ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯ ನಕಲಿ ವೈದ್ಯ ನಾಪತ್ತೆ

Last Updated 8 ಸೆಪ್ಟೆಂಬರ್ 2018, 14:45 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ವೈದ್ಯರೊಬ್ಬರ ಶೈಕ್ಷಣಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರಿ ವೈದ್ಯನಾಗಿ ನೇಮಕಗೊಂಡು,ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಲ್ಕು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ನಕಲಿ ವೈದ್ಯ ನಿಜ ಬಣ್ಣ ಬಯಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.

ಬೆಳಗಾವಿಯ ಡಾ.ವಿಕಾಸ ಪಾಟೀಲ ಎಂಬುವರಿಗೆ ಸೇರಿದ ಎಂಬಿಬಿಎಸ್‌ ಪ್ರಮಾಣಪತ್ರಗಳನ್ನು ಹಾಜರುಪಡಿಸಿ, ಅವರ ಹೆಸರಿನಲ್ಲೇ ಈ ವ‌್ಯಕ್ತಿ ನೇರ ಸಂದರ್ಶನದ ಮೂಲಕ ವೈದ್ಯನಾಗಿ ಆಯ್ಕೆಯಾಗಿದ್ದ. ಆರಂಭದಲ್ಲಿ ಶಿರಹಟ್ಟಿ ತಾಲ್ಲೂಕು ಬನ್ನಿಕೊಪ್ಪ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಸ್ತರಣಾ ಘಟಕದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡಿದ್ದ. ನಂತರ ಅಲ್ಲಿಂದ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗವಾಗಿ ಬಂದಿದ್ದ. ಹೃದಯರೋಗ ತಜ್ಞ ಎಂದು ಹೇಳಿಕೊಂಡು ಅನೇಕ ರೋಗಿಗಳಿಗೆ ಚಿಕಿತ್ಸೆಯನ್ನೂ ನೀಡಿದ್ದ. ಈ ವೈದ್ಯನ ನಡೆಯಿಂದ ಅನುಮಾನಗೊಂಡ ಆಸ್ಪತ್ರೆಯ ಇತರೆ ಸಿಬ್ಬಂದಿ ಈತನ ಮೇಲೆ ನಿಗಾ ವಹಿಸಿದ್ದರು.

ಕೆಲವು ದಿನಗಳ ಹಿಂದಷ್ಟೇ ಕುಂದಗೋಳ ತಾಲ್ಲೂಕು ಹರ್ಲಾಪುರ ಗ್ರಾಮದ ಯುವತಿಯೊಂದಿಗೆ ಈತನ ವಿವಾಹವಾಗಿತ್ತು. ಮದುವೆ ಬಳಿಕ ಈತ ನಕಲಿ ವೈದ್ಯ ಎನ್ನುವುದು ಯುವತಿಯ ಮನೆಯವರಿಗೆ ತಿಳಿಯಿತು. ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ವ್ಯಕ್ತಿ ನಾಪತ್ತೆ ಆಗಿದ್ದಾನೆ. ತಮಗೆ ಸೇರಿದ ಪ್ರಮಾಣಪತ್ರಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ವೈದ್ಯನಾದ ವ್ಯಕ್ತಿಯ ವಿರುದ್ಧ ಡಾ.ವಿಕಾಸ ಪಾಟೀಲ ಅವರು ಕರ್ನಾಟಕ ವೈದ್ಯಕೀಯ ಮಂಡಳಿಗೆ (ಕೆಎಂಸಿ) ದೂರು ನೀಡಿದ್ದಾರೆ.

‘ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಿಂದ ಆ.8ರಿಂದ ಈ ವ್ಯಕ್ತಿ ನಾಪತ್ತೆಯಾಗಿದ್ದಾನೆ.ನೇಮಕಾತಿ ಸಂದರ್ಭದಲ್ಲಿ ಅವರು ಇಲಾಖೆಗೆ ನೀಡಿದ್ದ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಸೋಮವಾರವಷ್ಟೇ ಇದರ ಬಗ್ಗೆ ನಿಖರವಾಗಿ ತಿಳಿಯಲಿದೆ’ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಎಸ್‌.ಎಂ‌.ಹೊನಕೇರಿ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT