ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಹಾಲಪ್ಪ ಆಚಾರ್‌ ಸೂಚನೆ
Last Updated 16 ಜುಲೈ 2022, 4:03 IST
ಅಕ್ಷರ ಗಾತ್ರ

ಗದಗ: ‘ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಶೀಘ್ರವೇ ಸ್ವಂತ ಸೂರು ಕಲ್ಪಿಸಬೇಕು. ಈಗಿರುವ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಸಚಿವ ಹಾಲಪ್ಪ ಆಚಾರ್‌ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಂಗವಿಕಲರು, ಹಿರಿಯ ನಾಗರಿಕ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಕೈಗೆತ್ತಿಕೊಂಡಿರುವ ಅಂಗನವಾಡಿ ಕೇಂದ್ರಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಈ ಬಗ್ಗೆ ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳು ಅನುಷ್ಟಾನ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

‘ಮುಂಡರಗಿ ಪಟ್ಟಣದಲ್ಲಿ ಅಂಗನವಾಡಿ ನಿರ್ಮಾಣಕ್ಕೆ 7 ನಿವೇಶನಗಳ ಅಗತ್ಯವಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ತಹಶೀಲ್ದಾರ್‌, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕೂಡಲೇ ನಿವೇಶನಗಳನ್ನು ಒದಗಿಸುವಂತೆ’ ಸೂಚಿಸಿದರು.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಎರಡು ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಎರಡು ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಈ ಕುರಿತು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಇಲಾಖೆಯ ಯೋಜನೆಗಳ ಗುರಿ ಸಾಧನೆಗೆ ಇಲಾಖೆ ಮುಖ್ಯಸ್ಥರು ನಿರಂತರವಾಗಿ ಶ್ರಮಿಸಬೇಕು ತಿಳಿಸಿದರು.

ಆರೋಗ್ಯ ಇಲಾಖೆ ತಂಡಗಳು ನಿಯಮಿತವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಮಕ್ಕಳು, ಗರ್ಭಿಣಿಯರ ಆರೋಗ್ಯದ ಬಗ್ಗೆ ನಿಗಾವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ನೂತನ ಮರಳು ನೀತಿಯಅನುಷ್ಠಾನ ಸರಿಯಾದ ರೀತಿಯಲ್ಲಿ ಆಗಬೇಕು. ಗ್ರಾಮ ಪಂಚಾಯ್ತಿಗಳು ಮರಳು ನೀತಿಯನ್ನು ಅರಿತು ಅನುಷ್ಠಾನಗೊಳಿಸಬೇಕು. ಅಕ್ರಮ ಗಣಿಗಾರಿಕೆಗೆ ಮೇಲೆ ನಿಗಾ ಇರಿಸಬೇಕು ಎಂದು ಸೂಚಿಸಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನಾಗರಸಿಕೊಪ್ಪ ಗ್ರಾಮದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಸಹಾಯಕಿಗೆ ಎರಡು ವರ್ಷಗಳಿಂದ ವೇತನ ನೀಡಿಲ್ಲ. ವೇತನಕ್ಕೆ ನೀಡಿದ ಅನುದಾನವನ್ನು ಬ್ಯಾಂಕ್ ಸಾಲಕ್ಕೆ ಸರಿದೂಗಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರ ರಾಮಣ್ಣ ಲಮಾಣಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಎಸ್‌ಪಿ ಶಿವಪ್ರಕಾಶ್‌ ದೇವರಾಜು, ಡಿಸಿಎಫ್‌ ದೀಪಿಕಾ ಬಾಜಪೇಯಿ, ಪ್ರಭಾರ ಎಡಿಸಿ ಅನ್ನಪೂರ್ಣ ಮುಕಮ್ಮನವರ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಬಸವರಾಜ ಇದ್ದರು.

ಇಲಾಖೆಯ ಎಲ್ಲ ಯೋಜನೆಗಳನ್ನು ಸರಿಯಾದ ಕ್ರಮದಲ್ಲಿ ಅನುಷ್ಟಾನಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಯೋಜನೆ ತಲುಪಿಸಬೇಕು
ಡಾ. ಎಂ.ಟಿ.ರೇಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ

ಅಂಗವಿಕಲರಿಗೆ ಒದಗಿಸಲಾಗುತ್ತಿರುವ ಯುಡಿಐಡಿ ಕಾರ್ಡ್‌ಗಳನ್ನು ಶೀಘ್ರ ನೀಡಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಯುಡಿಐಡಿ ಕಾರ್ಡ್‌ ವಿತರಣೆಗೆ ನುರಿತ ತಂಡದ ಕೊರತೆ ಇದ್ದು, ಇದನ್ನು ಸರಿದೂಗಿಸಲು ತಿಳಿಸಲಾಗಿದೆ.
ಎಂ.ಸುಂದರೇಶ್ ಬಾಬು, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT