ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರೇಜಿಗೆ ಹರಿದ ಹೊಸ ನೀರು

ಮಲೆನಾಡು ಭಾಗದಲ್ಲಿ ಉತ್ತಮ ಮಳೆ; ಬ್ಯಾರೇಜಿನಲ್ಲಿ 1 ಟಿಎಂಸಿ ಅಡಿ ನೀರು ಸಂಗ್ರಹ
Published 25 ಮೇ 2024, 14:19 IST
Last Updated 25 ಮೇ 2024, 14:19 IST
ಅಕ್ಷರ ಗಾತ್ರ

ಮುಂಡರಗಿ: ಕಳೆದ ನಾಲ್ಕೈದು ದಿನಗಳಿಂದ ಶಿವಮೊಗ್ಗ ಸೇರಿಂದತೆ ಮಲೆನಾಡು ಭಾಗದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿಗೆ ಸಾಕಷ್ಟು ಪ್ರಮಾಣದ ಹೊಸ ನೀರು ಹರಿದು ಬರುತ್ತಿದೆ.

ಮೇ 23ರಂದು 2000 ಕ್ಯುಸೆಕ್, ಮೇ 24ರಂದು 2719 ಕ್ಯುಸೆಕ್ ಹಾಗೂ ಮೇ 25ರಂದು 1625 ಕ್ಯುಸೆಕ್ ಹೊಸ ನೀರು ಬ್ಯಾರೇಜಿಗೆ ಹರಿದು ಬಂದಿದೆ. ಸದ್ಯ ಬ್ಯಾರೇಜಿನಲ್ಲಿ ಒಂದು ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದಂತಾಗಿದೆ.

ಮಲೆನಾಡು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿಯೂ ಇತ್ತೀಚೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ವಿನ ಪ್ರಮಾಣದ ಹೊಸ ನೀರು ಬ್ಯಾರೇಜ್ ಹಾಗೂ ನದಿ ಪಾತ್ರಕ್ಕೆ ಹರಿಯಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ತುಂಗಭದ್ರಾ ನದಿ ಹಾಗೂ ಶಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜು ಸಂಪೂರ್ಣವಾಗಿ ಖಾಲಿಯಾಗುವ ಹಂತ ತಲುಪಿತ್ತು.

ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರು ಬ್ಯಾರೇಜಿನಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕಳೆದ ವಾರ ಬ್ಯಾರೇಜಿನಲ್ಲಿ ಸಂಗ್ರಹವಾಗಿದ್ದ ನೀರೆಲ್ಲ ಖಾಲಿಯಾಗಿದ್ದರಿಂದ ಜಿಲ್ಲೆಯ ಜನತೆಗೆ ನೀರು ಪೂರೈಸಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದರು.

ತುರ್ತಾಗಿ ಜಾಕ್ವೆಲ್‌ಗೆ ಸಂಪರ್ಕ ಕಲ್ಪಿಸುವ ಕಾಲುವೆಗಳ ಹೂಳೆತ್ತಿ, ತಲಾ ಹತ್ತು ಅಶ್ವಶಕ್ತಿಯ 13 ಪಂಪ್‌ಸೆಟ್‌ಗಳ ಮೂಲಕ ಬ್ಯಾರೇಜಿನಲ್ಲಿದ್ದ ಡೆಡ್ ಸ್ಟೋರೇಜ್ ನೀರನ್ನು ಕಾಲುವೆಗೆ ಹರಿಸಿ ಜಿಲ್ಲೆಯ ಜನತೆಗೆ ನೀರು ಪೂರೈಸಲಾಗಿತ್ತು.

ಸದ್ಯ ಬ್ಯಾರೇಜಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದ್ದು, ಜಿಲ್ಲಿಯ ಜನರ ನೀರಿನ ತೊಂದರೆ ನಿವಾರಣೆಯಾದಂತಾಗಿದೆ. ಮೇ 31ರಿಂದ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಮುಂಗಾರು ಚುರುಕುಗೊಂಡು ಸಾಕಷ್ಟು ಮಳೆ ಸುರಿದರೆ ತುಂಗಭದ್ರೆಯ ಒಡಲು ತುಂಬಹುದು ಎಂದು ಅಂದಾಜಿಸಲಾಗಿದೆ.

ಬ್ಯಾರೇಜಿನಲ್ಲಿ ಗರಿಷ್ಟ 1.9 ಟಿಎಂಸಿ ಅಡಿ ನೀರು ಸಂಗ್ರಹವಾದರೆ ಬ್ಯಾರೇಜಿನ ಗೇಟುಗಳನ್ನು ತೆರೆದು ಹೆಚ್ಚುವರಿ ನೀರನ್ನು ಕೆಳ ಭಾಗದ ತುಂಗಭದ್ರಾ ನದಿ ಪಾತ್ರಕ್ಕೆ ಹರಿಸಲಾಗುತ್ತದೆ.

ಬಾರದ ಭದ್ರಾ ನೀರು

ಕಳೆದ ವಾರ ಬ್ಯಾರೇಜಿನಲ್ಲಿ ಸಂಗ್ರಹವಾಗಿದ್ದ ನೀರೆಲ್ಲ ಖಾಲಿಯಾಗುವ ಹಂತ ತಲುಪಿದಾಗ ಜಿಲ್ಲೆಯ ಹಿರಿಯ ಅಧಿಕಾರಿಗಳು ಭದ್ರಾ ಜಲಾಶಯದಿಂದ ನೀರು ಬಿಡುವಂತೆ ಅಲ್ಲಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದರಂತೆ ಮೇ 23ರಿಂದ 28ರ ವರೆಗೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನಿತ್ಯ 2 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಸರ್ಕಾರ ಸೂಚಿಸಿತ್ತು. ‘ಭದ್ರಾ ಜಲಾಶಯದಿಂದ ನೀರು ಹರಿಸುವ ಪೂರ್ವದಲ್ಲಿಯೇ ತುಂಗಭದ್ರಾ ಅಚ್ವುಕಟ್ಟು ಪ್ರದೇಶದಲ್ಲಿ ಉತ್ತಮವಾಗಿ ಮಳೆ ಸುರಿದದ್ದರಿಂದ ಭದ್ರಾ ಜಲಾಶಯದಿಂದ ನೀರು ಹರಿಸುವ ಕಾರ್ಯ ಸ್ಥಗಿತಗೊಳಿಸಲಾಯಿತು’ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಎ.ಪ್ರಕಾಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT