ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಕನ್ನಡ ನಾಡು, ನುಡಿಯ ಅಭಿಮಾನ ಬೆಳೆಸಿ: ಬಿ.ಸಿ.ಪಾಟೀಲ

67ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ
Last Updated 2 ನವೆಂಬರ್ 2022, 7:00 IST
ಅಕ್ಷರ ಗಾತ್ರ

ಗದಗ: ‘ಇಂಗ್ಲಿಷ್‌ ಸೇರಿದಂತೆ ಹಲವು ಭಾಷೆಗಳ ಅತಿಯಾದ ದಾಳಿ ಕನ್ನಡದ ಮೇಲಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನ ಬೆಳೆಸುವ ಕೆಲಸವಾಗಬೇಕು. ಕನ್ನಡ ಕಲಿಕೆಯ ಬಗ್ಗೆ ಯುವಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ಪಾಲಕರು ಹಾಗೂ ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ನಡೆದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆ ಸಮೃದ್ಧವಾಗಿದೆಯೆಂದು ಕೈಕಟ್ಟಿ ಕುಳಿತುಕೊಳ್ಳದೇ ಕುವೆಂಪು ವಾಣಿಯಂತೆ ಕನ್ನಡ ನೆಲ, ಜಲ ಉಳಿಸಲು ಪಣತೊಡಬೇಕು. ಕನ್ನಡದ ಉಳಿವಿಗಾಗಿ ಕನ್ನಡದಲ್ಲೇ ಮಾತನಾಡುವ ಹಾಗೂ ಬರೆಯುವ ಸಂಕಲ್ಪ ತೊಡಬೇಕು. ಕನ್ನಡ ರಾಜ್ಯೋತ್ಸವವನ್ನು ನಿತ್ಯೋತ್ಸವ ಮಾಡಬೇಕು’ ಎಂದು ತಿಳಿಸಿದರು.

‘ಕನ್ನಡದ ಬಗ್ಗೆ ಸ್ವಾಭಿಮಾನ ಹೆಚ್ಚಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಅ.28ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿ, ವಿಶ್ವದಾಖಲೆ ನಿರ್ಮಿಸಿದೆ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಮತ್ತು ಯೋಜನೆಗಳನ್ನು ಹಮ್ಮಿಕೊಂಡಿದೆ’ ಎಂದು ಹೇಳಿದರು.

‘ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಬೆಳವಣಿಗೆಗೆ ಗದಗ ಜಿಲ್ಲೆಯ ಕೊಡುಗೆ ದೊಡ್ಡದಿದೆ. ಇಲ್ಲಿಯ ವೀರನಾರಾಯಣ-ತ್ರಿಕೂಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳ ಶಿಲ್ಪಕಲೆ ಮೈ-ಮನಗಳನ್ನು ಮುದಗೊಳಿಸುತ್ತದೆ. ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕುಮಾರವ್ಯಾಸ, ಚಾಮರಸರು ಮತ್ತು ಏಕೀಕರಣ ಚಳವಳಿಯ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್ ಅವರನ್ನು ನಾವೆಲ್ಲ ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಬೇಕಿದೆ’ ಎಂದು ಹೇಳಿದರು.

ಬೆಟಗೇರಿಯ ಮಂಜು ಪ್ರೌಢಶಾಲೆ, ಶಾಸ್ತ್ರಿಜೀ ಪ್ರೌಢಶಾಲೆ ಹಾಗೂ ವಿಡಿಎಸ್‌ಟಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿಧ್ಯಾರ್ಥಿಗಳು ಕನ್ನಡ ನಾಡು, ನುಡಿಯನ್ನು ವರ್ಣಿಸುವ ಗೀತೆಗಳಿಗೆ ಆಕರ್ಷಕವಾಗಿ ಹೆಜ್ಜೆಹಾಕಿದರು.

ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಗದಗ, ರೋಣ ಹಾಗೂ ಲಕ್ಷ್ಮೇಶ್ವರ ವಿಧಾನಸಭಾ ಕ್ಷೇತ್ರಗಳ ತಲಾ ಆರು ಮಂದಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಶಾಸಕ ಎಚ್.ಕೆ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಎಂಸಿಎ ಅಧ್ಯಕ್ಷ ಎಂ.ಎಸ್.ಕರಿಗೌಡರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಸಿಇಒ ಡಾ. ಸುಶೀಲಾ ಬಿ., ಎಸ್‌ಪಿ ಶಿವಪ್ರಕಾಶ ದೇವರಾಜು, ಎಡಿಸಿ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಅನ್ನಪೂರ್ಣ ಹಾಗೂ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದತ್ತಪ್ರಸನ್ನ ಪಾಟೀಲ ಹಾಗೂ ಮಂಜರಿ ಹೊಂಬಾಳೆ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಹಾಗೂ ಸಂಗಡಿಗರು ನಾಡಗೀತೆ ಪ್ರಚುರ ಪಡಿಸಿದರು.

ವಿವಿಧ ಸಾಧಕರಿಗೆ ಸನ್ಮಾನ

ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದ ನಾಗಮ್ಮ ಜೋಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಮಹಾದೇವಪ್ಪ ಹಳ್ಳಿ, ಕರ್ನಾಟಕ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಅಶೋಕ ಸುತಾರ, ದಾನಪ್ಪ ಹಡಪದ, ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ರಮೇಶ ಗಾವರವಾಡ, ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಚನ್ನವೀರ ಶಾಸ್ತ್ರಿ ಹಿರೇಮಠ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಾ.ರಾಜೇಂದ್ರ ಎಸ್. ಗಡಾದ, ಪತ್ರಕರ್ತರಾದ ಶಶಿಕಾಂತ ಕುಲಕರ್ಣಿ, ಶಿವಕುಮಾರ ಕುಷ್ಟಗಿ, ‘ಪ್ರಜಾವಾಣಿ’ ಛಾಯಾಚಿತ್ರಗ್ರಾಹಕ ಬನೇಶ ಕುಲಕರ್ಣಿ, ಬೆಟಗೇರಿ ಪಿಎಸ್‌ಐ ಪ್ರಕಾಶ ಬಣಗಾರ, ಬಡಾವಣೆ ಪೋಲಿಸ್ ಠಾಣೆ ಪೇದೆ ಪರಶುರಾಮ ದೊಡ್ಡಮನಿ, ಕ್ರೀಡಾ ಕ್ಷೇತ್ರದಲ್ಲಿ ಗಂಗಪ್ಪ ಇಳಕಲ್ಲ, ಆದಿಲ್ ನೈಬುಸಾಬ, ‘ಸ್ವಚ್ಛ ವಿದ್ಯಾಲಯ’ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾದ ಆದರ್ಶ ಮಹಾವಿದ್ಯಾಲಯ ಇಟಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಗಳೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಜನೂರು, ಶಿಕ್ಷಣ ಕ್ಷೇತ್ರದಲ್ಲಿ ಈಶ್ವರಪ್ಪ ರೇವಡಿ, ವಿನಾಯಕ ಬಂಡಾ, ಜ್ಯೋತಿ ಕ್ಯಾಮನಗೌಡ್ರ, ನಿಖಿಲ್ ಕಡಕಭಾವಿ, ಪ್ರತಿಭಾ ಸೊರಬದ, ಸಂಗೀತಾ ಹುಬ್ಬಳ್ಳಿ, ಅಕ್ಕಮಹಾದೇವಿ ಹಿರೇಮಠ, ಮಾಂತೇಶ ಮಂಡಸೊಪ್ಪಿ, ಮುಸ್ಕಾನ್ ತಹಶೀಲ್ದಾರ ಅವರನ್ನು ಸಚಿವ ಬಿ.ಸಿ. ಪಾಟೀಲ ಹಾಗೂ ಗಣ್ಯರು ಸನ್ಮಾನಿಸಿದರು.

ಆಕರ್ಷಕ ಪಥ ಸಂಚಲನ

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಮಂಗಳವಾರ ಬೆಳಿಗ್ಗೆ 9ಕ್ಕೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು. ಬಳಿಕ, ತೆರೆದ ಜೀಪಿನಲ್ಲಿ ವಿವಿಧ ದಳಗಳ ವೀಕ್ಷಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ನೇತೃತ್ವದ ಆಕರ್ಷಕ ಪಥಸಂಚಲನದ ಗೌರವ ಸ್ಕೀಕರಿಸಿದರು.

ಜಿಲ್ಲಾ ಪೊಲೀಸ್‌ ಬ್ಯಾಂಡ್‌ನ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡಿನ ಹಿಮ್ಮೇಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್‌, ಗೃಹರಕ್ಷಕದಳ, ಅರಣ್ಯ ರಕ್ಷಕ ಪಡೆ, ಅಗ್ನಿಶಾಮಕ ದಳ, ಅಬಕಾರಿ ದಳ, ಎನ್.ಸಿ.ಸಿ. ಕೆಡೆಟ್ಸ್‌, ಎಸ್.ಎಂ.ಕೃಷ್ಣಾ ನಗರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಜನರಲ್ ಹಾಗೂ ಸೇವಾದಳದ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT