ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟವೂ ಇಲ್ಲ, ಲಾಭವೂ ಇಲ್ಲ: ತೂಗುಯ್ಯಾಲೆಯಲ್ಲಿ ಹೋಟೆಲ್ ಉದ್ಯಮ

ಗದಗ ಜಿಲ್ಲೆ ಹೋಟೆಲ್‌ಗಳ ಸ್ಥಿತಿ ಗತಿ
Last Updated 27 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಗದಗ: ‘ನಷ್ಟವೂ ಇಲ್ಲ; ಲಾಭವೂ ಇಲ್ಲ’ ಎಂಬ ತೂಗುಯ್ಯಾಲೆ ಜೀಕುತ್ತಿದೆ ಜಿಲ್ಲೆಯ ಹೋಟೆಲ್‌ ಉದ್ಯಮ.

ಯಾವ ತಿನಿಸನ್ನು ಆರ್ಡರ್‌ ಮಾಡುವುದು ಎಂಬಷ್ಟು ಗೊಂದಲ ಮೂಡಿಸುತ್ತಿದ್ದ ಮೆನು ಕಾರ್ಡ್‌ಗಳೆಲ್ಲವೂ ಇಂದು ಕಪಾಟು ಸೇರಿವೆ. ರೆಸ್ಟೊರೆಂಟ್‌ಗಳಲ್ಲಿ ಇದ್ದ ತ್ರೀ ಕೋರ್ಸ್‌, ಫೈ ಕೋರ್ಸ್‌ ಮೆನುಗಳು ಬಂದ್‌ ಆಗಿವೆ. ಈಗ ಗ್ರಾಹಕರಿಗೆ ರೆಸ್ಟೊರೆಂಟ್‌ನವರೇ ಸಿದ್ಧಪಡಿಸಿದ ಚಿಕ್ಕ ಚಿಕ್ಕ ‘ಅ–ಲಾ–ಕಾರ್ಟ್‌’ ಮೆನುವಷ್ಟೇ ಲಭ್ಯವಿದೆ.

ಗದಗ–ಬೆಟಗೇರಿ ಹೋಟೆಲ್‌ ಮಾಲೀಕರ ಸಂಘಕ್ಕೆ ಅವಳಿ ನಗರದಿಂದ 30 ಹೋಟೆಲ್‌ಗಳು ನೋಂದಣಿಯಾಗಿವೆ. ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಹೋಟೆಲ್‌ನವರು ಸಂಘದ ಸದಸ್ಯರಾಗಿದ್ದಾರೆ. ಎಲ್ಲ ಹೋಟೆಲ್‌ಗಳ ಪರಿಸ್ಥಿತಿಯೂ ಆರಕ್ಕೇರಿಲ್ಲ; ಮೂರಕ್ಕೆ ಇಳಿದಿಲ್ಲ ಎಂಬಂತೆಯೇ ಇದೆ. ಕೆಲವು ಹೋಟೆಲ್‌ಗಳಲ್ಲಿ ಉದ್ಯೋಗ ಕಡಿತವಾಗಿದ್ದರೆ; ಇನ್ನು ಕೆಲವು ರೆಸ್ಟೋರೆಂಟ್‌ಗಳಲ್ಲಿ ಕೆಲಸಗಾರರನ್ನು ಉಳಿಸಿಕೊಂಡು ಅರ್ಧ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ.

‘ಗದಗ ನಗರದಲ್ಲಿರುವ ನೇಸರ ಉಪಾಹಾರದಲ್ಲಿ ಲಾಕ್‌ಡೌನ್‌ಗೂ ಮುಂಚೆ 15 ಮಂದಿ ಕೆಲಸ ಮಾಡುತ್ತಿದ್ದರು. ದಿನದ ವ್ಯಾಪಾರ ₹15ರಿಂದ ₹16 ಸಾವಿರ ಇತ್ತು. ಈಗ 5 ಜನ ಮಾತ್ರ ಕೆಲಸ ಮಾಡುತ್ತಿದ್ದು, ದಿನದ ವ್ಯಾಪಾರ ₹4ರಿಂದ ₹5 ಸಾವಿರದ ಆಸುಪಾಸಿನಲ್ಲಿದೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕ ಹಾಗೂ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ಡಾ. ಕಾ.ವೆಂ.ಶ್ರೀನಿವಾಸ.

‘ಕಟ್ಟಡದ ಬಾಡಿಗೆ, ವಿದ್ಯುತ್‌ ಶುಲ್ಕ, ಕೆಲಸಗಾರರ ಸಂಬಳ, ತರಕಾರಿ, ದಿನಸಿ, ಜಿಎಸ್‌ಟಿ ಎಲ್ಲವನ್ನೂ ಲೆಕ್ಕ ಹಾಕಿದರೆ ದಿನದ ವ್ಯಾಪಾರ ಅದಕ್ಕೆ ಸರಿ ಹೊಂದುತ್ತದೆ. ₹500 ಉಳಿದರೆ ಅದೇ ಹೆಚ್ಚು. ಹೋಟೆಲ್‌ ಉದ್ಯಮ ಚೇತರಿಸಿಕೊಳ್ಳಲು ಇನ್ನೂ ಕನಿಷ್ಠ ಒಂದೂವರೆ ವರ್ಷ ಬೇಕು’ ಎಂದು ಹೇಳಿದರು.

‘ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೆಸ್ಟೊರೆಂಟ್‌ ನಡೆಸುತ್ತಿದ್ದೇವೆ. ಆದರೂ ಉದ್ಯಮ ಚೇತರಿಸಿಲ್ಲ. ಲಾಕ್‌ಡೌನ್‌ಗಿಂತ ಮುನ್ನ ಇದ್ದ ವಹಿವಾಟಿಗೂ ಆನಂತರ ವಹಿವಾಟಿಗೂ ಶೇ 70ರಷ್ಟು ವ್ಯತ್ಯಾಸ ಇದೆ. ವೀಕೆಂಡ್‌ಗಳಲ್ಲಿ ರೆಸ್ಟೊರೆಂಟ್‌ಗೆ ಬರುವವರ ಸಂಖ್ಯೆ ಕುಸಿದಿದೆ. ಫುಡ್ ಫೆಸ್ಟಿವಲ್‌ಗಳನ್ನು ಬಂದ್‌ ಮಾಡಿದ್ದೇವೆ. ಇಂಡಿಯನ್‌, ಚೈನೀಸ್‌, ಕಾಂಟಿನೆಂಟಲ್‌ ಹೀಗೆ ತರಹೇವಾರಿ ಆಯ್ಕೆ ಒದಗಿಸುತ್ತಿದ್ದ ಮೆನು ಕಾರ್ಡ್‌ಗಳನ್ನು ಬದಲಿಸಿದ್ದೇವೆ. ಸ್ಟಾರ್ಟರ್ಸ್‌, ಮೇನ್‌ ಕೋರ್ಸ್‌, ಡೆಸರ್ಟ್ಸ್‌ ವಿಭಾಗದಲ್ಲಿ ಬೆರಳೆಣಿಕೆಯಷ್ಟು ಆಯ್ಕೆ ಮಾತ್ರ ಒದಗಿಸಿದ್ದೇವೆ’ ಎಂದು ಹೇಳಿದರು ಕ್ಲಾರ್ಕ್ಸ್‌ ಇನ್‌ ಹೋಟೆಲ್‌ನಲ್ಲಿರುವ ‘ದಿ ಬ್ರಿಡ್ಜ್‌’ ರೆಸ್ಟೊರೆಂಟ್‌ನ ಸಹಾಯಕ ವ್ಯವಸ್ಥಾಪಕ ರವಿ ನಾಯಕ್‌.

‘ನಮ್ಮ ರೆಸ್ಟೊರೆಂಟ್‌ 46 ಆಸನ ವ್ಯವಸ್ಥೆ ಹೊಂದಿದೆ. ಅದನ್ನು 22ಕ್ಕೆ ಕುಗ್ಗಿಸಿದ್ದೇವೆ. ರೆಸ್ಟೊರೆಂಟ್‌ ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್‌ ಮಾಡುತ್ತೇವೆ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಿದ್ದೇವೆ. ಶುಚಿತ್ವಕ್ಕೆ ಹೆಚ್ಚು ಗಮನ ನೀಡಿದ್ದೇವೆ. ಆದರೂ ವ್ಯಾಪಾರ ಮಾತ್ರ ವೃದ್ಧಿಯಾಗಿಲ್ಲ. ನಮ್ಮ ರೆಸ್ಟೊರೆಂಟ್‌ ಸದ್ಯದ ಪರಿಸ್ಥಿತಿಯಲ್ಲಿ ‘ನೋ ಲಾಸ್‌; ನೋ ಪ್ರಾಫಿಟ್‌’ ತತ್ವದಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.

ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗದ ಕಾರಣದಿಂದಲೂ ಹೋಟೆಲ್‌ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಆದರೆ, ಖಾನಾವಳಿಗಳು ಮಾತ್ರ ಸಮೃದ್ಧವಾಗಿ ವಹಿವಾಟು ನಡೆಸುತ್ತಿವೆ. ಕೋವಿಡ್‌–19 ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ.

ನಷ್ಟದಲ್ಲಿ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳು
‘ಬಾರ್‌ ಅಂಡ್‌ ರೆಸ್ಟೊರೆಂಟ್‌ ಉದ್ಯಮ ನಷ್ಟದಲ್ಲಿದೆ. ಚೇತರಿಸಿಕೊಳ್ಳಲು ಇನ್ನೂ ಒಂದು ವರ್ಷ ಬೇಕು. ಈಗ ಪಾರ್ಸೆಲ್‌ಗಷ್ಟೇ ಅವಕಾಶ ಕೊಟ್ಟಿರುವುದರಿಂದ ದೊಡ್ಡ ನಷ್ಟವಾಗುತ್ತಿದೆ’ ಎಂದು ಸಾಯಿ ಬಾರ್‌ ಅಂಡ್‌ ರೆಸ್ಟೊರೆಂಟ್‌ ಮಾಲೀಕ ಶಂಕರ್‌ ಹಾನಗಲ್‌ ಹೇಳಿದರು.

‘ಕೊರೊನಾ ಲಾಕ್‌ಡೌನ್‌ ಆರಂಭದ ಮೂರು ತಿಂಗಳು ತುಂಬ ಕಷ್ಟ ಅನುಭವಿಸಬೇಕಾಯಿತು. ಲಾಡ್ಜ್‌ ಬಂದ್‌ ಆಗಿದೆ. ಸಾಲ ಹೆಚ್ಚಾಗಿದೆ. ನೌಕರರಿಗೆ ಸಂಬಳ, ಕರೆಂಟ್‌ ಬಿಲ್‌, ಬಾಡಿಗೆ, ಜಿಎಸ್‌ಟಿ ಹೀಗೆ ಹಲವು ಕಾರಣಗಳಿಂದ ಬಾರ್‌ಗಳು ನಷ್ಟ ಅನುಭವಿಸುತ್ತಿವೆ’ ಎಂದು ಹೇಳಿದರು.

‘ಕೊರೊನಾ ಕಾರಣದಿಂದಾಗಿ ಜನರ ಬಳಿ ಹಣದ ಹರಿವು ಕೂಡ ಕಡಿಮೆಯಾಗಿರುವುದರಿಂದ ಉದ್ಯಮ ನಷ್ಟದಲ್ಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT