ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಕನ್ನಡದ ನುಡಿತೇರು ಎಳೆಯಲು ಪೈಪೋಟಿ– ಎಲ್ಲರಲ್ಲೂ ಗೆಲ್ಲುವ ವಿಶ್ವಾಸ

ಕಣದಲ್ಲಿ ನಾಲ್ವರು ಅಭ್ಯರ್ಥಿಗಳು
Last Updated 19 ನವೆಂಬರ್ 2021, 2:46 IST
ಅಕ್ಷರ ಗಾತ್ರ

ಗದಗ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣಾ ಕಣ ರಂಗೇರಿದ್ದು, ಸ್ಪರ್ಧೆಯಲ್ಲಿರುವ ನಾಲ್ವರೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರಲ್ಲದೇ, ಕನ್ನಡ ಕಟ್ಟುವ ತುಡಿತವನ್ನೂ ವ್ಯಕ್ತಪಡಿಸಿದ್ದಾರೆ.

ಸದ್ಯ ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳು ತಮ್ಮ ಗೆಲುವಿಗೆ ಇಂತಹದ್ದೇ ಅಂಶ ಕಾರಣವಾಗಲಿದೆ ಎಂಬ ಅಂದಾಜು ಹೊಂದಿದ್ದು ಜಾತಿ, ರಾಜಕೀಯ ಪಕ್ಷ, ಪ್ರಾಮಾಣಿಕತೆ ಹಾಗೂ ಬದ್ಧತೆಯ ಬಲದ ಮೇಲೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಮಾತ್ರ ಫಲಿತಾಂಶ ಬಂದ ನಂತರವಷ್ಟೇ ತಿಳಿಯಲಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಡಾ. ಶರಣು ಗೋಗೇರಿ, ಸಾಹಿತಿ, ಶಿಕ್ಷಕ ವಿವೇಕಾನಂದ ಗೌಡ ಪಾಟೀಲ, ಸಾಹಿತಿ ಐ.ಕೆ. ಕಮ್ಮಾರ ಹಾಗೂ ಶಿಕ್ಷಕ ಡಾ. ಸಂಗಮೇಶ ತಮ್ಮನಗೌಡ್ರ ಚುನಾವಣಾ ಕಣದಲ್ಲಿದ್ದಾರೆ. ಸಾಹಿತಿ ಐ.ಕೆ. ಕಮ್ಮಾರ ಅವರನ್ನು ಹೊರತುಪಡಿಸಿ ಉಳಿದ ಮೂವರು ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿ
ದ್ದಾರೆ. ‘ಫೇಸ್‌ಬುಕ್‌ಗಿಂತ ಫೇಸ್‌ ನೋಡಿ ಮತ ಕೊಡಿ’ ಎಂಬುದು ಕಮ್ಮಾರ ಅವರ ಚುನಾವಣಾ ಸ್ಲೋಗನ್‌ ಆಗಿದೆ!

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಇಬ್ಬರ ನಡುವೆ ನೇರ ಹಣಾಹಣಿ ಇದೆ ಎಂಬ ಮಾತುಗಳು ಸಾಹಿತ್ಯಿಕ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ಅಭ್ಯರ್ಥಿಗಳು ಮಾತ್ರ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

‘ಚುನಾವಣೆಯಲ್ಲಿ ನೇರ ಹಣಾಹಣಿ ಇಲ್ಲ. ಗೆಲುವು ನನ್ನದೇ. ಆದರೆ, ಎಷ್ಟು ಅಂತದಲ್ಲಿ ಗೆಲುವು ಸಾಧಿಸುತ್ತೇನೆ ಎಂಬುದರ ಮೇಲಷ್ಟೇ ನನ್ನ ಗಮನವಿದೆ’ ಎನ್ನುತ್ತಾರೆ ಡಾ. ಶರಣು ಗೋಗೇರಿ.

ಶಿಕ್ಷಕರು, ಸರ್ಕಾರಿ ನೌಕರರ ಸಂಘಟನೆಗಳ ಬಲದೊಂದಿಗೆ ಸ್ಪರ್ಧಿಸಿರುವ ಇವರು ಹಿಂದಿನ ಅವಧಿಯಲ್ಲಿ ಮಾಡಿದ ಕೆಲಸಗಳೇ ಶ್ರೀರಕ್ಷೆಯಾಗಲಿವೆ ಎಂದು ನಂಬಿದ್ದಾರೆ.

‘ಚುನಾವಣೆಯಲ್ಲಿ ನಾನು ಗೆಲ್ಲುವುದು ಗ್ಯಾರಂಟಿ’ ಎಂದು ವಿಶ್ವಾಸ ವ್ಯಕ್ತಪಡಿಸುವ ಮತ್ತೊಬ್ಬ ಅಭ್ಯರ್ಥಿ ವಿವೇಕಾನಂದಗೌಡ ಪಾಟೀಲ, ‘ಜನರು ಬದಲಾವಣೆ ಬಯಸಿದ್ದಾರೆ. ಶರಣು ಗೋಗೇರಿ ಮತ್ತು ನನ್ನ ನಡುವೆ ನೇರ ಹಣಾಹಣಿ ಇದ್ದರೂ, ನೂರಕ್ಕೆ ನೂರು ನಾನೇ ಗೆಲ್ಲುವೆ’ ಎಂದು ಅವರು ಉಚ್ಚರಿಸಿದ್ದಾರೆ.

