ಗುರುವಾರ , ಆಗಸ್ಟ್ 5, 2021
21 °C

ರೈತ ಹುತಾತ್ಮ ದಿನ: ನರಗುಂದದಲ್ಲಿ ಭಾರಿ ಸಮಾವೇಶಕ್ಕೆ ಸಜ್ಜು, ಟಿಕಾಯತ್‌ಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 (Photo by Money SHARMA / AFP)

ನರಗುಂದ (ಗದಗ ಜಿಲ್ಲೆ): ‘ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಜುಲೈ 21ರಂದು ನರಗುಂದ ಪಟ್ಟಣದಲ್ಲಿ ವಿವಿಧ ರೈತ ಸಂಘಟನೆಗಳ ಸದಸ್ಯರು ಸೇರಿ ಒಂದೇ ವೇದಿಕೆಯಲ್ಲಿ ರೈತರ ಸಮಾವೇಶ ನಡೆಸುವ ಮೂಲಕ ಚರಿತ್ರೆ ನಿರ್ಮಿಸಲಾಗುವುದು’ ಎಂದು ಮಹದಾಯಿ ಮಹಾ ವೇದಿಕೆ ಸಂಚಾಲಕ ಶಂಕ್ರಣ್ಣ ಅಂಬಲಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಲೊಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆದ ಹುತಾತ್ಮ ರೈತ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರತಿ ವರ್ಷ ಪ್ರತ್ಯೇಕ ವೇದಿಕೆಯಲ್ಲಿ ರೈತರು ಸಭೆ ನಡೆಸುತ್ತಿದ್ದರು. ಅದನ್ನು ನಿಲ್ಲಿಸಿ ಒಂದೇ ವೇದಿಕೆಯಲ್ಲಿ ಎಲ್ಲ ಸಂಘಟನೆಗಳ ರೈತರು ಭಾಗವಹಿಸಿ, ಒಗ್ಗಟ್ಟಾಗಿ ಸಮಸ್ಯೆಗಳನ್ನು ಚರ್ಚಿಸಿ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುವುದು’ ಎಂದರು.

‘ಈಗಾಗಲೇ ರಾಷ್ಟ್ರೀಯ ರೈತ ಕಿಸಾನ್ ಮೋರ್ಚಾದ ಅಧ್ಯಕ್ಷ ಟಿಕಾಯತ್, ಕಾರ್ಯದರ್ಶಿ ಯುದ್ಧವೀರ ಸಿಂಗ್, ಸದಸ್ಯ ಡಾ.ಸಕ್ಪಾಲ್ ಸಿಂಗ್, ಸ್ವರಾಜ್ ಇಂಡಿಯಾದ ಸಂಚಾಲಕ ಯೋಗೇಂದ್ರ ಯಾಧವ, ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಸೇರಿದಂತೆ ಮೊದಲಾದವರನ್ನು ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

‘ಕೃಷಿ ಇಲಾಖೆ ಕಚೇರಿ ಸಮೀಪ ಸಿದ್ಧ ಮಾಡಲಾಗುವ ಬೃಹತ್ ವೇದಿಕೆಯಲ್ಲಿ ಈ ಸಮಾವೇಶ ನಡೆಯಲಿದ್ದು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿವಿಧ ರೈತ ಸಂಘಟನೆಗಳ ಸದಸ್ಯರು ಭಾಗವಹಿಸುವರು’ ಎಂದರು.

‘ಮೊದಲ ಬಾರಿಗೆ ವಿವಿಧ ರೈತ ಸಂಘಟನೆಗಳಾದ ಕರ್ನಾಟಕ ರಾಜ್ಯ ರೈತ ಸಂಘ, ಮಹದಾಯಿ ಮಹಾವೇದಿಕೆ ಕರ್ನಾಟಕ ರೈತ ಸೇನೆ, ರೈತ ಸೇನಾ ಕರ್ನಾಟಕ, ಕರ್ನಾಟಕ ಪ್ರಾಂತ ರೈತ ಸಂಘ, ಉತ್ತರ ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಪರ ಸಂಘಟನೆಗಳ ಸದಸ್ಯರು ಒಂದೆಡೆ ಸೇರಲಿದ್ದಾರೆ. ಸಮಾವೇಶ ಯಶಸ್ಸಿಗೆ ಸ್ವಯಂ ಸೇವಕ ಸಮಿತಿ, ಸ್ವಾಗತ ಸಮಿತಿ, ಉಪಾಹಾರ ಸಮಿತಿ, ಪ್ರಚಾರ ಸಮಿತಿ ರಚಿಸಲಾಗಿದೆ’ ಎಂದು ತಿಳಿಸಿದರು.

ಸಮಾವೇಶದಲ್ಲಿ 10 ಸಾವಿರ ರೈತರು ಸೇರಲಿದ್ದು, ಕೋವಿಡ್ ನಿಯಮ ಪಾಲಿಸಲಾಗುವುದು. ಮಹದಾಯಿ ಕಾಮಗಾರಿ ಆರಂಭಕ್ಕೆ ಒತ್ತಾಯ, ಕೃಷಿ ವಿರೋಧಿ ಕಾನೂನು ರದ್ಧತಿಗೆ ಆಗ್ರಹ, ಕಬ್ಬು ಬೆಳೆಗಾರರ ಬಾಕಿ ಹಣ ಭರಿಸುವುದು, ಶಾಶ್ವತ ಬೆಂಬಲ ಬೆಲೆ ಕೇಂದ್ರ ಆರಂಭಿಸುವುದು, ಬೆಳೆ ವಿಮೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಂಬಲಿ ಹೇಳಿದರು.

ರೈತ ಸಂಘದ ವಿ.ವೈ.ಹರ್ಲಾಪುರ, ಅಂದಾನೆಪ್ಪ ಚಿಂಚಲಿ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ಶಂಕ್ರಗೌಡ ಪಾಟೀಲ, ಚಂದ್ರಗೌಡ ಪಾಟೀಲ, ವೀರಬಸಪ್ಪ ಹೂಗಾರ, ಚನ್ನು ನಂದಿ, ನಬೀಸಾಬ ಕಿಲ್ಲೆದಾರ, ಶಿವಾಜಿ ಬೋಸಲೆ, ಮಹಾಗುಂಡಪ್ಪ ಅಂಗಡಿ, ರೇವಣಪ್ಪ ಹೈಗರ, ಮಲ್ಲಣ್ಣ ಅಲೇಕಾರ, ವೆಂಕನಗೌಡ ಪಾಟೀಲ, ವೀರಣ್ಣ ಸೊಪ್ಪಿನ, ಎಸ್.ಬಿ.ಜೋಗಣ್ಣವರ, ಜಗದೀಶ ಬೆಳವಟಗಿ ಇದ್ದರು.

ರೈತ ಬಂಡಾಯ ನಡೆದ ಈ ಭೂಮಿಯಲ್ಲಿಯೇ ಮೊದಲ ಬಾರಿಗೆ ರೈತರ ಸಂಘಟನೆ ಉದಯವಾಯಿತು. ಅದೇ ರೀತಿಯಲ್ಲಿ ಮತ್ತೆ ಈ ಭೂಮಿಯಲ್ಲಿ ರೈತ ಸಂಘಟನೆಗಳು ಒಂದಾಗುತ್ತಿವೆ.
 - ಶಂಕ್ರಣ್ಣ ಅಂಬಲಿ, ಮಹದಾಯಿ ಮಹಾ ವೇದಿಕೆ ಸಂಚಾಲಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು