಯಿಂದ ಸಾಕಿದ್ದಾರೆ. ಸೀಮಂತ ನಡೆಸಿದ ಹಸುವಿಗೆ ಗೌರಿ ಎಂದು ನಾಮಕರಣ ಮಾಡಿದ್ದಾರೆ. ಈಗ ಗೌರಿಗೆ ಸೀಮಂತ ಕಾರ್ಯ ಮಾಡುವಲ್ಲಿ ಕುಟುಂಬದ ಸಂಭ್ರಮ ಜೋರಾಗಿತ್ತು.

‘ಗೌರಿ ನಮ್ಮ ಮನಿ ಮಗಳಿದ್ದಂಗ್ರೀ. ಅವಳ ಮ್ಯಾಲೇ ನಮ್ಗ್ ಭಾಳಾ ಪ್ರೀತಿ ಐತಿ, ಚೊಚ್ಚಲ ಬಸ್ರಿ ಆದಾಗಿಂದ ಸೀಮಂತ ಕಾರ್ಯ ಚೆಂದ ಮಾಡ್ಬೇಕಂತ ಅನ್ಕೊಂಡಿದ್ವಿ. ಗೌರಿ ಖುಷಿ ಇದ್ರ ಮಳಿ ಬೆಳಿ ಬರ್ತಾವ ಅಂತ ನಂಬಿಕಿ ಐತ್ರೀ’ ಎನ್ನುತ್ತಾರೆ ಕುಟುಂಬದ ಮಹಿಳೆಯರಾದ ದ್ರಾಕ್ಷಾಯಣಿ, ಅಕ್ಷತಾ, ಅಂಜಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.