‌‘ನೇರ ಹಣಾಹಣಿ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸಮಬಲದ ಸ್ಪರ್ಧೆ ಇದೆ. ನಾಲ್ಕು ಮಂದಿಯೂ ಒಂದೊಂದು ಬಲದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಿ ಪ್ರಚಾರ ನಡೆಸದಿರಬಹುದು. ಆದರೆ, ಐ.ಕೆ. ಕಮ್ಮಾರನಿಗೆ ಜಿಲ್ಲೆಯಾದ್ಯಂತ ಅಭಿಮಾನಿಗಳು ಇದ್ದಾರೆ. ಅವರನ್ನು ಮುಖತಃ ಭೇಟಿ ಮಾಡಿ ಮತ ಕೇಳಿರುವೆ. ಯೋಗ್ಯತೆ ಇದ್ದರಷ್ಟೇ ಮತ ಹಾಕಿ ಎಂದು ಕೂಡ ಹೇಳಿರುವೆ. ನನಗೆ ಫೇಸ್‌ಬುಕ್‌ಗಿಂತಲೂ ನನ್ನ ಫೇಸ್‌ ಬಗ್ಗೆ ಹೆಚ್ಚು ವಿಶ್ವಾಸವಿದೆ’ ಎಂಬುದು ಅವರ ನಿಲುವಾಗಿದೆ.

ಡಾ. ಸಂಗಮೇಶ ತಮ್ಮನಗೌಡ್ರ ಅವರು 1,600 ಮಂದಿ ಮತದಾರರಿಗೆ ಅಂಚೆ ಪತ್ರಗಳನ್ನು ಬರೆಯುವ ಮೂಲಕವೂ ಮತ ಯಾಚಿಸಿದ್ದಾರೆ. ಜತೆಗೆ ತಮ್ಮದೇ ಬಳಗದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಪ್ರತಿನಿತ್ಯ ಸುಮಾರು 1,800 ಮಂದಿಯನ್ನು ತಲುಪುತ್ತಿದ್ದಾರೆ.

‘ಸಮಾನ ಮನಸ್ಕರ ಜತೆಗಿನ ದಿನನಿತ್ಯದ ಒಡನಾಟ ಮತವಾಗಿ ಪರಿವರ್ತನೆ ಆಗಲಿದೆ. ಈ ಬಾರಿ ಸಿದ್ಧಾಂತದ ಮೇಲೆ ಚುನಾವಣೆ ಎದುರಿಸುತ್ತಿದ್ದು, ಅಚ್ಚರಿಯ ಫಲಿತಾಂಶ ಬರಲಿದೆ’ ಎಂದು ಅವರು ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ.

***

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರ ಒಳಗೊಳ್ಳುವಿಕೆಯ ಪರಿಷತ್‌ ಆಗಿಸುವ ಯೋಜನೆ ಇದೆ. ಕಸಾಪಕ್ಕೆ ಡಿಜಿಟಲ್‌ ಸ್ಪರ್ಶ ನೀಡುವುದರ ಜತೆಗೆ ಸಾಹಿತ್ಯಾಭಿರುಚಿ ಬೆಳೆಸಲು ಶ್ರಮಿಸಲಾಗುವುದು

- ವಿವೇಕಾನಂದ ಗೌಡ ಪಾಟೀಲ, ಅಭ್ಯರ್ಥಿ

***

ಪ್ರಾಮಾಣಿಕತೆಯೇ ನನ್ನ ಬಲ. ನನ್ನನ್ನು ಹತ್ತಿರದಿಂದ ಬಲ್ಲವರು ಜಿಲ್ಲೆಯಾದ್ಯಂತ ಇದ್ದಾರೆ. ಗುಡಿ ಗೋಪುರ ಕಟ್ಟುವ ಭರವಸೆ ಕೊಡುವುದಿಲ್ಲ. ಅವಕಾಶ ಕೊಟ್ಟರೆ ಕೆಲಸ ಮಾಡಿ ತೋರಿಸುವೆ

- ಐ.ಕೆ.ಕಮ್ಮಾರ, ಅಭ್ಯರ್ಥಿ

***

ತಾತ್ವಿಕ ಚುನಾವಣೆಗೆ ತಾತ್ವಿಕ ಮತ ನೀಡಿ ಎಂಬುದು ನನ್ನ ಚುನಾವಣಾ ಘೋಷಣೆ, ಸಿದ್ಧಾಂತದ ಮೇಲೆ ಕಣಕ್ಕೆ ಇಳಿದಿದ್ದು, ಫ್ಲೆಕ್ಸ್‌ ಕಟ್ಟುವುದಿಲ್ಲ, ಪೋಲಿಂಗ್‌ ಏಜೆಂಟರನ್ನು ನೇಮಿಸುವುದಿಲ್ಲ

- ಡಾ. ಸಂಗಮೇಶ ತಮ್ಮನಗೌಡ್ರ, ಅಭ್ಯರ್ಥಿ

***

ನಾನು ಅಧ್ಯಕ್ಷನಾಗಿದ್ದಾಗ ಜಿಲ್ಲೆಯಲ್ಲಿ ಸಾಕಷ್ಟು ಸಾಹಿತ್ಯಿಕ ಕೆಲಸಗಳಾಗಿವೆ. ಹಿರಿಯ ಸಾಹಿತಿಗಳು ಜತೆಗಿದ್ದಾರೆ. ಕೆಲಸ ಮಾಡಿಲ್ಲ ಎಂದು ಆರೋಪಿಸುವವರು ಬಹಿರಂಗ ಚರ್ಚೆಗೆ ಬರಲಿ

ಡಾ. ಶರಣು ಗೋಗೇರಿ, ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT