ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಶ್ರೀ ವಿರುದ್ಧ ಮತ್ತೊಂದು ವಂಚನೆ ಆರೋಪ: ಅಮಾನತು ಆಗಿದ್ದ ಪಿಡಿಒ ದೂರು!

ಶಿರಹಟ್ಟಿ ಕ್ಷೇತ್ರದ ಟಿಕೆಟ್‌ಗಾಗಿ ದುಡ್ಡು ಕೊಟ್ಟಿದ್ದ ಆರೋಪ
Published 22 ಸೆಪ್ಟೆಂಬರ್ 2023, 20:24 IST
Last Updated 22 ಸೆಪ್ಟೆಂಬರ್ 2023, 20:24 IST
ಅಕ್ಷರ ಗಾತ್ರ

ಮುಂಡರಗಿ (ಗದಗ ಜಿಲ್ಲೆ): ಕರ್ತವ್ಯಲೋಪದ ಆರೋಪದಲ್ಲಿ ಅಮಾನತುಗೊಂಡಿರುವ ಶಿರಹಟ್ಟಿ ತಾಲ್ಲೂಕಿನ ರಣತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸಂಜಯ ಚವಡಾಳ ಎಂಬುವರು ಅಭಿನವ ಹಾಲವೀರಪ್ಪ ಸ್ವಾಮೀಜಿ ವಿರುದ್ಧ ವಂಚನೆ ಆರೋಪ ಮಾಡಿ, ಮುಂಡರಗಿ ಪೊಲೀಸ್‌ ಠಾಣೆಗೆ ಸೆಪ್ಟೆಂಬರ್ 18ರಂದು ಲಿಖಿತ ದೂರು ನೀಡಿದ್ದಾರೆ.

ಶಿರಹಟ್ಟಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಸಂಜಯ ಚವಡಾಳ, ಅರುಂಧತಿ ಫೌಂಡೇಷನ್‌ ಹೆಸರಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ‘ಬಿಜೆಪಿಯಲ್ಲಿ ತುಂಬಾ ಪ್ರಭಾವಿ’ ಎಂದು ಬಿಂಬಿಸಿಕೊಂಡಿದ್ದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದರು. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವಂತೆ ಅವರಿಗೆ ಕೋರಿದ್ದರು. ಅದಕ್ಕಾಗಿ ₹50 ಲಕ್ಷ, ₹40 ಲಕ್ಷ ಮತ್ತು ₹10 ಲಕ್ಷದಂತೆ ಒಟ್ಟು ಮೂರು ಕಂತುಗಳಲ್ಲಿ ₹1 ಕೋಟಿ ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಸೂಕ್ತ ದಾಖಲೆ ಇಲ್ಲದ ಕಾರಣ ಮುಂಡರಗಿ ಪೊಲೀಸರು ಎನ್‌ಸಿ ದಾಖಲಿಸಿ ಕಳುಹಿಸಿದ್ದಾರೆ. ಸ್ವಾಮೀಜಿಗೆ ಹಣ ನೀಡಿರುವ ಬಗ್ಗೆ ಸಮರ್ಪಕ ದಾಖಲೆ ಒದಗಿಸುವಂತೆ ಪೊಲೀಸರು ಸಂಜಯ ಅವರಿಗೆ ಸೂಚಿಸಿದ್ದಾರೆ.

‘ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ ಹೇಳಿ ಹಿರೇಹಡಗಲಿಯ ಅಭಿನವ ಹಾಲವೀರಪ್ಪ ಸ್ವಾಮೀಜಿ ₹1 ಕೋಟಿ ಪಡೆದಿದ್ದಾರೆ ಎಂದು ಆರೋಪಿಸಿ ಸಂಜಯ ಲಿಖಿತ ದೂರು ನೀಡಿದ್ದಾರೆ. ಹಣ ಕೊಟ್ಟಿರುವುದಕ್ಕೆ ದಾಖಲೆ ನೀಡುವಂತೆ ಅವರಿಗೆ ನೋಟಿಸ್‌ ಕೊಡಲಾಗಿದೆ. ದಾಖಲಾತಿ ಒದಗಿಸಿದರೆ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲಾಗುವುದು’ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೂರು ವರ್ಷಗಳಿಂದ ಚುನಾವಣೆಗೆ ಸಿದ್ಧತೆ ನಡೆಸಿದ್ದ ಸಂಜಯ ವಿಜಯದಶಮಿ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಪಾಲ್ಗೊಂಡಿದ್ದರು. ಪಥಸಂಚಲನದಲ್ಲಿ ಯಾರಾದರೂ ಭಾಗವಹಿಸಬಹುದು. ಅದೇ ರೀತಿ, ಸಂಜಯ ಕೂಡ ಚುನಾವಣೆ ತಯಾರಿಗೆ ಗಣವೇಷ ಧರಿಸಿರಬಹುದೇ ಹೊರತು, ಪೂರ್ಣಪ್ರಮಾಣದ ಆರ್‌ಎಸ್‌ಎಸ್‌ ಕಾರ್ಯಕರ್ತರಲ್ಲ’ ಎಂದು ಆರ್‌ಎಸ್‌ಎಸ್‌ ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT