ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಆಶಯದ ಸಂವಿಧಾನ ಜಾರಿಯಾಗಲಿ:ಬೆಜವಾಡ ವಿಲ್ಸನ್‌; ದಿನೇಶ್ ಅಮಿನ್ ಮಟ್ಟು

Last Updated 4 ಮೇ 2019, 14:30 IST
ಅಕ್ಷರ ಗಾತ್ರ

ಗದಗ: ‘ಅಂಬೇಡ್ಕರ್‌ ಅವರ ಕನಸಿನ ಭಾರತದಲ್ಲಿ ಸಾಮಾಜಿಕ ಸಮಾನತೆ ಮತ್ತು ಜನಸಾಮಾನ್ಯರನ್ನು ಒಳಗೊಂಡ ಅಭಿವೃದ್ಧಿಯ ಪರಿಕಲ್ಪನೆ ಇತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಕೇವಲ ಐದು ವರ್ಷ ನಮ್ಮನ್ನಾಳಿದವರು ಮತಕ್ಕಾಗಿ ಜಾತಿ, ಧರ್ಮ ಆಧರಿಸಿ ವಿಭಜನೆ ಮಾಡಿ, ಜನರಲ್ಲಿ ವಿಷದ ಬೀಜ ಬಿತ್ತಿದ್ದಾರೆ’ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್‌ ಹೇಳಿದರು.

ಲಡಾಯಿ ಪ್ರಕಾಶನ, ಕವಲಕ್ಕಿ ಕವಿ ಪ್ರಕಾಶನ ಹಾಗೂ ಧಾರವಾಡದ ಚಿತ್ತಾರ ಕಲಾ ಬಳಗದ ಸಹಯೋಗದಲ್ಲಿ ಇಲ್ಲಿ ನಡೆದ 6ನೇ ಮೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಹುಟ್ಟಿದ್ದು ಕೋಲಾರದ ಕೆಜಿಎಫ್‍ನಲ್ಲಿ. ನನ್ನ ಮಾತೃಭಾಷೆ ತೆಲುಗು. ನಾವಿರುವ ಪ್ರದೇಶದಲ್ಲಿ ತಮಿಳರೂ ಇದ್ದರು. ಆಗ ನಮಗೆ ಯಾವ ಭೇದ-ಭಾವ ಇರಲಿಲ್ಲ. ಆದರೆ,ಈಗ ದೇಶದಲ್ಲಿ ರಾಜಪ್ರಭುತ್ವ, ಅರಾಜಕತೆ ತಾಂಡವವಾಡುತ್ತಿದೆ. ನಿರುದ್ಯೋಗ ಸಮಸ್ಯೆ ಇಡೀ ದೇಶವನ್ನೇ ಛಿದ್ರಗೊಳಿಸಿದೆ. ಈ ದೇಶದ ನ್ಯಾಯಾಂಗ ವ್ಯವಸ್ಥೆಯು ಬಡವರ, ಮಹಿಳೆಯರ ಪರವಾಗಿಲ್ಲ. ಬದಲಾಗಿ ಅದು ಶ್ರೀಮಂತರ, ಬಲಾಢ್ಯರ ಪರ ಕೆಲಸ ಮಾಡುತ್ತಿದೆ. ಇಂತಹ ವ್ಯವಸ್ಥೆಯಿಂದ ನ್ಯಾಯ ನಿರೀಕ್ಷೆ ಅಸಾಧ್ಯದ ಮಾತು’ ಎಂದರು.

‘ದೇಶದಲ್ಲಿ ನಡೆಯುವ ಅಪರಾಧ,ಆತ್ಮಹತ್ಯೆಗಳ ಕುರಿತು ಪ್ರತಿ ವರ್ಷ ಅಂಕಿ ಅಂಶಗಳನ್ನು ಬಿಡುಗಡೆ ಮಾಡುವ ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (ಎನ್‌ಸಿಆರ್‌ಬಿ) ವರದಿಯನ್ನೇ ಈಗಿನ ಸರ್ಕಾರ ತಡೆಹಿಡಿದು ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ದೂರಿದರು.

‘ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಆಡಳಿತ ನಡೆಸಿದ ಸರ್ಕಾರ ರೈತರು, ಹಿಂದುಳಿದ ವರ್ಗ, ಬಡವರು, ಕಾರ್ಮಿಕರಿಗೆ ಏನೂ ಮಾಡಿಲ್ಲ.ಸಾವಿರಾರು ರೈತರು ಕೂಲಿಕಾರ್ಮಿಕರಾಗಿದ್ದಾರೆ. ಆದರೂ, ಜನರು ದೇಶದ ಹಿತಕ್ಕಾಗಿ ಬಿಜೆಪಿಗೆ ಮತ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಬಹಳ ಆತಂಕಕಾರಿ ವಿಷಯ. ಜನರ ಒಳಗೊಳ್ಳುವಿಕೆ ಇಲ್ಲದ ದೇಶದ ಹಿತ ಯಾವುದು ಎಂದು ಅರ್ಥವಾಗುತ್ತಿಲ್ಲ. ಇಂತಹ ಮೌಢ್ಯತೆ ಹೋಗಬೇಕು’ ಎಂದರು.

‘ಕಪ್ಪತಗುಡ್ಡ ಗಣಿಗಾರಿಕೆ ವಿರೋಧಿಸಿ ಚಳವಳಿ ನಡೆದ ಗದಗ ನೆಲದಲ್ಲಿ ಮೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣ’ಎಂದು ಆಶಯ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.

‘ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ವ‌್ಯಕ್ತಿಗೆ ಒಳ್ಳೆಯದನ್ನು ಮಾಡುವ ಮನಸ್ಸು ಇದ್ದರೂ, ಅದನ್ನು ಮಾಡಲು ಸಾಧ್ಯವಾಗದಂತಹ ಅಸಹಾಯಕ ಸ್ಥಿತಿ ಇದೆ. ಹಣಬಲ, ತೋಳ್ಬಲ, ಜಾತಿಬಲ ಇಲ್ಲದಿದ್ದರೆ ಚುನಾವಣೆಗೆ ಸ್ಪರ್ಥಿಸಲೂ ಸಾಧ್ಯವಿಲ್ಲದ ವಾತಾವರಣ ದೇಶಲ್ಲಿದೆ. ಸಂಘಪರಿವಾರದ ವಿರುದ್ಧ ಜಾತ್ಯತೀತ ಪರಿವಾರ ಸಂಘಟಿತವಾಗಿ ಒಂದು ಧ್ವನಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಬೇಕು, ಇಂತಹ ಪ್ರಯತ್ನಗಳಿಂದ ಮಾತ್ರ ಬದಲಾವಣೆ ಸಾಧ್ಯ’ ಎಂದರು.

‘ದೇಶದ ಯುವಜನರ ಬಗ್ಗೆ ಭರವಸೆ ಇರುವಂತೆಯೇ, ಅವರ ಬಗ್ಗೆ ಭಯವೂ ಇದೆ. ಯುವಜನರು ವೈಚಾರಿಕ ಸ್ಪಷ್ಟತೆ ರೂಪಿಸಿಕೊಳ್ಳಬೇಕು. ರಾಜಕೀಯ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಎರಡೂ ಬೇರೆ ಬೇರೆ ಎಂದು ಅವರು ವಿವರಿಸಿದರು.

‘ಅಂಬೇಡ್ಕರ್‌ ಅವರು ಬಯಸಿದ ಸಂವಿಧಾನವನ್ನು ಅಂದರೆ ಅವರು, 1947 ರಲ್ಲಿ ಮಂಡಿಸಿದ ಪ್ರಬಂಧದ ಅಂಶಗಳನ್ನು ಸೇರಿಸಿ, ಸಂವಿಧಾನದಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಅಮಿನ್ ಮಟ್ಟು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT