ಭಾನುವಾರ, ಮೇ 22, 2022
22 °C
ಗದುಗಿನಲ್ಲಿ 6ನೇ ಮೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಸ್ವಚ್ಛಭಾರತವಲ್ಲ, ಮೆದುಳಿನ ಸ್ವಚ್ಛತೆ ಬೇಕು: ಬೆಜವಾಡ ವಿಲ್ಸನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಸ್ಫೋಟದಿಂದ ಜನರು ಮೃತಪಟ್ಟಾಗ ದೇಶದಾದ್ಯಂತ ಜನಾಕ್ರೋಶ ಭುಗಿಲೇಳುತ್ತದೆ. ಆದರೆ, ಕಳೆದ ಒಂದು ವರ್ಷದಲ್ಲಿ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ 386ಕ್ಕೂ ಹೆಚ್ಚು ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್‌ ತೀವ್ರ ಬೇಸರ ವ್ಯಕ್ತಪಡಿಸಿದರು.

ಲಡಾಯಿ ಪ್ರಕಾಶನ, ಕವಲಕ್ಕಿ ಕವಿ ಪ್ರಕಾಶನ ಹಾಗೂ ಧಾರವಾಡದ ಚಿತ್ತಾರ ಕಲಾ ಬಳಗದ ಸಹಯೋಗದಲ್ಲಿ ಇಲ್ಲಿ ನಡೆದ 6ನೇ ಮೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಎರಡು ನಿಮಿಷ ಕೈಯಲ್ಲಿ ಪೊರಕೆ ಹಿಡಿದು, ಫೋಟೊಶೂಟ್‌ ಮಾಡಿಸಿಕೊಂಡು, ಸ್ವಚ್ಛ ಭಾರತದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರಿಗೆ, ದೇಶದ 18 ರಾಜ್ಯಗಳ 318 ಜಿಲ್ಲೆಗಳಲ್ಲಿ ಮಲ ಹೊರುವ ಪದ್ಧತಿ ಜೀವಂತವಾಗಿರುವುದು ಕಾಣುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಲದ ಗುಂಡಿ ಸ್ವಚ್ಛಗೊಳಿಸುವುದು ಆಧ್ಯಾತ್ಮಿಕ ಸಂತುಷ್ಟಿ ನೀಡುವ ಕೆಲಸ ಎಂದು ಪ್ರಧಾನಿ ಹೇಳುತ್ತಾರೆ. ಇದು ಮಾನವತೆಯ ಮೇಲೆ ನಡೆಯುತ್ತಿರುವ ದೊಡ್ಡ ದಾಳಿ. ನಮಗೆ ಬೇಕಿರುವುದು ಸ್ವಚ್ಛ ಭಾರತ ಯೋಜನೆಯಲ್ಲ, ನಮ್ಮ ಮೆದುಳಿನ ಸ್ವಚ್ಛತೆ. ಜಾತಿ ವ್ಯವಸ್ಥೆ ಧ್ವಂಸವಾದಾಗ ಮಾತ್ರ ಅಭಿವೃದ್ದಿ ಭಾರತ ನಿರ್ಮಾಣವಾಗುತ್ತದೆ’ ಎಂದರು.

‘ಭಾರತ ಸಾರ್ವಭೌಮ ರಾಷ್ಟ್ರ.ಇಲ್ಲಿ ದೇಶದ ಸಾರ್ವಭೌಮತೆಗಿಂತ ಜನರ ಸಾರ್ವಭೌಮತೆ ಮುಖ್ಯ. ಜನರಿಲ್ಲದೆ ದೇಶ ಇಲ್ಲ. ಈ ಸಾರ್ವಭೌಮತೆಗೆ ಧಕ್ಕೆ ಉಂಟಾದಾಗ ಇದು ನಾನು ಬಯಸುವ ಭಾರತ ಅಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಆದರೆ, ಈ ರೀತಿ ಮಾತನಾಡಿದರೆ ದೇಶದ್ರೋಹಿ ಎಂದು ಪ್ರಮಾಣಪತ್ರ ನೀಡುವ ಏಜೆನ್ಸಿಗಳು ದೇಶದಲ್ಲಿವೆ. ಧೈರ್ಯದಿಂದ ಮಾತನಾಡಲೂ ಯೋಚಿಸಬೇಕಾದ ಸ್ಥಿತಿ ಎದುರಾಗಿದೆ’ ಎಂದರು.

‘ಅಭಿವೃದ್ಧಿ ಭಾರತ; ಕವಲು ದಾರಿಗಳ ಮುಖಾಮುಖಿ’ ಘೋಷವಾಕ್ಯದಡಿ ನಾಲ್ಕು ಗೋಷ್ಠಿಗಳು ನಡೆದವು.ಹಿರಿಯ ಪತ್ರಕರ್ತ ದಿನೇಶ ಅಮಿನ್ ಮಟ್ಟು ಆಶಯ ನುಡಿಗಳನ್ನಾಡಿದರು. ಮಹಾರಾಷ್ಟ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ರಾವ್‍ಸಾಹೇಬ್ ಕಸಬೆ ದಿಕ್ಸೂಚಿ ಭಾಷಣ ಮಾಡಿದರು. ಮೀನಾಕ್ಷಿ ಬಾಳಿ ಪುಸಕ್ತಗಳನ್ನು ಲೋಕಾರ್ಪಣೆ ಮಾಡಿದರು. ಎ.ಬಿ. ಹಿರೇಮಠ, ಡಾ. ಡಿ.ಬಿ. ಗವಾನಿ, ಕೃಷ್ಣ ನಾಯಕ, ಬಿ.ಎ. ಕೆಂಚರಡ್ಡಿ, ಬಸವರಾಜ ಸೂಳಿಬಾವಿ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು