ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಯಿಂದ ದೇಶ ದಿವಾಳಿ: ಮಾಜಿ ಸಚಿವ ಎಸ್.ಎಸ್.ಪಾಟೀಲ

Published 24 ಫೆಬ್ರುವರಿ 2024, 13:11 IST
Last Updated 24 ಫೆಬ್ರುವರಿ 2024, 13:11 IST
ಅಕ್ಷರ ಗಾತ್ರ

ಮುಂಡರಗಿ: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆ ನೀಡುವುದಕ್ಕಾಗಿ ಪ್ರಸ್ತುತ ಬಜೆಟ್‌ನಲ್ಲಿ ₹52 ಸಾವಿರ ಕೋಟಿ ಮೀಸಲಿರಿಸಿದ್ದು, ಜನರನ್ನು ದುಡಿಯದೆ ಉಣ್ಣಲು ಪ್ರೆರೇಪಿಸುತ್ತಿದೆ. ಉಚಿತ ಕೊಡುಗೆಗಳನ್ನು ಕೊಡುತ್ತಾ ಹೋದರೆ ದೇಶ ದಿವಾಳಿಯಾಗುವ ಸಾಧ್ಯತೆ ಇದೆ. ರಾಜ್ಯದ ವಿವಿಧ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರೊದಗಿಸಲು ಆ ಹಣವನ್ನು ವಿನಿಯೋಗಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ ಹೇಳಿದರು.

ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಂಡ ಧಾರವಾಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಸವಣ್ಣನನ್ನು ಸಾಂಸ್ಕೃತಿಕ ರಾಯಭಾರಿ’ ಎಂದು ಕೊಂಡಾಡುತ್ತಿರುವ ರಾಜ್ಯ ಸರ್ಕಾರವು ಶರಣರು ಪ್ರತಿಪಾದಿಸಿದ ಕಾಯಕ ತತ್ವವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ದುಡಿಯದೆ ಉಣ್ಣುವುದು ಮಹಾಪಾಪ ಎಂದು ಶರಣರು ಸಾರಿದ್ದರು. ಆದರೆ ಇಂದಿನ ಸರ್ಕಾರ ಉಚಿತವಾಗಿ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಜನರನ್ನು ಕಾಯಕದಿಂದ ವಿಮುಖರನ್ನಾಗಿ ಮಾಡುತ್ತಲಿದೆ ಎಂದು ಹರಿಹಾಯ್ದರು.

ಸಮ್ಮೇಳ ಉದ್ಘಾಟಿಸಿದ ಮೈಸೂರಿನ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಧನೆಯು ಯಾರಿಗೂ ಸುಲಭವಾಗಿ ಒಲಿಯುವುದಿಲ್ಲ. ನಿದ್ರಾಹಾರಗಳನ್ನು ತ್ಯಜಿಸಿ, ಒಂದೇ ವಿಷಯದಲ್ಲಿ ಮಗ್ನರಾಗಿ ತೊಡಗಿದಾಗ ಮಾತ್ರ ಕನಸು ನನಸಾಗುತ್ತದೆ. ಅಲ್ಪ ಜ್ಞಾನವು ಅಪಾಯಕಾರಿಯಾಗಿದ್ದು, ನಾವೆಲ್ಲ ಪರಿಪೂರ್ಣ ಜ್ಞಾನ ಸಂಪಾದಿಸಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಚುಟುಕು ಎನ್ನುವುದು ವೇದಗಳ ಕಾಲದಿಂದಲೂ ಜಾರಿಯಲ್ಲಿರುವ ಒಂದು ಶಾಸ್ತ್ರ ಮಾರ್ಗವಾಗಿದ್ದು, ಬಹುತೇಕ ಜೀವನ ಸೂತ್ರಗಳು ಚುಟುಕು ಮಾದರಿಯಲ್ಲಿರುತ್ತವೆ. ಅಲ್ಪ ಪದಗಳನ್ನು ಬಳಸಿ ವಿಶಾಲವಾದ ತಿಳಿವಳಿಕೆ ಹಾಗೂ ಅರ್ಥ ನೀಡುವ ಸಾಮರ್ಥ್ಯ ಚುಟುಕುಗಳಿಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಅಧ್ಯಕ್ಷ ಡಿ.ಡಿ.ಎಂ.ದೇಸಾಯಿ ಮಾತನಾಡಿದರು.

ಚುಟುಕು ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿರುವ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರಿಗೆ ‘ಚುಟುಕು ತಪಸ್ವಿ’ ಪುರಸ್ಕಾರವನ್ನು ಸಮರ್ಪಿಸಲಾಯಿತು.

ಎಸ್.ಎಸ್.ಪಾಟೀಲರಿಗೆ ‘ಸಹಕಾರ ದಾಸೋಹಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಂತಲಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೋಭಾ ಮೇಟಿ ಅವರಿಗೆ ಅದೇಶ ಪತ್ರ ನೀಡಲಾಯಿತು.

ಶಶಿಕಲಾ ಕುಕನೂರ ಕಾರ್ಯಕ್ರಮ ನಿರೂಪಿಸಿದರು. ವಿಜಯಕುಮಾರ ಬಣಕಾರ ಕೊನೆಯಲ್ಲಿ ವಂದಿಸಿದರು. ಶಿವಕುಮಾರ ದೇವರು ಬಳೂಟಗಿ, ಚನ್ನಬಸವ ದೇವರು, ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶಟ್ರು, ಶಂಕರ ಕುಂಬಿ, ಡಾ.ಬಿ.ಜಿ.ಜವಳಿ, ಎಸ್.ಬಿ.ಕರಿಭರಮಗೌಡರ, ನಾಗೇಶ ಹುಬ್ಬಳ್ಳಿ, ಸಿ.ಎಸ್.ಅರಸನಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT