ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ: ಸಮಸ್ಯೆಗಳ ಸುಳಿಯಲ್ಲಿ ತಾಂಬ್ರಗುಂಡಿ ಗ್ರಾಮಸ್ಥರು

Published : 21 ಆಗಸ್ಟ್ 2024, 4:21 IST
Last Updated : 21 ಆಗಸ್ಟ್ 2024, 4:21 IST
ಫಾಲೋ ಮಾಡಿ
Comments

ಮುಂಡರಗಿ: ತಾಲ್ಲೂಕಿನ ಮೇವುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾಂಬ್ರಗುಂಡಿ ಗ್ರಾಮವು ತಾಲ್ಲೂಕಿನ ಕುಗ್ರಾಮವಾಗಿದ್ದು, ಗ್ರಾಮಸ್ಥರು ಹತ್ತು ಹಲವು ಸಮಸ್ಯೆಗಳ ನಡುವೆ ನಿತ್ಯದ ಬದುಕು ಸಾಗಿಸುತ್ತಿದ್ದಾರೆ.

ಜನ, ಜಾನುವಾರು, ವಾಹನಗಳು ಸಂಚರಿಸಲು ಸೂಕ್ತ ರಸ್ತೆಗಳಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಮದ ಕೆಲವು ಭಾಗಗಳಲ್ಲಿ ನಾಲ್ಕು ಚಕ್ರದ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಇದರಿಂದಾಗಿ ಹೆರಿಗೆ, ಅಪಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದ ಮುಖ್ಯ ರಸ್ತೆಗಳು ಹಾಗೂ ಮುಖ್ಯ ರಸ್ತೆಗಳಿಂದ ಗ್ರಾಮದ ವಿವಿಧ ಓಣಿಗಳಿಗೆ ಸಂಪರ್ಕ ಕಲ್ಪಿಸುವ ಕಿರು ರಸ್ತೆಗಳು ತುಂಬಾ ಇಕ್ಕಟ್ಟಾಗಿವೆ. ಗ್ರಾಮ ಪಂಚಾಯ್ತಿಯವರು ರಸ್ತೆ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸದೆ ಇರುವುದರಿಂದ ಬಹುತೇಕ ರಸ್ತೆಗಳ ಮೇಲೆ ಗ್ರಾಮಸ್ಥರು ಬಳಸಿದ ಗಲೀಜು ನೀರು ಹಾಗೂ ಮಳೆ ನೀರು ಹರಿಯುತ್ತದೆ. ಇದು ಸಾಂಕ್ರಾಮಿಕ ರೋಗಗಳ ಭೀತಿಗೆ ಕಾರಣವಾಗಿದೆ.

ಗ್ರಾಮದ ರಸ್ತೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದೆ ಇರುವುದರಿಂದ ಎಲ್ಲ ರಸ್ತೆಗಳು ಗಬ್ಬೆದ್ದು ನಾರುತ್ತಲಿವೆ. ಕೆಲವು ರಸ್ತೆಗಳ ಬದಿಯಲ್ಲಿ ಗ್ರಾಮಸ್ಥರು ಜಾನುವಾರುಗಳನ್ನು ಕಟ್ಟುತ್ತಿದ್ದಾರೆ. ಕೆಲವರು ಟ್ರ್ಯಾಕ್ಟರ್, ಬೈಕ್, ಟಂಟಂ ಮೊದಲಾದ ವಾಹನಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಇದರಿಂದಾಗಿ ರಸ್ತೆಗಳು ಗಲೀಜಾಗುವುದರ ಜೊತೆಗೆ ಮತ್ತಷ್ಟು ಇಕ್ಕಟ್ಟಾಗತೊಡಗಿವೆ.

ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರವಿದ್ದು, ಅಂಗನವಾಡಿ ಕೇಂದ್ರದ ಅಕ್ಕಪಕ್ಕದಲ್ಲಿ ಗಲೀಜು ನೀರು ಹರಿಯುತ್ತಲಿದೆ. ಗಲೀಜಿನಿಂದ ಆವೃತ್ತವಾಗಿರುವ ಕಟ್ಟಡದಲ್ಲಿ ಕುಳಿತು ಮಕ್ಕಳು ಅಕ್ಷರಾಭ್ಯಾಸ ಮಾಡಬೇಕಿದೆ. ಅಲ್ಲಿಯೇ ಕುಳಿತು ಊಟ, ಉಪಾಹಾರ ಸೇವಿಸಬೇಕಿದೆ. ಪಕ್ಕದಲ್ಲಿ ನಿತ್ಯ ಗಲೀಜು ನೀರು ಹರಿಯುತ್ತಿರುವುದರಿಂದ ಅಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಕ್ಕಳಿಗೆ ಡೆಂಗಿ ಹಾಗೂ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳು ಬಂದರೆ ಹೇಗೆ ಎಂದು ಪಾಲಕರು ಆತಂಕಗೊಂಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ನಿತ್ಯ ಬೆಳಿಗ್ಗೆ 9.30 ಹಾಗೂ ಸಂಜೆ 4.30ಕ್ಕೆ ಮಾತ್ರ ಗ್ರಾಮಕ್ಕೆ ಬರುತ್ತವೆ. ಅವುಗಳನ್ನು ಹೊರತುಪಡಿಸಿ ಇನ್ನುಳಿದ ಯಾವ ವಾಹನಗಳ ಸೌಲಭ್ಯವು ಗ್ರಾಮಕ್ಕಿಲ್ಲ. ಅಗತ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರು ಬೇರೆ ಊರಿಗೆ ತೆರಳಬೇಕಾದರೆ ಪಕ್ಕದಲ್ಲಿರುವ ಬರದೂರು ಗ್ರಾಮ ಅಥವಾ ಮುಂಡರಗಿ ಪಟ್ಟಣಕ್ಕೆ ಬರಬೇಕು.

ಗ್ರಾಮದಲ್ಲಿ ತೀರಾ ಹಳೆಯದಾದ ಹಾಗೂ ಈಗ ಸಂಪೂರ್ಣವಾಗಿ ಹಾಳಾಗಿರುವ ಪಶು ಆಸ್ಪತ್ರೆಯ ಕಟ್ಟಡವಿದ್ದು, ಅಲ್ಲಿ ವೈದ್ಯರು ಸೇರಿದಂತೆ ಯಾವ ಸೌಲಭ್ಯ, ಸಿಬ್ಬಂದಿಯೂ ಇಲ್ಲ. ಗ್ರಾಮಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವಿದ್ದು, ಗ್ರಾಮಸ್ಥರು ಅದಕ್ಕಾಗಿ ಕಾಯುತ್ತಲಿದ್ದಾರೆ. ಈ ಕುರಿತು ಅಭಿಪ್ರಾಯ ಪಡೆಯಲು ಪಿಡಿಒಗೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ಗಲೀಜು ಮತ್ತು ಚರಂಡಿ ನೀರಿನಿಂದ ಆವೃತ್ತವಾಗಿರುವ ಮುಂಡರಗಿ ತಾಲ್ಲೂಕಿನ ತಾಂಬ್ರಗುಂಡಿ ಗ್ರಾಮದ ಮುಖ್ಯ ರಸ್ತೆ
ಗಲೀಜು ಮತ್ತು ಚರಂಡಿ ನೀರಿನಿಂದ ಆವೃತ್ತವಾಗಿರುವ ಮುಂಡರಗಿ ತಾಲ್ಲೂಕಿನ ತಾಂಬ್ರಗುಂಡಿ ಗ್ರಾಮದ ಮುಖ್ಯ ರಸ್ತೆ
ಮೇವುಂಡಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯೊಂದಿಗೆ ಚರ್ಚಿಸಿ ತಾಂಬ್ರಗುಂಡಿ ಗ್ರಾಮದ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು
- ವಿಶ್ವನಾಥ ಹೊಸಮನಿ ತಾಲ್ಲೂಕು ಪಂಚಾಯ್ತಿ ಇಒ
- ರಸ್ತೆ ಚರಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದೇ ಗ್ರಾಮಸ್ಥರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಬೇಕು
ಬಸಪ್ಪ ವಡ್ಡರ ತಾಂಬ್ರಗುಂಡಿ ಗ್ರಾಮಸ್ಥ

ಕೆರೆ ಕಾಲುವೆ ದುರಸ್ತಿಗೆ ಮನವಿ

ಗ್ರಾಮದ ಹೊರವಲಯದಲ್ಲಿ ಕೆರೆ ಇದ್ದು ಕೆರೆ ಹಾಗೂ ಕೆರೆಗೆ ಸಂಬಂಧಿತ ಕಾಲುವೆಗಳನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿದರೆ ನೂರಾರು ರೈತರ ಜಮೀನುಗಳಿಗೆ ವರ್ಷಪೂರ್ತಿ ನೀರು ಸಿಗಲಿದೆ. ಈ ಕುರಿತು ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ರಾಮದ ರೈತರು ಮನವಿ ಮಾಡಿಕೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿ (ಹಳೆತಾಂಬ್ರಗುಂಡಿ ಗ್ರಾಮ) ಅದ್ಭುತ ಶಿಲ್ಪಕಲೆಯನ್ನು ಒಳಗೊಂಡಿರುವ ಒಂದು ಪುರಾತನ ಈಶ್ವರ ದೇವಾಲಯವಿದ್ದು ಅದು ಈಗ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಅಲ್ಲಿ ನಿಯಮಿತವಾಗಿ ಪೂಜೆ ಪುನಸ್ಕಾರಗಳು ನಡೆಯದೆ ಇರುವುದರಿಂದ ದೇವಸ್ಥಾನದ ಸುತ್ತಲೂ ಬೃಹತ್ ಗಿಡಗಂಟಿಗಳು ಬೆಳೆದಿವೆ. ಅದನ್ನು ಸ್ವಚ್ಛಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT