ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸಮಸ್ಯೆ: ತಕರಾರಿನಲ್ಲೇ ಕೃಷಿಕರ ಜೀವನ

ಅನುದಾನ ಕೊರತೆ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆ ಸ್ಥಗಿತ– ರೈತ ಸಂಪರ್ಕ ರಸ್ತೆಗೆ ಗ್ರಹಣ
Last Updated 25 ಅಕ್ಟೋಬರ್ 2021, 5:49 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ರೈತ ಸಂಪರ್ಕ ರಸ್ತೆಗಳ ಅಭಿವೃದ್ಧಿ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ‘ನಮ್ಮ ಭೂಮಿ ನಮ್ಮ ತೋಟ’, ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಗಳಿಗೆ ವಿವಿಧ ಕಾರಣಗಳಿಂದಾಗಿ ಸರ್ಕಾರದಿಂದ ಬರಬೇಕಿದ್ದ ಅನುದಾನ ನಿಂತಿದೆ. ಹಾಗಾಗಿ, ಈ ಯೋಜನೆ ಅಡಿ ಕಳೆದ ಎರಡು ವರ್ಷಗಳಿಂದ ಯಾವುದೇ ರಸ್ತೆ ಕಾಮಗಾರಿಗಳು ನಡೆದಿಲ್ಲ.

ಹೊಲಗಳಿಗೆ ರಸ್ತೆ ಮಾಡಿಸಿಕೊಳ್ಳಲು ರೈತರಿಗೆ ಈಗ ಇರುವುದು ಎರಡೇ ಆಯ್ಕೆ. ಒಂದು ನರೇಗಾ; ಮತ್ತೊಂದು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ. ಆದರೆ, ಇವೆರಡರಿಂದಲೂ ರಸ್ತೆ ಅಭಿವೃದ್ಧಿಗೆ ಬೇಕಿರುವಷ್ಟು ಪೂರ್ಣಪ್ರಮಾಣದ ಹಣ ಸಿಗುತ್ತಿಲ್ಲ. ಇದರಿಂದಾಗಿ ರೈತ ಸಂಪರ್ಕ ರಸ್ತೆಗಳು ಇಂದಿಗೂ ಕೆಸರುಗದ್ದೆಯಂತೆಯೇ ಇವೆ.

ಅಕ್ಕಪಕ್ಕದ ಜಮೀನಿನ ರೈತರ ನಡುವೆ ಹೊಂದಾಣಿಕೆ ಇದ್ದರೆ ಹೊಲಕ್ಕೆ ಹೋಗಿ ಬರಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಹೆಚ್ಚಿನ ಕಡೆಗಳಲ್ಲಿ ಹೊಲಕ್ಕೆ ತೆರಳುವ ರಸ್ತೆ ವಿಚಾರವಾಗಿಯೇ ಹೊಡೆದಾಟಗಳು ನಡೆದಿವೆ. ಮಾರಾಣಾಂತಿಕ ಹಲ್ಲೆಗಳಾಗಿ ಕೆಲವರು ಆಸ್ಪತ್ರೆ ಸೇರಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ, ವರ್ಷನಾನುಗಟ್ಟಲೇ ಕೋರ್ಟ್‌ಗೆ ಅಲೆದಾಡಿದರೂ ರೈತರ ರಸ್ತೆ ಸಮಸ್ಯೆ ಬಗೆಹರಿದಿಲ್ಲ.

‘ನಮ್ಮ ಹೊಲ ನಮ್ಮ ರಸ್ತೆ’ಗೆ ಅನುದಾನ ಬಿಡುಗಡೆ ಆಗದ ಕಾರಣ ಯೋಜನೆ ಸ್ಥಗಿತಗೊಂಡಿದೆ. ಇದರ ಬದಲಾಗಿ ರೈತರು ಈಗ ನರೇಗಾ ಯೋಜನೆ ಅಡಿ ರಸ್ತೆ ನಿರ್ಮಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ.ಕಲ್ಲೇಶ ತಿಳಿಸಿದರು.

‘ನರೇಗಾ ಯೋಜನೆಯ ಮುಖ್ಯ ಉದ್ದೇಶ ಜನರಿಗೆ ಕೂಲಿ ಕೊಟ್ಟು ಸಣ್ಣ ಕೆಲಸ ಮಾಡಿಸುವುದಾಗಿದೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಾಗ ಸಾಮಗ್ರಿಗಳ ವೆಚ್ಚವೇ ಹೆಚ್ಚಾಗುತ್ತದೆ. ಕೂಲಿ ಕಡಿಮೆ ಆಗುತ್ತದೆ. ಈ ಕಾರಣದಿಂದಲೂ ರೈತ ಸಂಪರ್ಕ ರಸ್ತೆಗಳಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ’ ಎನ್ನುತ್ತಾರೆ ಅವರು.

ರಸ್ತೆಗಾಗಿ ನಿತ್ಯವೂ ಘರ್ಷಣೆ

ನರೇಗಲ್:‌ ಹೋಬಳಿಯ ರೈತರಿಗೆ ತಮ್ಮ ಹೊಲಗಳಿಗೆ ತೆರಳುವ ಮಾರ್ಗದ ಸಮಸ್ಯೆ ಈ ಮೊದಲಿನಿಂದಲೂ ಇದ್ದು ಅನ್ನದಾತರು ಅಕ್ಕಪಕ್ಕದ ಹೊಲಗಳ ಮಾಲೀಕರ ಜೊತೆಗೆ ತಕರಾರಿನಲ್ಲೇ ಜೀವನ ನಡೆಸುತ್ತಿದ್ದಾರೆ.

‘ನಮ್ಮ ಹೊಲ, ನಮ್ಮ ದಾರಿ ಯೋಜನೆಯೂ ಗ್ರಾಮೀಣ ಭಾಗದ ರೈತರಿಗೆ ಅನಕೂಲವಾಗಿದ್ದು ಹೋಬಳಿ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ರೈತರಿಗೆ ಇದರಿಂದ ಯಾವುದೇ ರೀತಿಯ ಅನುಕೂಲತೆಗಳು ದೊರೆತಿಲ್ಲ’ ಎಂದು ಪಟ್ಟಣದ ರೈತರಾದ ಶರಣಪ್ಪ ಧರ್ಮಾಯತ, ಆನಂದ ಕೊಟಗಿ, ಚಂದ್ರು ಹೊನವಾಡ, ಸದ್ದಾಂ ನಶೇಖಾನ್‌ ತಿಳಿಸಿದರು.

ದುರಸ್ತಿಯಾಗದ ರೈತ ಸಂಪರ್ಕ ರಸ್ತೆ

ಶಿರಹಟ್ಟಿ: ತಾಲ್ಲೂಕಿನ ಗ್ರಾಮೀಣ ಭಾಗದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ದುರಸ್ತಿ ಕಾಣದೆ ಹದಗೆಟ್ಟಿವೆ. ರಣತೂರು– ಶಿವಾಜಿನಗಕ್ಕೆ ಸಂಪರ್ಕ ಕಲ್ಪಿಸುವ 7 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯೂ ಕಲ್ಲು ಮಣ್ಣಿನಿಂದ ಕೂಡಿದೆ. ಮಳೆಗಾಲದಲ್ಲಿ ಈ ರಸ್ತೆ ಕೆಸರು ಗದ್ದೆಯಂತಾಗಿ ಹೊಲ ಮನೆಗೆ ಓಡಾಡುವುದು ದುಸ್ತರವಾಗಿದೆ ಎಂದು ರಣತೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ ಬಳ್ಳಾರಿ ದೂರಿದ್ದಾರೆ.

ತಾಲ್ಲೂಕಿನ ಸುಗನಹಳ್ಳಿ– ವಡವಿಹೊಸೂರಿಗೆ ಸಂಪರ್ಕ ಕಲ್ಪಿಸುವ 6 ಕಿ.ಮೀ. ರಸ್ತೆ ದುರಸ್ತಿ ಕಾಣದೇ ಸುಮಾರು 30 ವರ್ಷಗಳೇ ಉರುಳಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರಾದ ದೇವಪ್ಪ, ಪರಸಪ್ಪ ಜಕ್ಕಲಿ, ರಮೇಶ ಬಡ್ನಿ ಆಕ್ರೋಶ ವ್ಯಕ್ತಪಡಿಸಿದರು.

ಸಂಪರ್ಕ ರಸ್ತೆಗಳು ಸುಸ್ಥಿತಿಯಲ್ಲಿಲ್ಲ

ಗಜೇಂದ್ರಗಡ: ತಾಲ್ಲೂಕಿನಲ್ಲಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ಕೆಲವು ಕಡೆಗಳಲ್ಲಿ ಉತ್ತಮವಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಸಂಚರಿಸಲು ಯೋಗ್ಯವಾಗಿಲ್ಲ.

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ನಮ್ಮ ಹೊಲ, ನಮ್ಮ ದಾರಿ ಯೋಜನೆ ಅಡಿಯಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಆದರೆ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅಲ್ಲದೆ ಕೆಲವು ಕಡೆಗಳಲ್ಲಿ ಮೂಲ ದಾರಿ ಎಲ್ಲಿದೆ ಎಂದು ಸರ್ವೆ ನಡೆಸಿ ಅಭಿವೃದ್ಧಿಪಡಿಸಿ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಸಮರ್ಪಕವಾಗಿ ಅನುಷ್ಠಾನವಾಗದ ಯೋಜನೆ

ಮುಳಗುಂದ: ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಹೊಲಗಳಿಗೆ ತೆರಳುವ ರಸ್ತೆ ಕನಸು ಈಗಲೂ ಕಗ್ಗಂಟಾಗಿಯೇ ಉಳಿದಿದೆ. ತಕರಾರು ಇರುವ ರಸ್ತೆಗಳ ಸಮಸ್ಯೆಯೂ ಬಗೆಹರಿದಿಲ್ಲ.

ಪಟ್ಟಣದ ಇಚಲಪರಕಿ, ಯಳವತ್ತಿ, ಶೀತಾಲಹರಿ, ಕಲ್ಲೂರ, ಮುಳಗುಂದ ಮಧ್ಯದ ರಸ್ತೆಯನ್ನು 2015-16ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗುಡ್ಡದ ರಸ್ತೆ, ಚಿನ್ನದಕೊಂಡಿ ದಾರಿಗಳು ಈಗಲೂ ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇನ್ನೂ ಹೊಸಹಳ್ಳಿ ಗ್ರಾಮದಿಂದ ಸೈದಾಪೂರಕ್ಕೆ ತೆರಳುವ ರಸ್ತೆಯಂತೂ ದುರಸ್ತಿ ಭಾಗ್ಯ ಕಂಡಿಲ್ಲ.

ರೈತರ ಜಮೀನಿಗೆ ಇಲ್ಲ ಸಮರ್ಪಕ ರಸ್ತೆ

ಡಂಬಳ: ನಮ್ಮ ಹೊಲ ನಮ್ಮ ದಾರಿ ಯೋಜನೆ ಪ್ರಾರಂಭದಲ್ಲಿ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ರೈತರ ಜಮೀನುಗಳಿಗೆ ರಸ್ತೆ ನಿರ್ಮಾಣವಾಗಿವೆ. ಸಾರ್ವಜನಿಕರಿಂದ ಯೋಜನೆಯ ಪ್ರತಿಕ್ರಿಯೆ ಉತ್ತಮವಾಗಿತ್ತು. ಆದರೆ ಈಚೆಗೆ ಅನುದಾನ ಕೊರತೆಯಿಂದ ಚಟುವಟಿಕೆ ಸ್ಥಗಿತಗೊಂಡಿದೆ.

‘ಕೆಲವು ಭಾಗದಲ್ಲಿ ಉತ್ತಮ ರಸ್ತೆ ಮಾರ್ಗವಿಲ್ಲದೇ ಇರುವುದರಿಂದ ಬಿತ್ತನೆಯಾಗದೆ ಜಮೀನುಗಳು ಖಾಲಿ ಉಳಿದಿವೆ. ಇಂತಹ ಕಡೆಗಳಲ್ಲಿ ಅಧಿಕಾರಿಗಳು ಸರ್ವೆ ಮಾಡಿ ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು’ ಎಂದು ಒತ್ತಾಯ ಮಾಡುತ್ತಾರೆ ಡಂಬಳದ ರೈತ ಮುತ್ತಣ್ಣ ಹಿರೇಮಠ, ಹನಮಂತ ಮೇವುಂಡಿ, ನೀಲಪ್ಪ ಗೌಡಣ್ಣವರ.

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗಳು

ಲಕ್ಷ್ಮೇಶ್ವರ: ಈ ಹಿಂದೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆದಿವೆ. ಆದರೆ, ಬಹುತೇಕ ರಸ್ತೆಗಳು ಪೂರ್ಣಗೊಂಡಿಲ್ಲ. ಹೀಗಾಗಿ ರೈತರ ಗೋಳಾಟ ತಪ್ಪಿಲ್ಲ.

ಸಮೀಪದ ಶಿಗ್ಲಿಯಲ್ಲಿ ತಿಂಗಳ ಹಿಂದೆ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಗ್ರಾಮದ ರೈತರು ಶಾಸಕ ರಾಮಣ್ಣ ಲಮಾಣಿ ಅವರಿಗೆ, ‘ರೈತ ಸಂಪರ್ಕ ರಸ್ತೆಗಳು ಪೂರ್ಣಗೊಂಡಿಲ್ಲ. ಅರ್ಧಕ್ಕೆ ನಿಂತ ಕೆಲಸಗಳನ್ನು ಪುನರಾರಂಭಿಸಬೇಕು’ ಎಂದು ಆಗ್ರಹಿಸಿದ್ದರು.

ಸರ್ವೆ ಇಲಾಖೆಗೂ ಮಾಹಿತಿ ಇಲ್ಲ

ರೋಣ: ‘ಗ್ರಾಮೀಣ ಭಾಗಗಳಲ್ಲಿ ಹೊಲಗಳಿಗೆ ಹೋಗುವ ದಾರಿ ತೋರಿಸಿ ಎಂದು ಹೊಲದ ಪಹಣಿ, ಖಾತೆ ಸಂಖ್ಯೆ, ನಕಾಶೆ ನೀಡಿದರೂ ಸಹ, ಸರ್ವೆ ಇಲಾಖೆ ಅಧಿಕಾರಿಗಳು ನಮ್ಮಲ್ಲಿ ಯಾವುದೇ ದಾಖಲೆ ಇಲ್ಲ. ರೈತರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಹಾರಿಕೆ ಉತ್ತರ ನೀಡುತ್ತಾರೆ’ ಎಂದು ತಾಲ್ಲೂಕಿನ ರೈತರಾದ ಲಕ್ಷ್ಮಣ ತಳವಾರ, ಮುದಕಪ್ಪ ಮಾದರ, ಹನಮಂತಪ್ಪ ಲಮಾಣಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಸರ್ವೆ ಇಲಾಖೆಯ ಸಿಬ್ಬಂದಿ, ಹೊಲಗಳಿಗೆ ಹೋಗುವ ಮ್ಯಾಪನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸಿದ್ಧಪಡಿಸಲಾಗಿದೆ. ಇಲ್ಲೀವರೆಗೆ ಹೊಸದಾಗಿ ಸರ್ವೆ ಕಾರ್ಯ ಸರ್ಕಾರದಿಂದ ನಡೆಸದೇ ಇರುವ ಕಾರಣದಿಂದ ಗ್ರಾಮೀಣ ಭಾಗದಲ್ಲಿ ಇಂದಿಗೂ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಸರ್ಕಾರ ಜಾರಿಗೊಳಿಸಿದ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಪ್ರಯೋಜನಕ್ಕೆ ಬಾರದಾಗಿದೆ. ಶಾಸಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆ ಅಭಿವೃವೃದ್ಧಿ ಮಾಡಿಕೊಡುವಂತೆ ಬೇಡಿಕೆ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗಿಲ್ಲ
ದತ್ತಪ್ಪ ಯಳವತ್ತಿ, ರೈತ, ಮುಳಗುಂದ

ನಮ್ಮ ಹೊಲ ನಮ್ಮ ರಸ್ತೆ ಯೋಜನೆಯನ್ನು ಪಂಚಾಯತ್ ರಾಜ್ ಇಲಾಖೆ ನಿರ್ವಹಣೆ, ಅನುಷ್ಠಾನ ಮಾಡುತ್ತದೆ. ಎರಡು ವರ್ಷಗಳಿಂದ ಅನುದಾನ ಬಂದಿಲ್ಲ. ಬಹುತೇಕ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆ
ಎಚ್.ಎಸ್.ಜಿನಗಾ, ಇಒ, ಗದಗ ತಾ.ಪಂ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಶ್ರೀಶೈಲ ಎಂ. ಕುಂಬಾರ, ಚಂದ್ರು ಎಂ.ರಾಥೋಡ್‌, ಖಲೀಲಅಹ್ಮದ ಶೇಖ, ಚಂದ್ರಶೇಖರ ಭಜಂತ್ರಿ, ನಾಗರಾಜ ಎಸ್‌.ಹಣಗಿ, ಲಕ್ಷ್ಮಣ ಎಚ್.ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT