ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

CM ಸ್ಥಾನಕ್ಕೆ ಸಿದ್ದರಾಮಯ್ಯರಾಜೀನಾಮೆ ಕೊಡಲಿ: ಲಿಂಗರಾಜ ಪಾಟೀಲ ಮಲ್ಲಾಪುರ

Published 2 ಜೂನ್ 2024, 14:01 IST
Last Updated 2 ಜೂನ್ 2024, 14:01 IST
ಅಕ್ಷರ ಗಾತ್ರ

ಗದಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ನಿಷ್ಪಕ್ಷಪಾತ ತನಿಖೆಗಾಗಿ ಕೂಡಲೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರು ಜಾಣಕುರುಡು ಪ್ರದರ್ಶಿಸುವ ಮೂಲಕ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ. ಆದಕಾರಣ, ಸಿದ್ದರಾಮಯ್ಯ ಅವರು ಮುಖಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ ಆಗ್ರಹಿಸಿದ್ದಾರೆ.

‘ಹಗರಣದ ಕುರಿತು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿಯ ಸಾವಿಗೆ ನ್ಯಾಯ ಒದಗಿಸಿಕೊಡುವ ಬದಲು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಭಾವಿಸಿ ಸತ್ಯವನ್ನು ಮುಚ್ಚಿಡುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.

‘ಸರ್ಕಾರ ಬಂದು ಒಂದು ವರ್ಷವಾದರೂ ಘೋಷಿಸಿದ ಯೋಜನೆಗಳ ಅನುಷ್ಟಾನವೇ ಆಗುತ್ತಿಲ್ಲ. ಹೀಗಿರುವಾಗ ನಿಗಮದ ₹187 ಕೋಟಿ ಹಣ ಹೈದರಾಬಾದ್ ಮೂಲದ ಕೆಲವು ಖಾತೆಗಳಿಗೆ ವರ್ಗಾವಣೆ ಆಗಿದೆ. ಇವೆಲ್ಲವನ್ನೂ ಗಮನಿಸಿದರೆ ಲೋಕಸಭಾ ಚುನಾವಣೆ ವೆಚ್ಚಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಾಣಿಕೆ ಸಲ್ಲಿಸಲು ನಡೆದಿರುವ ಹಗರಣ ಇದಾಗಿರಬಹುದು ಎಂಬ ಸಂಶಯ ಮೂಡುತ್ತದೆ’ ಎಂದು ಹೇಳಿದ್ದಾರೆ.

‘ಈ ಹಿಂದೆ ಇವರದ್ದೇ ಅಧಿಕಾರ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಕಾಂಗ್ರೆಸ್‌ ಶಾಸಕ ಗೋವಿಂದರಾಜು ಅವರ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ದೆಹಲಿ ಹಾಗೂ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಸಂದಾಯವಾದ ಸಾವಿರಾರು ಕೋಟಿ ಹಣ ಮಾಹಿತಿ ಲಭ್ಯವಾಗಿದ್ದನ್ನು ರಾಜ್ಯದ ಜನರು ಮರೆತಿಲ್ಲ. ಕಾಂಗ್ರೆಸ್‌ ಹೈಕಮಾಂಡ್ ಕರ್ನಾಟಕ ಸರ್ಕಾರವನ್ನು ತನ್ನ ಎಟಿಎಂ ಮಾಡಿಕೊಂಡಿರುವುದೇ ಆದಲ್ಲಿ; ರಾಜ್ಯದ ಜನತೆ ಸಿದ್ದರಾಮಯ್ಯ ಅವರನ್ನು ಎಂದಿಗೂ ಕ್ಷಮಿಸಲಾರರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT