ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌ ಚಿಕಿತ್ಸೆ: ತಪ್ಪದ ಸಮಸ್ಯೆ

ರಕ್ತ ಶುದ್ಧೀಕರಣಕ್ಕೆ ಕಾಯುವ ಪರಿಸ್ಥಿತಿ, ಹೆಚ್ಚುವರಿ ಯಂತ್ರಗಳಿಗೆ ಆಗ್ರಹ
Last Updated 16 ಜನವರಿ 2023, 5:22 IST
ಅಕ್ಷರ ಗಾತ್ರ

ಗದಗ: ರೋಗಿಗಳಿಗೆ ಅಗತ್ಯ ಇರುವಷ್ಟು ಡಯಾಲಿಸಿಸ್‌ ಯಂತ್ರಗಳು ಲಭ್ಯವಿಲ್ಲದ ಕಾರಣ ಜಿಲ್ಲೆಯ ವಿವಿಧೆಡೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಇದರ ಜತೆಗೆ, ಎಚ್‌ಐವಿ, ಎಚ್‌ಸಿವಿ ಸೋಂಕು ಪೀಡಿತರ ಡಯಾಲಿಸಿಸ್‌ಗೆ ಪ್ರತ್ಯೇಕ ಯಂತ್ರಗಳಿಲ್ಲದೇ ಬೇರೆ ಆಸ್ಪತ್ರೆಗಳನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸದಾಗಿ ರಚನೆಯಾದ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ತಾಲ್ಲೂಕು ಕೇಂದ್ರಗಳಲ್ಲಿ ಈವರೆಗೆ ಆರೋಗ್ಯ ಸೌಲಭ್ಯಗಳು ಮೇಲ್ದರ್ಜೆಗೇರಿಲ್ಲ. ಇಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಪಕ್ಕದ ತಾಲ್ಲೂಕು ಕೇಂದ್ರಗಳನ್ನೇ ಅವಲಂಬಿಸಬೇಕಿರುವ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಸೋಂಕಿತರು ನಿಯಮಿತ ಡಯಾಲಿಸಿಸ್‌ಗಳಿಂದ ತಪ್ಪಿಸಿಕೊಳ್ಳುವಂತಾಗಿದೆ. ಇದರ ಜತೆಗೆ, ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್‌ ಯಂತ್ರಗಳಿದ್ದರೂ, ಎಲ್ಲರಿಗೂ ಲಭ್ಯವಾಗುತ್ತಿಲ್ಲ. ಆದಕಾರಣ, ಕೆಲವೆಡೆಗಳಲ್ಲಿ ರೋಗಿಗಳ ಅವಶ್ಯಕತೆಗೆ ತಕ್ಕಷ್ಟು ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಗದಗ ಜಿಲ್ಲೆಯಲ್ಲಿ 75 ಮಂದಿ ಗಂಡಸರು ಹಾಗೂ 25 ಮಂದಿ ಹೆಂಗಸರು ಡಯಾಲಿಸಿಸ್‌ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಸರದಿಗಾಗಿ ಕಾಯುವ ಪರಿಸ್ಥಿತಿ ಯಾವ ರೋಗಿಗಳಿಗೂ ಇಲ್ಲ. ನೂತನವಾಗಿ ರಚನೆಯಾದ ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿರುವುದರಿಂದ ಅಲ್ಲಿಗೆ ಡಯಾಲಿಸಿಸ್‌ ಸೌಲಭ್ಯ ಇಲ್ಲ’ ಎನ್ನುತ್ತಾರೆ ಡಿಎಚ್‌ಒ ಡಾ. ಜಗದೀಶ್‌ ನುಚ್ಚಿನ.

‘ಗದಗ ಜಿಲ್ಲಾ ಆಸ್ಪತ್ರೆಯಲ್ಲಿ 8, ಮುಂಡರಗಿಯಲ್ಲಿ 1, ನರಗುಂದ 2, ರೋಣ 2 ಹಾಗೂ ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯಲ್ಲಿ 2 ಡಯಾಲಿಸಿಸ್‌ ಕೇಂದ್ರಗಳಿವೆ’ ಎಂದು ಅವರು ತಿಳಿಸಿದ್ದಾರೆ.

ಒಂದೇ ಯಂತ್ರ: ರೋಗಿಗಳ ಪರದಾಟ

ಮುಂಡರಗಿ: ಪಟ್ಟಣದ ನೂರು ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಸಗಿ ಹೊರಗುತ್ತಿಗೆ ಆಧಾರದ ಮೇಲೆ ಡಯಾಲಿಸಿಸ್ ಘಟಕ ಕಾರ್ಯನಿರ್ವಹಿಸುತ್ತಲಿದೆ. ಘಟಕದಲ್ಲಿ ಕೇವಲ ಒಂದೇ ಯಂತ್ರ ಕಾರ್ಯನಿರ್ವಹಿಸುತ್ತಲಿದ್ದು, ಅದು ತಾಂತ್ರಿಕವಾಗಿ ಆಗಾಗ ಕೈಕೊಡುತ್ತಿರುತ್ತದೆ.

ನಿತ್ಯ ಸರಾಸರಿ ಐದಾರು ಜನರು ಡಯಾಲಿಸಿಸ್ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಾರೆ. ರಕ್ತದ ಕಲುಷಿತ ಪ್ರಮಾಣದ ಆಧಾರದ ಮೇಲೆ ರೋಗಿಯು ವಾರದಲ್ಲಿ ಎರಡು ಅಥವಾ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.

ಒಬ್ಬ ರೋಗಿಯ ರಕ್ತ ಶುದ್ಧೀಕರಣಕ್ಕೆ ಕನಿಷ್ಠ ಮೂರು ಗಂಟೆ ಬೇಕಾಗುತ್ತದೆ. ನಾಲ್ಕಕ್ಕಿಂತ ಹೆಚ್ವು ರೋಗಿಗಳು ಬಂದರೆ ಅವರು ಮರಳಿ ಹೋಗಬೇಕಾಗುತ್ತದೆ. ಒಂದೇ ಯಂತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳು ಪರದಾಡಬೇಕಾಗುತ್ತದೆ.

ರೋಗಿಗಳ ಪ್ರಮಾಣಕ್ಕೆ ಅನುಗುಣವಾಗಿ ಇನ್ನೊಂದು ಯಂತ್ರದ ಅಗತ್ಯವಿದೆ. ಎರಡು ಯಂತ್ರಗಳು ಏಕಕಾಲದಲ್ಲಿಯೇ ಕಾರ್ಯ ನಿರ್ವಹಿಸಿದರೆ ಒತ್ತಡ ಕಡಿಮೆಯಾಗಲಿದೆ. ಇನ್ನೊಂದು ಯಂತ್ರಕ್ಕಾಗಿ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದ್ದು, ಸದ್ಯದಲ್ಲಿಯೇ ಸಿಗುವ ಭರವಸೆ ಇದೆ’ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ರೋಗಿಗಳಿಂದ ಹಣ ಪಡೆದುಕೊಳ್ಳುವುದಿಲ್ಲ. ಡಯಾಲಿಸಿಸ್ ಪಡೆದುಕೊಳ್ಳುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರವೇ ಹೊರಗುತ್ತಿಗೆದಾರರಿಗೆ ಮಾಸಿಕವಾಗಿ ಹಣ ಪಾವತಿಸುತ್ತದೆ.

ಸಕಾಲಕ್ಕೆ ಚಿಕಿತ್ಸೆ

ಶಿರಹಟ್ಟಿ: ಸ್ಥಳೀಯ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ನಿಯಮಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಉತ್ತಮ ಯಂತ್ರಗಳೊಂದಿಗೆ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳು ಪಡೆಯುತ್ತಿದ್ದಾರೆ.

ಪ್ರಸ್ತುತ ತಾಲ್ಲೂಕು ಆಸ್ಪತ್ರೆಯಲ್ಲಿ 10 ಜನ ರೋಗಿಗಳು ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ರೋಗಿಗೆ ಸುಮಾರು 3-4 ಗಂಟೆಗಳ ಕಾಲ ರಕ್ತ ಶುದ್ಧಿಕರಣ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಯಂತ್ರಗಳಿದ್ದು, ಅದಕ್ಕನುಗುಣವಾಗಿ ಸಿಬ್ಬಂದಿಯೂ ಇದ್ದಾರೆ. ಎಚ್‌ಐವಿ, ಎಚ್‌ಸಿವಿಯಂತಹ ಸೋಂಕು ಪೀಡಿತರ ಡಯಾಲಿಸಿಸ್‌ಗಾಗಿ ಪ್ರತ್ಯೇಕ ಯಂತ್ರಗಳಿಲ್ಲ. ಬದಲಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

‘ಇರುವ 10 ಜನ ರೋಗಿಗಳ ಚಿಕಿತ್ಸೆಗೆ ಇಬ್ಬರು ಸಿಬ್ಬಂದಿ ಹಾಗೂ ಒಬ್ಬರು ಅಟೆಂಡರ್ ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಗಿಗಳಿಗೆ ಯಾವುದೇ ನಿಯಮಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸುಭಾಷ್ ದಾಯಗೊಂಡ ಮಾಹಿತಿ ನೀಡಿದ್ದಾರೆ.

ಹೊರಗಿನ ಜನರ ಒತ್ತಡ

ನರಗುಂದ: ಪಟ್ಟಣದ ತಾಲ್ಲೂಕು ಬಾಬಾಸಾಹೇಬ (ಭಾವೆ) ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಘಟಕಗಳಿದ್ದು, ನಿರಂತರ ಸೇವೆ ಒದಗಿಸುತ್ತಿವೆ. ಪಟ್ಟಣ ಹಾಗೂ ತಾಲ್ಲೂಕಿನ ರೋಗಿಗಳಿಗೆ ಸಮರ್ಪಕವಾದ ಸೇವೆ ದೊರೆಯುತ್ತಿದೆ. ನಿತ್ಯ ನಿಗದಿತ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಅತಿ ಹೆಚ್ಚಿನ ರೋಗಿಗಳು ಬಂದರೆ ಒಮ್ಮೆಲೇ ಡಯಾಲಿಸಿಸ್ ಕಷ್ಟವಾಗುತ್ತದೆ. ಆದರೆ, ಈಗ ಯಾವುದೇ ಒತ್ತಡಗಳಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಸಿಬ್ಬಂದಿ.

ನೆರೆಯ ತಾಲ್ಲೂಕುಗಳಲ್ಲಿನ ಡಯಾಲಿಸಿಸ್ ಯಂತ್ರ ದುರಸ್ತಿಗೆ ಒಳಗಾದಾಗ ಒತ್ತಡ ಉಂಟಾಗುತ್ತದೆ. ಇನ್ನೆರಡು ಘಟಕಗಳನ್ನೂ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಚ್‌ಐವಿ, ಎಚ್‌ಸಿವಿಯಂತಹ ಸೋಂಕು ಪೀಡಿತರ ಡಯಾಲಿಸಿಸ್‌ಗಾಗಿ ಪ್ರತ್ಯೇಕ ಯಂತ್ರಗಳಿಲ್ಲ. ಆ ರೀತಿಯ ರೋಗಿಗಳಿದ್ದರೆ ಪ್ರತ್ಯೇಕ ಯಂತ್ರ ಬೇಕಾಗುತ್ತದೆ. ಜತೆಗೆ ನೇತ್ರತಜ್ಞರು ಬೇಕು‌. ಇದು ನರಗುಂದ ಆಸ್ಪತ್ರೆಯಲ್ಲಿ ಕಾಣುತ್ತಿಲ್ಲ.

‘ಇರುವ ಡಯಾಲಿಸಿಸ್ ಯಂತ್ರಗಳು ಸುಸಜ್ಜಿತವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಪ್ರತ್ಯೇಕ ರಾಜ್ಯಮಟ್ಟದ ಏಜೆನ್ಸಿಯೊಂದು ನಿರ್ವಹಿಸುತ್ತದೆ’ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.

‘ನಮ್ಮ ಆಸ್ಪತ್ರೆಯಲ್ಲಿ ಎರಡು ಸುಸಜ್ಜಿತ ಡಯಾಲಿಸಿಸ್ ಘಟಕಗಳಿವೆ. ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸುತ್ತವೆ. ಒಟ್ಟು 12 ರೋಗಿಗಳು ನಿತ್ಯ ಬದಲಾವಣೆಯೊಂದಿಗೆ ನಿಗದಿತ ಸಮಯದಲ್ಲಿ ಡಯಾಲಿಸಿಸ್‌ಗೆ ಒಳಗಾಗುತ್ತಾರೆ’ ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವರುಣ ಸವದಿ ತಿಳಿಸಿದ್ದಾರೆ.

ಎರಡೇ ಡಯಾಲಿಸಿಸ್ ಯಂತ್ರಗಳು

ರೋಣ: ತಾಲ್ಲೂಕಿಗೆ ಕೇವಲ ಎರಡು ಡಯಾಲಿಸಿಸ್ ಯಂತ್ರಗಳಿದ್ದು, ಒಬ್ಬರೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರಿಂದ ರೋಗಿಗಳಿಗೆ ಅನಾನುಕೂಲ ಉಂಟಾಗಿದೆ.

ಭೀಮಸೇನ ಜೋಶಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸಾಕಷ್ಟಿದೆ. ಅದರಲ್ಲಿ ಪ್ರಮುಖವಾಗಿ ಅರವಳಿಕೆ ತಜ್ಞರು, ಚಿಕ್ಕಮಕ್ಕಳ ತಜ್ಞರು, ಕಣ್ಣು ಕಿವಿ ಮೂಗು ಚಿಕಿತ್ಸಾ ತಜ್ಞರು ಲಭ್ಯವಿಲ್ಲದೇ, ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದೇರೀತಿ, ತಾಲ್ಲೂಕಿಗೆ ಎರಡೇ ಡಯಾಲಿಸಿಸ್ ಯಂತ್ರಗಳಿರುವುದರಿಂದ ದಿನಕ್ಕೆ ನಾಲ್ಕು ರೋಗಿಗಳಿಗೆ ಮಾತ್ರ ಡಯಾಲಿಸಿಸ್ ಮಾಡಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಎಚ್‌ಐವಿ, ಎಚ್‌ಸಿವಿ ಸೋಂಕು ಪೀಡಿತರಿಗೆ ಪ್ರತ್ಯೇಕ ಯಂತ್ರಗಳು ಇಲ್ಲ. ಕಿಡ್ನಿ ವೈಫಲ್ಯದಿಂದ ಬಳಲುವ ಎಷ್ಟೋ ಸೋಂಕಿತರು ರಕ್ತ ಶುದ್ದೀಕರಣಕ್ಕೆ ಆಸ್ಪತ್ರೆಯಲ್ಲಿ ಕಾಯುವ ಪರಿಸ್ಥಿತಿ ತಪ್ಪದಾಗಿದೆ.

ಎರಡು ಡಯಾಲಿಸಿಸ್ ಯಂತ್ರಗಳು ಮಾತ್ರ ಇದ್ದು, ಪ್ರತಿದಿನ ನಾಲ್ಕು ಮಂದಿ ಸೋಂಕಿತರಿಗೆ ರಕ್ತ ಶುದ್ದೀಕರಣ ಕ್ರಿಯೆ ನಡೆಯುತ್ತಿದೆ. ಯಾವುದೇ ಸೋಂಕಿತರಿಗೂ ತೊಂದರೆಯಾಗದಂತೆ ಸರದಿಯ ಪ್ರಕಾರ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುವುದು ಎನ್ನುತ್ತಾರೆ ಹಿರಿಯ ವೈದ್ಯಾಧಿಕಾರಿ ಡಾ. ಎಚ್.ಎಲ್.ಗಿರಡ್ಡಿ.

ಡಯಾಲಿಸಿಸ್‌ ಸೌಲಭ್ಯ ಇಲ್ಲ

ನರೇಗಲ್: ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್‌ ಸೌಲಭ್ಯ ಇಲ್ಲ. ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ದಾಖಲಾದಾಗ ಅವರನ್ನು ರೋಣ ತಾಲ್ಲೂಕು ಆಸ್ಪತ್ರೆ ಅಥವಾ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ.ಡಿ.ಸಾಮುದ್ರಿ ತಿಳಿಸಿದ್ದಾರೆ.

ರೋಗಿಗಳ ಪರದಾಟ

ಗಜೇಂದ್ರಗಡ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೌಲಭ್ಯ ಇಲ್ಲ. ತಾಲ್ಲೂಕಿನ ರೋಗಿಗಳು ಡಯಾಲಿಸಿಸ್ ಸೌಲಭ್ಯಕ್ಕೆ ರೋಣದ ತಾಲ್ಲೂಕು ಆಸ್ಪತ್ರೆ, ಜಿಲ್ಲೆಯ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ.

ರೋಣದ ತಾಲ್ಲೂಕು ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿದ್ದು, ತಲಾ ಮೂರು ರೋಗಿಗಳಂತೆ ಪ್ರತಿದಿನ 6 ರೋಗಿಗಳಿಗೆ ಡಯಾಲಿಸಿಸ್ ಮಾಡುವ ಸೌಲಭ್ಯವಿದೆ. ಇನ್ನುಳಿದ ರೋಗಿಗಳು ಸರದಿಯಲ್ಲಿ ಕಾಯಬೇಕು. ಇಲ್ಲವೇ ಜಿಲ್ಲೆಯ ಇತರೆ ಆಸ್ಪತ್ರೆಗಳನ್ನು ಅವಲಂಬಿಸಬೇಕು. ಗಜೇಂದ್ರಗಡ ತಾಲ್ಲೂಕಿನಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಲವು ರೋಗಿಗಳಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ 8 ಡಯಾಲಿಸಿಸ್‌ ಯಂತ್ರಗಳು ಲಭ್ಯ

ಗದಗ ಜಿಲ್ಲಾ ಆಸ್ಪತ್ರೆಯಲ್ಲಿ 8 ಡಯಾಲಿಸಿಸ್‌ ಯಂತ್ರಗಳು ಲಭ್ಯ ಇವೆ. ಅದರಲ್ಲಿ ಒಂದು ಯಂತ್ರವನ್ನು ಎಚ್ಐವಿ, ಎಚ್‌ಸಿವಿ ರೋಗಿಗಳಿಗೆ ಮೀಸಲಿಡಲಾಗಿದೆ ಎಂದು ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಪ್ರತಿ ತಿಂಗಳು 500ರಿಂದ 600 ರೋಗಿಗಳ ಡಯಾಲಿಸಿಸ್‌ ನಡೆಯುತ್ತದೆ. ಈ ಪ್ರಕ್ರಿಯೆಗೆ 8 ಮಂದಿ ಸಿಬ್ಬಂದಿ ಇದ್ದಾರೆ. ಬೆಳಿಗ್ಗೆ 8ರಿಂದ ರಾತ್ರಿ 9.30ರವರೆಗೆ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದೆ. ರೋಗಿಗಳ ಚಿಕಿತ್ಸೆಗೆ ಬೇಕಿರುವ ಇಂಜೆಕ್ಷನ್‌ ಸೌಲಭ್ಯ ಇರುತ್ತದೆ. ಜಿಮ್ಸ್‌ ನಲ್ಲಿ ಕಿಡ್ನಿ ಸಮಸ್ಯೆಯಿಂದ ದಾಖಲಾಗುವ ಹಾಗೂ ಖಾಸಗಿ ಆಸ್ಪತ್ರೆಯಿಂದ ಬರುವ ಕಿಡ್ನಿ ವೈಫಲ್ಯದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ವೈದ್ಯರ ಸಲಹೆಯಂತೆ ರೋಗಿಗಳಿಗೆ ಮುಂಚಿತವಾಗಿ ದಿನಾಂಕಗಳನ್ನು ನೀಡಲಾಗುತ್ತದೆ. ಅದರಂತೆ ಸ್ಲಾಟ್‌ಗಳನ್ನು ಸಿದ್ದಪಡಿಸಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಡಯಾಲಿಸಿಸ್‌ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಯಾಲಿಸಿಸ್ ಯಂತ್ರ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದ್ದು, ಏಪ್ರಿಲ್‌ನಲ್ಲಿ ಆಸ್ಪತ್ರೆಗೆ ಯಂತ್ರ ಬರುವ ನಿರೀಕ್ಷೆ ಇದೆ

ಡಾ.ಅನಿಲಕುಮಾರ ತೋಟದ, ಆಡಳಿತ ವೈದ್ಯಾಧಿಕಾರಿ, ಗಜೇಂದ್ರಗಡ

ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಸಂಬಂಧಿಸಿದಂತೆ ಯಂತ್ರಗಳ ಸಮಸ್ಯೆ ಇಲ್ಲ. ಎಚ್‌ಐವಿ, ಎಚ್‌ಸಿವಿಯಂತಹ ಸೋಂಕು ಪೀಡಿತರ ಡಯಾಲಿಸಿಸ್‌ಗಾಗಿ ಪ್ರತ್ಯೇಕ ಯಂತ್ರದ ವ್ಯವಸ್ಥೆ ಇದೆ
ಡಾ.ಬಸವರಾಜ ಬೊಮ್ಮನಹಳ್ಳಿ, ನಿರ್ದೇಶಕರು ಜಿಮ್ಸ್‌

ಪ್ರಜಾವಾಣಿ ತಂಡ; ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಿಂಗರಾಜ ಹಮ್ಮಿಗಿ, ಪ್ರಕಾಶ್‌ ಗುದ್ನೆಪ್ಪನವರ, ಶ್ರೀಶೈಲ ಎಂ. ಕುಂಬಾರ, ಕಾಶಿನಾಥ ಬಿಳಿಮಗ್ಗದ, ಡಾ.ಬಸವರಾಜ ಹಲಕುರ್ಕಿ, ಚಂದ್ರು ಎಂ.ರಾಥೋಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT