ಭಾನುವಾರ, ಜೂಲೈ 12, 2020
29 °C
ಸಂತಾನೋತ್ಪತ್ತಿಗೆ ನರೇಗಲ್‌ ಹೋಬಳಿಗೆ ವಲಸೆ ಬಂದಿರುವ ಹಕ್ಕಿಗಳು

ಮಳೆಯ ಮುನ್ಸೂಚನೆಯೊಂದಿಗೆ ಬಂದ ಚಾತಕ ಪಕ್ಷಿ..!

ಚಂದ್ರು ಎಂ. ರಾಥೋಡ್ Updated:

ಅಕ್ಷರ ಗಾತ್ರ : | |

Prajavani

ನರೇಗಲ್: ಹೋಬಳಿ ವ್ಯಾಪ್ತಿಯಲ್ಲಿ, ಬಯಲು ಪ್ರದೇಶಗಳಲ್ಲಿ ಇತ್ತೀಚೆಗೆ ಚಾತಕ ಪಕ್ಷಿಗಳು (ಜಾಕೊಬಿನ್ ಕುಕ್ಕೂ) ಕಂಡುಬರುತ್ತಿವೆ. ಆಫ್ರಿಕಾ ಮತ್ತು ಏಷ್ಯಾ ಖಂಡದ ವಿವಿಧೆಡೆಯಿಂದ ಜೂನ್ ತಿಂಗಳಲ್ಲಿ ಭಾರತಕ್ಕೆ ವಲಸೆ ಬರುವ ಈ ಪಕ್ಷಿಗಳನ್ನು ಮುಂಗಾರು ಮಳೆಯ ಮುನ್ಸೂಚಕ ಎಂದೇ ಕರೆಯಲಾಗುತ್ತದೆ.

ಬಯಲು ಪ್ರದೇಶಗಳಲ್ಲಿ ಮರದ ಕೊಂಬೆಯ ಮೇಲೆ ಠೀವಿಯಿಂದ ಕುಳಿತು, ಸಿಳ್ಳೆ ಹಾಕುವ ಈ ಉದ್ದ ಬಾಲದ  ಚಾತಕ ಪಕ್ಷಿಗಳನ್ನು ರೈತರು, ಮಳೆಯ ಭರವಸೆ ನೀಡುವ ಪಕ್ಷಿ ಎಂದೇ ನಂಬುತ್ತಾರೆ. ಸದ್ಯ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಹೆಸರುಕಾಳು, ಶೇಂಗಾ, ಗೋವಿನ ಜೋಳ ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದಾಗಿ ರೈತರು ಮುಗಿಲಿನತ್ತ ಮುಖ ನೆಟ್ಟು ಕುಳಿತಿದ್ದಾರೆ. ಅಲ್ಲಲ್ಲಿ ಕಾಣಸಿಗುವ ಚಾತಕ ಪಕ್ಷಿಗಳು ಮಳೆಯ ಭರವಸೆಯನ್ನು ಹೆಚ್ಚಿಸಿವೆ.

ಈ ಹಕ್ಕಿಗಳು ಮುಂಗಾರು ಮಾರುತದ ದಿಕ್ಕನ್ನು ಗ್ರಹಿಸಿ, ಆ ದಿಕ್ಕಿನತ್ತ ವಲಸೆ ಹೋಗುತ್ತವೆ. ಹೀಗಾಗಿ ’ಮಾರುತಗಳ ಮುಂಗಾಮಿ’ ಎಂದೂ ಈ ಪಕ್ಷಿಯನ್ನು ವರ್ಣಿಸಲಾಗುತ್ತದೆ. ಪುರಾಣ, ಕಾವ್ಯದಲ್ಲೂ ಈ ಹಕ್ಕಿಯ ವಿವರಣೆಯಿದೆ. ‘ಸ್ಥಳೀಯವಾಗಿ ಹರಟೆ ಮಲ್ಲ, ಪಿಕಳಾರ ಹಕ್ಕಿಗಳ ಮೊಟ್ಟೆಗಳು ಈ ಚಾತಕ ಹಕ್ಕಿಗಳ ಮೊಟ್ಟೆಗಳನ್ನು ಹೋಲುತ್ತವೆ. ಚಾತಕ ಪಕ್ಷಿಗಳು ಇವುಗಳ ಗೂಡಿನಲ್ಲಿ ಮೊಟ್ಟೆಯಿಡುತ್ತವೆ. ಜುಲೈ, ಆಗಸ್ಟ್‌ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ತವರಿಗೆ ಮರಳುತ್ತವೆ’ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳಿದರು.

‘ಕೂಗಿ ಗದ್ದಲ ಎಬ್ಬಿಸುವುದರಿಂದ ಇವುಗಳಿಗೆ ’ಚೊಟ್ಟಿ ಕೋಗಿಲೆ’ ಅಥವಾ ’ಗಲಾಟೆ ಕೋಗಿಲೆ’ ಎಂದೂ ಕರೆಯುತ್ತಾರೆ. ಪಕ್ಷಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಗ್ರೀನ್ ಆರ್ಮಿ ತಂಡದ ಸದಸ್ಯ ಸಂಗಮೇಶ ಬಾಗೂರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು