ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಪ್ರತ್ಯೇಕ ಮಾರುಕಟ್ಟೆಗೆ ಒಕ್ಕೊರಲ ಆಗ್ರಹ

ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಿ, ಯೋಜನೆಗಳ ಸೌಲಭ್ಯ ಅರ್ಹರಿಗಷ್ಟೇ ಸಿಗಲಿ
Last Updated 1 ಮಾರ್ಚ್ 2021, 5:10 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಅಂದಾಜು 6 ಸಾವಿರ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು ಇದ್ದು, ಸುಸಜ್ಜಿತವಾದ ಮಾರುಕಟ್ಟೆ ನಿರ್ಮಿಸಿಕೊಡಬೇಕು ಎಂಬುದು ಇವರೆಲ್ಲರ ಒಕ್ಕೋರಲಿನ ಆಗ್ರಹವಾಗಿದೆ.

ನಗರ ಹಾಗೂ ಪಟ್ಟಣಗಳಲ್ಲಿ ಇರುವ ಬೀದಿಬದಿ ವ್ಯಾಪಾರಿಗಳಿಗೆ ಆಯಕಟ್ಟಿನ ಜಾಗದಲ್ಲಿ ಮಾರಾಟ ಕೇಂದ್ರ ಮಾಡಿ ಕೊಟ್ಟರೆ ಎಲ್ಲ ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ ಎಂಬುದು ಸಂಘದ ಪದಾಧಿಕಾರಿಗಳ ಅಭಿಪ್ರಾಯವಾಗಿದೆ.

‘ಗದಗ– ಬೆಟಗೇರಿ ಅವಳಿ ನಗರದಲ್ಲಿ 1,530 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಆತ್ಮ ನಿರ್ಭರ ಯೋಜನೆ ಅಡಿಯಲ್ಲಿ 2 ಸಾವಿರ ಮಂದಿ ಅರ್ಜಿ ಹಾಕಿದ್ದರು. ಅವರಲ್ಲಿ 560 ಮಂದಿಗೆ ₹10 ಸಾವಿರ ಸಿಕ್ಕಿದೆ. ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥಿತ ಮಾರುಕಟ್ಟೆ ಒದಗಿಸಿಕೊಡಲು ಸ್ಥಳೀಯ ಆಡಳಿತಗಳು ಕ್ರಮವಹಿಸಬೇಕು. ಜತೆಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು’ ಎಂದು ಆಗ್ರಹಿಸುತ್ತಾರೆ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಅನ್ವರ್‌ ಶಿರಹಟ್ಟಿ.

‘ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕು ಹಕ್ಕು, ಅವಕಾಶ ಕಲ್ಪಿಸಿದೆ. ಅದೇರೀತಿಯಾಗಿ ಕಾನೂನಿನಲ್ಲಿ ಇರುವ ಸೌಲಭ್ಯ, ಸವಲತ್ತುಗಳನ್ನು ನಮಗೆ ದೊರಕಿಸಿಕೊಡಬೇಕು. ಆತ್ಮ ನಿರ್ಭರ, ಬಡವರ ಬಂಧು ಹಾಗೂ ಮತ್ತಿತರ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕು’ ಎಂದು ಅವರು ಆಗ್ರಹಿಸಿದರು.

ಗದಗ– ಬೆಟಗೇರಿ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮಿತಿ ರಚನೆಯಾಗಿದ್ದು, ಇದಕ್ಕೆ ಪೌರಾಯುಕ್ತರು ಅಧ್ಯಕ್ಷರಾಗಿದ್ದಾರೆ. ಆರೋಗ್ಯ ಇಲಾಖೆ, ನಗರಾಭಿವೃದ್ಧಿ, ಪೊಲೀಸ್‌ ಇಲಾಖೆ ಸೇರಿದಂತೆ ಶೇ 60ರಷ್ಟು ಅಧಿಕಾರಿಗಳು, ಶೇ 40ರಷ್ಟು ಮಂದಿ ಬೀದಿ ಬದಿ ವ್ಯಾಪಾರಿಗಳ ಸಂಘದವರು ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಬೀದಿಬದಿ ವ್ಯಾಪಾರಿಗಳ ಹಿತಕ್ಕಾಗಿ ಇದೆ ಎಂದು ಅನ್ವರ್‌ ತಿಳಿಸಿದರು.

ಅಲೆದಾಟ
ಡಂಬಳ:
ನಿತ್ಯ ಅಲೆದಾಟ ತಪ್ಪಿಲ್ಲ. ಸರ್ಕಾರದ ಸಹಾಯಧನ ಕನಸಿನ ಮಾತು. ವಾರದಲ್ಲಿ ಯಾವ ಯಾವ ಗ್ರಾಮದಲ್ಲಿ ಸಂತೆ ಇರುತ್ತದೋ ಅಲ್ಲಿಗೆ ಗಂಟು ಮೂಟೆ ಕಟ್ಟಿಕೊಂಡು, ವಾಹನ ಬಾಡಿಗೆ ಮಾಡಿಕೊಂಡು ಹೋಗಿ ವ್ಯಾಪಾರ ಮಾಡುತ್ತೇವೆ. ತಳ್ಳುವ ಕೈಗಾಡಿಯ ಸಹಾಯದಿಂದ ವಿವಿಧ ರೀತಿಯ ತರಕಾರಿ ತಗೆದುಕೊಂಡು ಗ್ರಾಮದ ವಿವಿಧ ಭಾಗದಲ್ಲಿ ಸಂಚರಿಸಿ ವ್ಯಾಪಾರ ಮಾಡುತ್ತೇವೆ ಎನ್ನುವ ದೂರು ಬೀದಿ ಬದಿ ವ್ಯಾಪಾರಸ್ಥರದ್ದಾಗಿದೆ.

ಹಲವು ವರ್ಷಗಳಿಂದ ತಳ್ಳುವ ಗಾಡಿಯ ಮೂಲಕ ವಿವಿಧ ತರಕಾರಿ ತಗೆದುಕೊಂಡು ಹೋಗಿ ವ್ಯಾಪಾರ ಮಾಡುತ್ತೇವೆ. ಇದರಿಂದ ಬರುವ ಅಲ್ಪಸ್ವಲ್ಪ ಆದಾಯದಿಂದ ಕುಟುಂಬ ನಿರ್ವಹಣೆ ಮಾಡಬೇಕು. ವ್ಯಾಪಾರ ಮಾಡಲು ಸ್ಥಳೀಯ ಪಂಚಾಯ್ತಿ ಪರವಾನಗಿ ಪಡೆದುಕೊಂಡರೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ ಎನ್ನುವ ಮಾಹಿತಿಯು ನಮಗೆ ಇಲ್ಲಾ ಎಂದು ಗೋಳು ತೋಡಿಕೊಂಡರು.

ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯವರು ಸಭೆ ನಡೆಸಿ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ಮಾಡುವ ಕುರಿತು ತಿರ್ಮಾನ ಕೈಗೊಂಡರೆ ಸಾಧ್ಯವಾದಷ್ಟು ಸಹಾಯ ಮಾಡಬಹುದು ಎನ್ನುತ್ತಾರೆ ಡಂಬಳ ಗ್ರಾಮ ಪಂಚಾಯ್ತಿ ಪಿಡಿಒ ಎಸ್.ಕೆ ಕವಡೆಲೆ.

ಯಾವುದೇ ಜಾಗ ಸೌಲಭ್ಯ ಇಲ್ಲ‌
ಲಕ್ಷ್ಮೇಶ್ವರ:
ಪಟ್ಟಣದಲ್ಲಿ ನೂರಾರು ಬೀದಿ ಬದಿ ವ್ಯಾಪಾರಸ್ಥರು ಇದ್ದು ಅವರ ಅನುಕೂಲಕ್ಕಾಗಿ ಪುರಸಭೆ ಈವರೆಗೂ ಯಾವುದೇ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಅವರು ಪಟ್ಟಣದ ಹೊಸ ಬಸ್ ನಿಲ್ದಾಣ ಮತ್ತು ಶಿಗ್ಲಿ ಕ್ರಾಸ್‍ನಿಂದ ಹಾವಳಿ ಹನುಮಪ್ಪನ ದೇವಸ್ಥಾನದವರೆಗೆ ಎಲ್ಲೆಂದರಲ್ಲಿ ಬೀದಿ ಬದಿ ನಿಂತು ಅಥವಾ ಕುಳಿತು ವ್ಯಾಪಾರ ನಡೆಸುತ್ತಿದ್ದಾರೆ.

ಪಟ್ಟಣದಲ್ಲಿ ಅಂದಾಜು 360ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ಇದ್ದಾರೆ. ಇವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್‍ಡೌನ್ ಸಂದರ್ಭದಲ್ಲಂತೂ ಇನ್ನೂ ಅಧಿಕವಾಗಿತ್ತು.

ಪ್ರತಿದಿನ ಈ ವ್ಯಾಪಾರಸ್ಥರಿಂದ ₹10 ಶುಲ್ಕ ವಸೂಲಿ ಮಾಡ ಲಾಗುತ್ತಿದೆ. ಆದರೆ, ಅವರಿಗೆ ಶಾಶ್ವತವಾದ ಸ್ಥಳದ ವ್ಯವಸ್ಥೆ ಮಾಡಿಲ್ಲ. ಸಂಚಾರ ದಟ್ಟಣೆ ಸಮಸ್ಯೆ ತಲೆದೋ ರಿದಾಗ ಪೊಲೀಸರು ಬೀದಿ ಬದಿ ವ್ಯಾಪಾರಸ್ಥರಿಗೆ ಎತ್ತಂಗಡಿಯ ಕಿರಿಕಿರಿ ಮಾಡುವುದು ಸಹಜವಾಗಿದೆ.

ಬೀದಿ ಬದಿ ವ್ಯಾಪಾರಸ್ಥರಿಗಾಗಿ ಪುರಸಭೆ ಗುರುತಿನ ಚೀಟಿ ಬಿಟ್ಟರೆ ಬೇರೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಇದೀಗ ಅವರೂ ಒಂದು ಸಂಘ ಕಟ್ಟಿಕೊಂಡಿದ್ದು ಮುಂದಿನ ದಿನಗಳಲ್ಲಿ ಅವರೂ ಸೌಲಭ್ಯಕ್ಕಾಗಿ ಮೊರೆ ಹೋಗಬಹುದು.

‘ಲಾಕ್‍ಡೌನ್ ನಂತರ ನಮ್ಮಂತಹ ವ್ಯಾಪಾರಸ್ಥರು ಹೆಚ್ಚಾಗಿದ್ದಾರೆ. ಈಗಂತೂ ವ್ಯಾಪಾರ ಕಡಿಮೆ ಆಗಿದೆ’ ಎಂದು ಬೀದಿ ಬದಿಯಲ್ಲಿ ಬಟ್ಟೆ ವ್ಯಾಪಾರ ನಡೆಸುವ ರುದ್ರಪ್ಪ ಸಂಶಿ ತಮ್ಮ ನೋವು ತೋಡಿಕೊಂಡರು.

ಇಲ್ಲ ಸುಸಜ್ಜಿತ ಮಾರುಕಟ್ಟೆ
ನರಗುಂದ:
ಪಟ್ಟಣದಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಇಲ್ಲ. ಇದರಿಂದ ಬೀದಿಬದಿ ವ್ಯಾಪಾರ ಎಲ್ಲೆಂದರಲ್ಲಿ ನಡೆಯುತ್ತಿದೆ.

ಅದರಲ್ಲೂ ಬಸವೇಶ್ವರ ವೃತ್ತದ ಸಮೀಪ ತರಕಾರಿ ವ್ಯಾಪಾರ ಬೀದಿಯಲ್ಲಿಯೇ ನಡೆಯುತ್ತಿದೆ. ಇದರಿಂದ ಇಲ್ಲಿ ನಿತ್ಯ ಜನದಟ್ಟಣೆ ಹೆಚ್ಚಾಗಿದೆ. ವಾಹನ ಸಂಚಾರಕ್ಕೂ ಪರದಾಡಬೇಕಿದೆ. ಹುಬ್ವಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಕ್ಕ ಹಾಗೂ ಸವದತ್ತಿ ರಸ್ತೆಯಲ್ಲಿಯೂ ಬೀದಿ ವ್ಯಾಪಾರ ನಡೆಯುತ್ತಿದೆ. ಪುರಸಭೆ ನಿತ್ಯ ಸ್ವಚ್ಛತೆಗೋಸ್ಕರ ಒಂದಷ್ಟು ಕರ ಸಂಗ್ರಹಿಸುತ್ತಿದೆ. ಆದರೆ ಸುಸಜ್ಜಿತ ಮಾರುಕಟ್ಟೆ ಒದಗಿಸಿ ಎಂದು ಬೀದಿ ಬದಿ ವ್ಯಾಪಾರಸ್ಥರು ಆಗ್ರಹಿಸುತ್ತಾರೆ.

‘ಈಗಾಗಲೇ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಪುರಸಭೆ ಯೋಜನೆ ರೂಪಿಸಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಧಿಕೃತ ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿಯಿಂದ ಬ್ಯಾಂಕ್ ಮೂಲಕ ₹10 ಸಾವಿರ ನೆರವು ನೀಡಲಾಗುತ್ತಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್‌.ಎಸ್‌.ಬ್ಯಾಳಿ ತಿಳಿಸಿದ್ದಾರೆ.

ಗುರುತಿನ ಚೀಟಿ ಅರ್ಜಿಗಳೇ ಕಳವು!
ಶಿರಹಟ್ಟಿ:
ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಮಂದಿ ಬೀದಿ ಬದಿಯಲ್ಲಿ ಸೊಪ್ಪು, ತರಕಾರಿ, ಹೂವು ಮತ್ತು ಹಣ್ಣುಗಳ ವ್ಯಾಪಾರವನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಪಟ್ಟಣ ಪಂಚಾಯ್ತಿ ವತಿಯಿಂದ ಗುರುತಿನ ಚೀಟಿಗಳನ್ನು ವಿತರಿಸಲು 200ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಸ್ಥಳೀಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಲ್ಲಾ ಅರ್ಜಿಗಳು ಕಳೆದು ಹೋಗಿದ್ದು ಇನ್ನೊಮ್ಮೆ ಅರ್ಜಿ ಸಲ್ಲಿಸಲು ಹೇಳುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಮಾಬುಸಾಬ ಲಕ್ಷ್ಮೇಶ್ವರ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರ ಅಹ್ಮದ ನಗಾರಿ, ಸದಸ್ಯ ಆನಂದ ಕೋಳಿ ಆರೋಪಿಸಿದರು.

ಸದ್ಯ 60ಕ್ಕೂ ಹೆಚ್ಚು ಜನರ ಬಳಿ ಗುರುತಿನ ಚೀಟಿಗಳಿವೆ. ಸಂಬಂಧ ಪಟ್ಟ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಮಹಿಳೆಯರಿಗೆ ವ್ಯವಸ್ಥಿತವಾದ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಾಸಾಶನಕ್ಕೆ ಆಗ್ರಹ
ಸ್ಥಳೀಯ ಸಂಸ್ಥೆಗಳಿಂದಲೇ ಬೀದಿ ಬದಿ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಆರ್ಥಿಕ ಸಹಾಯ ದೊರೆಯಬೇಕು. ವಯಸ್ಸಾದ ವ್ಯಾಪಾರಸ್ಥರಿಗೆ ಮಾಸಾಶನ ನೀಡುವುದು ಸೇರಿದಂತೆ ವ್ಯಾಪಾರಸ್ಥರ ಬದುಕಿಗೆ ಅನುಕೂಲಕರವಾದ ಯೋಜನೆಗಳನ್ನು ಜಾರಿಗೆ ತರಬೇಕು ಎನ್ನುತ್ತಾರೆ ತಳ್ಳುವ ಗಾಡಿಯ ಮೂಲಕ ವ್ಯಾಪಾರ ಮಾಡುವ ಡಂಬಳದ ರಜಾಕಸಾಬ ಆಲೂರ ಮತ್ತು ಅಶೋಕ ತಳಗೇರಿ.

ಪ್ರತ್ಯೇಕ ಸ್ಥಳ ಒದಗಿಸುವ ಚಿಂತನೆ
‘ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಪುರಸಭೆ ವತಿಯಿಂದ ₹10 ಸಾವಿರ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಇದರೊಂದಿಗೆ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಅಲ್ಲಿ ವ್ಯಾಪಾರ ನಡೆಸಲು ಅವರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ’ ಎಂದು ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಲಕ್ಷ್ಮಣ ಎಚ್ ದೊಡ್ಡಮನಿ, ಬಸವರಾಜ ಹಲಕುರ್ಕಿ, ನಾಗರಾಜ ಎಸ್‌.ಹಣಗಿ, ಖಲೀಲಅಹ್ಮದಶೇಖ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT