ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೋಟ

ಸೌಲಭ್ಯ ವಿತರಣೆಯಲ್ಲಿ ಪಾರದರ್ಶಕತೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆ ಅಡಿ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುತ್ತಿರುವ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆ, ಸೌಲಭ್ಯಗಳ ವಿತರಣೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಕೈಗೊಳ್ಳಲಾದ ಕಾರ್ಯಕ್ರಮಗಳು, ಫಲಾನುಭವಿಗಳು, ಕಾಮಗಾರಿಗಳ ಪ್ರಗತಿ ಹಾಗೂ ಸೌಲಭ್ಯ ವಿತರಣೆ ಬಗೆಗಿನ ಮಾಹಿತಿಯನ್ನು ನಿಗದಿಪಡಿಸಿದ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಹಲವಾರು ಇಲಾಖೆಗಳು ಮಾಹಿತಿಯನ್ನು ಪೋರ್ಟಲ್‌ನಲ್ಲಿ ಮಾಹಿತಿ ತುಂಬುವ ಪ್ರಕ್ರಿಯೆ ನಿಧಾನಗೊಳಿಸುತ್ತಿರುವುದರಿಂದ ಪ್ರಗತಿಯ ವರದಿ ಸರಿಯಾಗಿ ಸಿಗುತ್ತಿಲ್ಲ. ಇಂತಹ ವಿಳಂಬ ಧೋರಣೆ ಸಹಿಸಲಾಗದು’ ಎಂದು ಎಚ್ಚರಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೊನಿಗಳಲ್ಲಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಅಲ್ಲದೇ ಕಾಮಗಾರಿಯಿಂದ ಆ ಸಮುದಾಯದ ಸಾರ್ವಜನಿಕರಿಗೆ ಉಪಯೋಗ ಆಗುವಂತಿರಬೇಕು ಎಂದು ಹೇಳಿದರು.

ವಿವಿಧ ಯೋಜನೆಗಳಡಿ ಒದಗಿಸಲಾದ ಅನುದಾನವು ವಾಪಸ್‌ ಹೋಗದಂತೆ ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಅಥವಾ ಫಲಾನುಭವಿಗಳ ಆಯ್ಕೆ ಮಾಡಿ ನೀಡಿರುವ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಈ ಕುರಿತು ನಿಷ್ಕಾಳಜಿ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಅಂಬೇಡ್ಕರ್, ದೇವರಾಜ ಅರಸು ನಿಗಮ ಸೇರಿದಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 16 ನಿಗಮಗಳ ಪ್ರಗತಿ ಪರಿಶೀಲಿಸಿದ ಅವರು, ಜಿಲ್ಲೆಯ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ನಿಗಮದ ಯೋಜನೆಗಳ ಅಡಿ ನೀಡಲಾಗುವ ಸಬ್ಸಿಡಿಗಳನ್ನು ಮಾರ್ಪಡಿಸಲು ಸೂಕ್ತ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆಯುವ ಮೂಲಕ ಸಮುದಾಯದ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರಕಿಸಿ ಕೊಡಲು ಅಧಿಕಾರಿ ವರ್ಗ ಶ್ರಮಿಸಬೇಕು ಎಂದರು.    

ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್., ಎಡಿಸಿ ಸತೀಶ್‌ ಕುಮಾರ್ ಎಂ. ಇದ್ದರು.

88 ಭವನಗಳ ಕಾಮಗಾರಿ ಪೂರ್ಣ

‘ಜಿಲ್ಲೆಗೆ ಸೇವಾಲಾಲ, ಅಂಬೇಡ್ಕರ್, ಬಾಬು ಜಗಜೀವನರಾಂ ಸೇರಿದಂತೆ ಒಟ್ಟು 138 ಭವನಗಳು ಮಂಜೂರಾಗಿದ್ದು ಈವರೆಗೆ 88 ಭವನಗಳ ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಹೇಳಿದರು.

‘ಇನ್ನುಳಿದಂತೆ 50 ಭವನಗಳ ಕಾಮಗಾರಿ ಪ್ರಗತಿಯಲ್ಲಿದೆ. 12 ವಸತಿ ನಿಲಯಗಳ ಪೈಕಿ 7 ಸ್ವಂತ ಕಟ್ಟಡದಲ್ಲಿ, 5 ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಸತಿ ನಿಲಯದಲ್ಲಿ ಪ್ರವೇಶಕ್ಕಾಗಿ ಅಂದಾಜು 600ರಿಂದ 700 ಅಭ್ಯರ್ಥಿಗಳು ಹೆಚ್ಚುವರಿ ಬೇಡಿಕೆ ಇದೆ’ ಎಂದು ಮಾಹಿತಿ ನೀಡಿದರು.

ಮೆಟ್ರಿಕ್ ನಂತರದ ವಸತಿ ಶಾಲೆಗಳಲ್ಲಿ ಖಾಲಿಯಿರುವ ಪ್ರಾಂಶುಪಾಲರ ಹುದ್ದೆಯನ್ನು ಭರ್ತಿ ಮಾಡಲು ಕ್ರಮ ವಹಿಸಬೇಕು. ವಸತಿ ನಿಲಯಗಳ ಬೇಡಿಕೆ ಹೆಚ್ಚಿರುವ ಕಡೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು
ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬವಾಗಬಾರದು. ತಾಲ್ಲೂಕು ಮಟ್ಟದಲ್ಲಿಯೂ ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಪ್ರಗತಿ ಪರಿಶೀಲನೆ ನಡೆಸಬೇಕು. ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕು
ಎಂ.ಸುಂದರೇಶ್ ಬಾಬು, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.