ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಒನ್: ಕ್ರಿಯಾಶೀಲವಾಗಿ ಸೇವೆ ಒದಗಿಸಿ

ಗ್ರಾಮ ಒನ್, ಪಡಿತರ ಕೇಂದ್ರಗಳ ಮಾಲೀಕರ ಜತೆಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 21 ಅಕ್ಟೋಬರ್ 2022, 6:27 IST
ಅಕ್ಷರ ಗಾತ್ರ

ಗದಗ: ‘ಸಾಮಾನ್ಯ ಜನರ ಹಣ ಹಾಗೂ ಸಮಯ ಉಳಿಸುವ ಧ್ಯೇಯದೊಂದಿಗೆ ಗ್ರಾಮ ಒನ್ ಕಾರ್ಯಕ್ರಮ ಆರಂಭಿಸಲಾಗಿದ್ದು, ನ್ಯಾಯಬೆಲೆ ಅಂಗಡಿ ಹಾಗೂ ಗ್ರಾಮ ಒನ್ ಕೇಂದ್ರಗಳ ಸೇವಾಕರ್ತರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎನ್. ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಗ್ರಾಮ ಒನ್ ಹಾಗೂ ಪಡಿತರ ಕೇಂದ್ರಗಳ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮ ಒನ್‌ ಕೇಂದ್ರಗಳು ಕ್ರಿಯಾಶೀಲವಾಗಿ ಸೇವೆ ಒದಗಿಸಬೇಕು. ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್, ಪಿಎಂ ಕಿಸಾನ್ ಸೌಲಭ್ಯ ಪಡೆಯಲು ರೈತರ ದಾಖಲೆಗಳನ್ನು ಇ–ಕೆವೈಸಿ ಮಾಡುವುದು, ಆರೋಗ್ಯ ಇಲಾಖೆಯ ಅಭಾ ಕಾರ್ಡ್‌, ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್‌ ತ್ವರಿತಗತಿಯಲ್ಲಿ ಅಪ್‍ಡೇಟ್ ಮಾಡುವುದು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಇ- ಕೆವೈಸಿ ಮಾಡುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಸಬೇಕು’ ಎಂದು ತಿಳಿಸಿದರು.

ಡಿಎಚ್‌ಒ ಡಾ. ಜಗದೀಶ್‌ ನುಚ್ಚಿನ, ‘ಜನಸಾಮಾನ್ಯರೆಲ್ಲರೂ ಅಭಾ(ABHA-ಆಯುಷ್ಮಾನ್‌ ಭಾರತ್ ಹೆಲ್ತ್‌ ಅಕೌಂಟ್‌) ಹಾಗೂ ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್‌ ಮಾಡಿಸಿಕೊಳ್ಳಬೇಕು. ಬಿಪಿಎಲ್ ಚೀಟಿದಾರರು ಈ ಆರೋಗ್ಯ ಕಾರ್ಡ್‌ ಪಡೆಯುವ ಮೂಲಕ ಉಚಿತವಾಗಿ ಆರೋಗ್ಯ ವಿಮೆ ಸೌಲಭ್ಯಕ್ಕೆ ಒಳಪಡಲಿದ್ದಾರೆ. ಕುಟುಂಬದ ಸದಸ್ಯರ ಆರೋಗ್ಯ ಚಿಕಿತ್ಸೆಗಾಗಿ ₹5 ಲಕ್ಷದವರೆಗೆ ಆರ್ಥಿಕ ಸೌಲಭ್ಯಗಳನ್ನು ಹೊಂದಬಹುದು’ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಎಂ. ಗಂಗಪ್ಪ, ‘ಪಡಿತರ ಚೀಟಿದಾರರು ಪಡಿತರ ಪಡೆಯಲು ಅಂಗಡಿಗೆ ಬಂದಾಗ ಆಧಾರ್ ಕಾರ್ಡ್‌ ಜೋಡಣೆ ಆಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಜತೆಗೆ ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್‌ ಕಾರ್ಡ್‌ ಲಿಂಕ್ ಮಾಡುವ ಬಗ್ಗೆ ಗ್ರಾಮ ಒನ್ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಿ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸಬೇಕು’ ಎಂದು ತಿಳಿಸಿದರು.

‘ಪಿಎಂ ಕಿಸಾನ್ ಸೌಲಭ್ಯ ಪಡೆಯಲು ರೈತರು ಇ– ಕೆವೈಸಿ ಕಡ್ಡಾಯವಾಗಿದ್ದು, ಈ ಕಾರ್ಯವನ್ನು ಗ್ರಾಮ ಒನ್ ಕೇಂದ್ರಗಳು ಕ್ರಿಯಾಶೀಲವಾಗಿ ನಿರ್ವಹಿಸಲು ನ್ಯಾಯಬೆಲೆ ಅಂಗಡಿಕಾರರು ಅದಕ್ಕೆ ಸಹಕಾರ ನೀಡಬೇಕು’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ., ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ, ಡಿಡಿಪಿಐ ಬಸವಲಿಂಗಪ್ಪ ಜಿ.ಎಂ., ಡಿಡಿಪಿಯು ಕಾಂಬ್ಳೆ, ಗ್ರಾಮ ಒನ್ ಕೇಂದ್ರಗಳ ಆಪರೇಟರ್‌ಗಳು, ಮುಖ್ಯಸ್ಥರು, ಪಿಡಿಒಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT