ಶನಿವಾರ, ಸೆಪ್ಟೆಂಬರ್ 18, 2021
29 °C
ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖ, ಪ್ರೇಕ್ಷಣೀಯ ಸ್ಥಳಗಳತ್ತ ಮುಖಮಾಡಿದ ಪ್ರವಾಸಿಗರು

ಗದಗ: ಪ್ರವಾಸಿ ತಾಣಗಳಲ್ಲಿ ಜಾಗೃತಿ ಮರೆತ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಮಧ್ಯ ಕರ್ನಾಟಕದಲ್ಲಿರುವ ಗದಗ ಜಿಲ್ಲೆ ‘ಬರ’, ‘ಬಿಸಿಲಿನ ನಾಡು’ ಎಂಬ ಹಣೆಪಟ್ಟಿ ಕಳಚಿಕೊಂಡು ಈಗ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿದೆ. ಕಪ್ಪತಗುಡ್ಡ ಇಡೀ ಜಿಲ್ಲೆಗೆ ಮುಕುಟಮಣಿಯಂತಿದೆ. ಜಿಲ್ಲೆಯಲ್ಲಿ ಹತ್ತು ಹಲವಾರು ಪ್ರಸಿದ್ಧ ತಾಣಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಆದರೆ, ಗದಗ ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವಾಗಿ ಮೇಲೆತ್ತುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂಬ ಕೊರಗು ಜನರನ್ನು ಬಾಧಿಸುತ್ತಿದೆ.

ಗದುಗಿನ ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ಗುಡಿ, ಬಸವಣ್ಣ ಮೂರ್ತಿ, ಲಕ್ಕುಂಡಿಯ ದೇವಾಲಯಗಳ ಶಿಲ್ಪಕಲಾ ವೈಭವ ವಿಶ್ವಪ್ರಸಿದ್ಧಿ ಪಡೆದಿವೆ. ಆದರೆ, ಈ ಸ್ಥಳಗಳಿಗೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಪ್ರಯತ್ನಗಳು ಇಂದಿಗೂ ಆಗಿಲ್ಲ. ಇವು ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಓದಿಕೊಂಡು ಈ ಸ್ಥಳಗಳನ್ನು ನೋಡಬೇಕು ಕುತೂಹಲದಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ನಿರಾಸೆ ಕಾಡುತ್ತದೆ. ಅಲ್ಲಿನ ವಾಸ್ತವ ಸ್ಥಿತಿ ತುಂಬ ನಿಕೃಷ್ಟವಾಗಿದೆ. ಮತ್ತೆ ಯಾವ ಪ್ರವಾಸಿ ಸ್ಥಳಗಳಲ್ಲೂ ಕೋವಿಡ್‌–19 ಮಾರ್ಗಸೂಚಿಗಳ ಪಾಲನೆ ಆಗುತ್ತಿಲ್ಲ.

ಅರಣ್ಯ ಇಲಾಖೆ ಅಧೀನದಲ್ಲಿರುವ ಬಿಂಕದಕಟ್ಟಿ ಮೃಗಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನ ಅತ್ಯುತ್ತಮ ನಿರ್ವಹಣೆಯಿಂದ ಜನಮೆಚ್ಚುಗೆ ಪಡೆದಿದ್ದು, ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಾರಾಂತ್ಯ ಹಾಗೂ ರಜಾದಿನಗಳಂದು ಇಲ್ಲಿ ಪ್ರವಾಸಿಗರ ದಂಡೇ ಇರುತ್ತದೆ. ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಜಿಪ್‌ ಲೈನ್‌ ನಿರ್ಮಾಣವಾಗಿದ್ದು, ಸಾಹಸಕ್ರೀಡೆ ಇಷ್ಟಪಡುವವರಿಗೆ ರೋಮಾಂಚನಕಾರಿ ಅನುಭವ ನೀಡುತ್ತಿದೆ.

‘ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಕೋವಿಡ್‌–19 ಮಾರ್ಗಸೂಚಿಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಮಾಸ್ಕ್‌ ಧರಿಸುವುದು ಹಾಗೂ ಸ್ಯಾನಿಟೈಸರ್‌ ಬಳಕೆ ಮಾಡುವಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ’ ಎನ್ನುತ್ತಾರೆ ಆರ್‌ಎಫ್‌ಒ ಚೈತ್ರಾ ಮೆಣಸಿನಕಾಯಿ ಹಾಗೂ ಆರ್‌ಎಫ್‌ಒ ರಾಜು ಗೊಂದಕರ.

‘ಗದುಗಿನ ಹೊಸ ಆಕರ್ಷಣೆಯಾದ ಮೃಗಾಲಯ ಮತ್ತು ಉದ್ಯಾನಕ್ಕೆ ನಗರ ಸಾರಿಗೆ ಸೌಲಭ್ಯ ಒದಗಿಸಿದರೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಪ್ರವಾಸಿಗರು ಅಭಿಪ್ರಾಯಪಟ್ಟಿದ್ದಾರೆ.

ಶಿವಾಜಿ ಕೋಟೆಗೆ ಬೇಕಿದೆ ಕಾಯಕಲ್ಪ
ಶಿರಹಟ್ಟಿ: ತಾಲ್ಲೂಕಿನ ಶ್ರೀಮಂತಗಡದ ಬೃಹತ್‌ ಬೆಟ್ಟದ ಮೇಲಿರುವ ಇತಿಹಾಸ ಪ್ರಸಿದ್ಧ ಶಿವಾಜಿ ಕೋಟೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕೋಟೆಗೆ ಹೋಗಲು ಇತ್ತಿಚಿಗೆ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಸಮೀಪಕ್ಕೆ ಹೋದರೆ ವಿಶಾಲವಾದ ಪ್ರವೇಶ ದ್ವಾರ ಕಾಣಸಿಗುತ್ತದೆ. ಒಳಗಡೆ ರಾಜರ ಆಳ್ವಿಕೆಯ ಪಳೆಯುಳಿಕೆಗಳು ಇಂದಿಗೂ ಗಮನ ಸೆಳೆಯುತ್ತಿವೆ.

ದೇವಿಹಾಳ ಕ್ಷೇತ್ರ ಹೊಳಲಮ್ಮನ ಗುಡ್ಡ ಶಿವಾಜಿ ಮಹಾರಾಜನಿಗೆ ತನ್ನ ಸೀಮೆಯ ಗಡವೆಂದು ಪ್ರಸಿದ್ಧಿಯಾಗಿತ್ತು. ಬೆಟ್ಟದ ಮೇಲೆ ಅಂದಾಜು 25 ಎಕರೆ ಪ್ರದೇಶದಲ್ಲಿ ಕೋಟೆ ಹರಡಿಕೊಂಡಿದೆ. ಇದು ಕಪ್ಪೆಯಾಕಾರದಲ್ಲಿದ್ದು, ಇದಕ್ಕೆ ‘ಕಪ್ಪೆಗುಡ್ಡ’ ಎಂತಲೂ ಕರೆಯುತ್ತಾರೆ.

ಪ್ರತಿ ಹುಣ್ಣಿಮೆಯಂದು ಹೊಳಲಮ್ಮದೇವಿಯ ದರ್ಶನಕ್ಕಾಗಿ ಹಾಗೂ ಕೋಟೆ ಸೌಂದರ್ಯವನ್ನು ವೀಕ್ಷಣೆ ಮಾಡಲು ನೂರಾರು ಪ್ರವಾಸಿಗರು ಬರುತ್ತಾರೆ. ಆದರೆ ಕೋವಿಡ್‌-19 ನಿಯಮಗಳನ್ನು ಪಾಲಿಸುತ್ತಿಲ್ಲ. ಉತ್ತಮ ನಿರ್ವಹಣೆ ಇಲ್ಲದ ಕಾರಣ ಈಗ ಕೋಟೆಯ ಬಹುತೇಕ ಭಾಗ ಹಾಳಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತಿಹಾಸ ಪ್ರಸಿದ್ಧ ಸ್ಮಾರಕಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕಾಯಕಲ್ಪಕ್ಕೆ ಕಾದಿರುವ ಪ್ರವಾಸಿ ತಾಣಗಳು
ಮುಂಡರಗಿ:
ಜಿಲ್ಲೆಯಲ್ಲಿಯೆ ಮುಂಡರಗಿ ತಾಲ್ಲೂಕು ವಿವಿಧ ಪ್ರೇಕ್ಷಣೀಯ ತಾಣಗಳಿಗೆ ಹೆಸರುವಾಸಿಯಾಗಿದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಕಪ್ಪತಗುಡ್ಡವು ಈ ಭಾಗದ ಒಂದು ಪ್ರಮುಖ ಪ್ರವಾಸಿತಾಣವಾಗಿದ್ದು, ನಿಸರ್ಗಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಆದರೆ, ಪ್ರವಾಸಿ ತಾಣಕ್ಕೆ ಅಗತ್ಯವಿರುವ ಯಾವ ಮೂಲಸೌಲಭ್ಯಗಳು ಇಲ್ಲದಿರುವುದು ಪ್ರವಾಸಿಗರಲ್ಲಿ ತೀವ್ರ ಬೇಸರ ಮೂಡಿಸುತ್ತಿದೆ.

ಕಪ್ಪತಗುಡ್ಡದ ದಕ್ಷಿಣ ದಿಕ್ಕಿನ ಶಿಂಗಟಾಲೂರ ಗ್ರಾಮದಲ್ಲಿ ಜಿಲ್ಲೆಯ ಸುಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನವಿದ್ದು, ಅಲ್ಲಿ ಮಾತ್ರ ಸದಾ ಊಟ, ವಸತಿ, ಸಾರಿಗೆ ಸೇರಿದಂತೆ ಎಲ್ಲ ಸೌಲಭ್ಯಗಳು ಇವೆ. ವೀರಭದ್ರೇಶ್ವರ ದೇವಸ್ಥಾನದ ಮುಂದೆ ತುಂಗಭದ್ರಾ ನದಿ ಹರಿಯುತ್ತಿದ್ದು, ಹಿಂದೆ ಸದಾ ಹಸಿರಿನಿಂದ ಕಂಗೊಳಿಸುವ ಕಪ್ಪತಗುಡ್ಡವಿದೆ. ಪ್ರಕೃತಿ ಸೊಬಗಿನಿಂದ ಕಂಗೊಳಿಸುವ ಈರಣ್ಣನ ಗುಡ್ಡವು ಗದಗ ಪಟ್ಟಣದಿಂದ 60 ಕಿ.ಮೀ., ಮುಂಡರಗಿ ಪಟ್ಟಣದಿಂದ 20 ಕಿ.ಮೀ. ಹಾಗೂ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಎಲ್ಲ ಭಾಗಗಳಿಂದಲೂ ದೇವಸ್ಥಾನ ತಲುಪಲು ಸಾರಿಗೆ ವ್ಯವಸ್ಥೆ ಇದೆ.

ತಾಲ್ಲೂಕಿನ ಗುಮ್ಮಗೋಳ ಗ್ರಾಮದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಿದ್ದು ಎಂದು ಹೇಳಲಾಗುತ್ತಿರುವ ಸುಂದರ ಕೆತ್ತನೆಯ, ಅದ್ಭುತ ಶಿಲ್ಪ ಕಲಾವೈಭವದ ಗೋಣಿಬಸವೇಶ್ವರ ದೇವಸ್ಥಾನವಿದೆ. ಅದನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಪ್ರವಾಸಿಗರಿಗೆ ಹಾಗೂ ಇತಿಹಾಸಕ್ತರಿಗೆ ಅಪರಿಚಿತವಾಗಿಯೇ ಉಳಿದಿದೆ.

ಶಿಂಗಟಾಲೂರಿನಿಂದ ಉತ್ತರಕ್ಕೆ ಮುಂಡರಗಿ, ಶಿರಹಟ್ಟಿ ಹಾಗೂ ಗದಗ ತಾಲ್ಲೂಕುಗಳಲ್ಲಿ ಹಬ್ಬಿರುವ ವಿಶಾಲವಾದ ಕಪ್ಪತಗುಡ್ಡದ ವಿವಿಧ ಗಿರ ಕಂದಕಗಳಲ್ಲಿ ಹಲವಾರು ಕೆರೆ, ತೊರೆಗಳು, ಹಳ್ಳಗಳು ಹರಿಯುತ್ತಲಿವೆ. ವಾರಾಂತ್ಯಗಳಲ್ಲಿ ಬೇಸಿಗೆ ಹೊರತು ಪಡಿಸಿ ಇಲ್ಲಿಗೆ ಪ್ರವಾಸಿಗರು, ಚಾರಣಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಶಿಂಗಟಾಲೂರ ಗ್ರಾಮದ ಮುಂದಿರುವ ಗುಡ್ಡದಲ್ಲಿ ಸಂಜಿಹನುಮಪ್ಪ, (ಸಂಜೀವಿನಿ ಹನುಮಪ್ಪ), ಗಂಗಾಪೂರ ಗ್ರಾಮದ ಬಳಿಯ ಗುಡ್ಡದಲ್ಲಿ ಮಜ್ಜಿಗ್ಗೇರಿ (ಮಜ್ಜಿಗೆ ಕೆರೆ) ಬಸವಣ್ಣ, ಹಾರೋಗೇರಿ ಗ್ರಾಮದಲ್ಲಿ ಸತ್ಯಮ್ಮ, ಹಿರೇವಡ್ಡಟ್ಟಿ ಗ್ರಾಮದ ಬಳಿ ಕಪ್ಪತಮಲ್ಲಣ್ಣ ಹಾಗೂ ಭ್ರಮರಾಂಭಾ ದೇವಸ್ಥಾನಗಳಿವೆ. ಇಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳಿಲ್ಲ. ಹೀಗಾಗಿ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ.

ಮುಂಡರಗಿ ಪಟ್ಟಣದಲ್ಲಿ ಸುಮಾರು 400 ವರ್ಷಗಳಷ್ಟು ಹಳೆಯದಾದ ಮಂಡಗೈ ಭೀಮರಾಯರಿಗೆ ಸಂಬಂಧಿಸಿದ ಕಲ್ಲಿನ ಕೋಟೆ, ಬುರ್ಜುಗಳಿವೆ. ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿರುವ ಅವುಗಳನ್ನು ಸಂರಕ್ಷಿಸಬೇಕಿದೆ.

ಕೊರೊನಾ ನಿಯಮ ಮರೆತ ಪ್ರವಾಸಿಗರು
ಲಕ್ಷ್ಮೇಶ್ವರ:
ಕೊರೊನಾ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದ ಇಲ್ಲಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯ ಮತ್ತು ದೂದಪೀರಾಂ ದರ್ಗಾಗಳು ಕೊರೊನಾ ನಿಯಮಗಳ ಪ್ರಕಾರ ಪ್ರವಾಸಿಗರ ದರ್ಶನಕ್ಕೆ ಮತ್ತೆ ಬಾಗಿಲು ತೆರೆದಿವೆ. ಆದರೆ ಎಲ್ಲೂ ಕೊರೊನಾ ನಿಯಮಗಳು ಮಾತ್ರ ಪಾಲನೆ ಆಗುತ್ತಿಲ್ಲ.

ಸೂಫಿ ಸಂತ ದೂದಪೀರಾಂ ಮಹಾತ್ಮರ ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮಾವಾಸ್ಯೆಯಂದು ಭಕ್ತರು ಭೇಟಿ ನೀಡುವುದು ಸಾಮಾನ್ಯ. ಕರ್ನಾಟಕ ಮಾತ್ರ ಅಲ್ಲದೆ ಅಕ್ಕಪಕ್ಕದ ತಮಿಳುನಾಡು, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ಇಲ್ಲಿಗೆ ಸಾವಿರಾರು ಭಕ್ತರು ಬರುತ್ತಾರೆ. ಆದರೆ ಯಾರೊಬ್ಬರೂ ಕೊರೊನಾ ನಿಯಮಗಳನ್ನು ಪಾಲಿಸುವುದು ಕಾಣಿಸುವುದಿಲ್ಲ.

ಕೇವಲ ಕೈಬೆರಳೆಣಿಕೆಯಷ್ಟು ಭಕ್ತರು ಮಾಸ್ಕ್ ಧರಿಸಿರುತ್ತಾರೆ. ಆದರೆ ಶೇ 99ರಷ್ಟು ಭಕ್ತರು ನಿಯಮಗಳನ್ನು ಮರೆತಿದ್ದಾರೆ.

ಎರಡನೇ ಅಲೆಗೆ ಸೀಮಿತವಾದ ಪ್ರವಾಸಿಗರು
ಡಂಬಳ:
ಲಾಕಡೌನ್ ತೆರವಾಗುತ್ತಿದ್ದಂತೆ ಸಾರ್ವಜನಿಕರು ಪ್ರವಾಸಿತಾಣಗಳತ್ತ ಮುಖಮಾಡಿದ್ದಾರೆ. ಆದರೆ ಪ್ರವಾಸಿಗರು ಕೋವಿಡ್‌–19 ಮಾರ್ಗಸೂಚಿಗಳ ಪಾಲನೆ ಮಾಡುತ್ತಿಲ್ಲ.

ಡಂಬಳದಲ್ಲಿ ದೊಡ್ಡಬಸವೇಶ್ವರ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಜಪದ ಬಾವಿ, ತೋಂಟದಾರ್ಯಮಠ, ವಿಕ್ಟೋರಿಯಾ ಮಹಾರಾಣಿ ಕೆರೆ ಸೇರಿದಂತೆ ವಿವಿಧ ಗ್ರಾಮದಲ್ಲಿ ಪ್ರಾಚೀನ ದೇವಸ್ಥಾನಗಳಿವೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ನಿರೀಕ್ಷಣಾ ಮಂದಿರ ಆಸರೆಯಾಗಲಿದ್ದು ಉಳಿದಂತೆ ಪ್ರವಾಸಿಗರು ಉಳಿದುಕೊಳ್ಳಲು ಸರ್ಕಾರಿ ಕಟ್ಟಡಗಳು ಇಲ್ಲ.

ಪ್ರವಾಸಿಗರ ಹಿತದೃಷ್ಟಿಯಿಂದ ಸರ್ಕಾರ ಯಾತ್ರಾ ನಿವಾಸ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಬಡಿಗೇರ ಹಾಗೂ ಖಾಜಾಹುಸೇನ ಹೊಸಪೇಟಿ ಒತ್ತಾಯಿಸಿದ್ದಾರೆ.

ಪ್ರವಾಸೋದ್ಯಮ ತಾಣವಾಗದ ಐತಿಹಾಸಿಕ ಸ್ಥಳಗಳು
ಗಜೇಂದ್ರಗಡ:
ನಿರ್ವಹಣೆ ಕೊರತೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡದ ಹಿನ್ನೆಲೆಯಲ್ಲಿ ಗಜೇಂದ್ರಗಡ ತಾಲ್ಲೂಕಿನಲ್ಲಿರುವ ಹಲವು ಐತಿಹಾಸಿಕ ತಾಣಗಳ ವೈಭವ ಹೊರ ಜಗತ್ತಿಗೆ ಪರಿಚಯವಾಗಿಲ್ಲ.

ಪ್ರಕೃತಿ ಸೌಂದರ್ಯ ಒಳಗೊಂಡಿರುವ ಗಜೇಂದ್ರಗಡ ಗುಡ್ಡದ ಮೇಲಿರುವ ಕೋಟೆ, ಮದ್ದಿನ ಕೋಣೆ, ಪುಷ್ಕರಣಿಗಳು, ಕೆತ್ತನೆ ಕುಸುರಿ ಹೊಂದಿರುವ ಕೋಟೆಯ ಹೆಬ್ಬಾಗಿಲು ಸೇರಿದಂತೆ ಅನೇಕ ಸ್ಮಾರಕಗಳು ನಿರ್ಲಕ್ಷ್ಯ ಹಾಗೂ ಕಲ್ಲು ಗಣಿಗಾರಿಕೆಯಿಂದ ಅವಸಾನದ ಅಂಚಿಗೆ ತಲುಪುತ್ತಿವೆ.

ಸಮೀಪದ ಸೂಡಿ ಹಾಗೂ ರಾಜೂರ ಗ್ರಾಮಗಳಲ್ಲಿ ಚಾಲುಕ್ಯರ ಕಾಲದಲ್ಲಿ ಸುಂದರ ಕೆತ್ತನೆ ಕುಸುರಿ ಹೊಂದಿರುವ ದೇವಸ್ಥಾನ, ಪುಷ್ಕರಣಿ ಸೇರಿದಂತೆ ಅನೇಕ ಸ್ಮಾರಕಗಳು ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.

ಸೂಡಿ ಗ್ರಾಮದಲ್ಲಿ ಒಂದು ಕಾಲದಲ್ಲಿ ವಾಸ್ತುಶಿಲ್ಪ, ಶಿಲ್ಪಕಲೆಗಳ ಶ್ರೀಮಂತಿಕೆಯಿಂದ ವೈಭವದ ಕೊಳವಾಗಿದ್ದ ವಿಶಿಷ್ಟವಾದ ನಾಗರಬಾವಿ, ಜೋಡು ಕಳಸದ ಗುಡಿ ಸೇರಿದಂತೆ ಅನೇಕ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಹೊರ ಜಗತ್ತಿಗೆ ಪರಿಚಿತವಾಗಿಲ್ಲ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ, ಲಕ್ಷ್ಮಣ ಎಚ್. ದೊಡ್ಡಮನಿ, ಶ್ರೀಶೈಲ ಎಂ.ಕುಂಬಾರ, ಖಲೀಲ ಅಹ್ಮದ ಶೇಖ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.