ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಕೆಲಸ ಏ.1ರಿಂದ ಪ್ರಾರಂಭಿಸಿ: ಇಒ

‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನ
Published 21 ಮಾರ್ಚ್ 2024, 16:14 IST
Last Updated 21 ಮಾರ್ಚ್ 2024, 16:14 IST
ಅಕ್ಷರ ಗಾತ್ರ

ಗದಗ: ತಾಲ್ಲೂಕಿನ ಕುರ್ತಕೋಟಿ ಗ್ರಾಮ ಪಂಚಾಯ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನದಡಿ ಕಾಯಕ ಬಂಧುಗಳ, ಸ್ವಸಹಾಯ ಸಂಘಗಳ ಸದಸ್ಯರ ಸಭೆ ನಡೆಯಿತು.

ಗದಗ ತಾಲ್ಲೂಕು ಪಂಚಾಯ್ತಿ ಇಒ ಮಾಣಿಕ್‌ರಾವ್ ಪಾಟೀಲ್ ಮಾತನಾಡಿ, ‘ಏ.1ರಿಂದ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದ್ದು, ಕಾಯಕ ಬಂಧುಗಳು ಕೂಲಿಕಾರರಿಂದ ನಮೂನೆ 6 ಸಂಗ್ರಹಿಸಬೇಕು. ಕಳೆದ ವರ್ಷಕ್ಕಿಂತ‌ ಈ ವರ್ಷ ಬೇಗನೆ ಕೆಲಸ ನೀಡುವ ಮೂಲಕ ಗುಳೆ ತಪ್ಪಿಸಿ ಸ್ಥಳೀಯವಾಗಿ‌ ಕೆಲಸ ನೀಡಲಾಗುತ್ತಿದೆ’ ಎಂದರು.

‘ಪ್ರತಿ ವರ್ಷದಂತೆ ಈ ವರ್ಷವೂ ಕೂಲಿಕಾರರಿಗೆ ಉದ್ಯೋಗ ಕೊಡಲಿದ್ದು, ತಾವುಗಳು ತಮ್ಮ ಕೂಲಿಕಾರರ ಆಧಾರ್‌ ಸಂಖ್ಯೆಗೆ ಬ್ಯಾಂಕ್ ಖಾತೆ ಸಂಖ್ಯೆ ಲಿಂಕ್ ಹಾಗೂ ಉದ್ಯೋಗ ಚೀಟಿ ಎನ್‌ಸಿಪಿಐ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು. ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಈ ಬಾರಿ ಕೂಲಿಕಾರರು ಕೆಲಸದ ಸ್ಥಳಕ್ಕೆ ಪುಟ್ಟಮಕ್ಕಳನ್ನು ಕರೆತರಬಾರದು. ಅದಕ್ಕಾಗಿ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಕೂಸಿನ ಮನೆ ಆರಂಭ ಮಾಡಿದ್ದು, ಕೂಲಿಕಾರರು ಮಕ್ಕಳನ್ನು ಅಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗಬೇಕು’ ಎಂದರು.

ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಕುಮಾರ್ ಪೂಜಾರ್ ಮಾತನಾಡಿ, ‘ಕೆಲಸದ ಸ್ಥಳದಲ್ಲಿ ಕೂಲಿಕಾರರ ಹಾಜರಾತಿಯನ್ನು ಎರಡು ಹಂತದಲ್ಲಿ ಎನ್‌ಎಂಎಂಎಸ್‌ ಆ್ಯಪ್‌ನಲ್ಲಿ ಸೆರೆಹಿಡಿಯಬೇಕು. ಕೂಲಿಕಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಲೆಕ್ಕಧಿಕಾರಿ, ಗ್ರಾಮ ಪಂಚಾಯ್ತಿ ಪಿಡಿಒ, ನರೇಗಾ ಸಿಬ್ಬಂದಿ ಹಾಗೂ ಕಾಯಕ ಬಂಧುಗಳು, ಸ್ವಸಹಾಯ ಸಂಘದ ಸದಸ್ಯರು ಮತ್ತು ಪಂಚಾಯ್ತಿ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT