ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ | ಫುಟ್‌ಪಾತ್‌ ಅತಿಕ್ರಮಣ: ಪಾದಚಾರಿಗಳಿಗೆ ತೊಂದರೆ

Published 1 ಜನವರಿ 2024, 7:01 IST
Last Updated 1 ಜನವರಿ 2024, 7:01 IST
ಅಕ್ಷರ ಗಾತ್ರ

ನರಗುಂದ: ಬಂಡಾಯದ ನಾಡು ನರಗುಂದ ಪಟ್ಟಣ ದಿನೇದಿನೇ ಬೆಳೆಯುತ್ತಿದೆ. ಆದರೆ, ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಮೂಲಸೌಲಭ್ಯಗಳು ವಿಸ್ತರಣೆ ಆಗಿಲ್ಲದಿರುವ ಕಾರಣ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ಫುಟ್‌ಪಾತ್‌ ಅತಿಕ್ರಮಣ, ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.    

ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಹೊಂದಿಕೊಂಡಿರುವ ನರಗುಂದ ಪಟ್ಟಣದಲ್ಲಿ ದಿನದ 24 ಗಂಟೆಯೂ ವಾಹನ ದಟ್ಟಣೆ ಇರುತ್ತದೆ. ಆದರೆ, ಇಲ್ಲಿ ಸುಗಮ ಸಂಚಾರ ಎಂಬುದು ಕಣ್ಮರೆಯಾಗಿದ್ದು, ಸಂಚಾರ ಅಂದರೆ ಸಂಚಕಾರ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸವದತ್ತಿ ರಸ್ತೆಯಲ್ಲಿ ವಾಹನ ದಟ್ಟಣೆ: ಅರಭಾವಿ– ಚಳ್ಳಕೇರಿ ರಾಜ್ಯ ಹೆದ್ದಾರಿ ಪಟ್ಟಣದ ಮೂಲಕ ಹಾಯ್ದು ಹೋಗಿದೆ. ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪ್ರತಿ ಮಂಗಳವಾರ, ಶುಕ್ರವಾರ ಇದೇ ಹೆದ್ದಾರಿ ಮೂಲಕ ಸಹಸ್ರಾರು ವಾಹನಗಳು ಚಲಿಸುತ್ತವೆ. ಅದರಲ್ಲೂ ಹುಣ್ಣಿಮೆ ಸಂದರ್ಭದಲ್ಲಂತೂ ಸವದತ್ತಿ ರಸ್ತೆಯಲ್ಲಿ ಪ್ರಯಾಣಿಕರು ಜೀವ ಭಯದಿಂದಲೇ ಸಂಚರಿಸಬೇಕಿದೆ.

ಮುಂದೆ ಬರುವ ಬನದ ಹುಣ್ಣಿಮೆ ಹಾಗೂ ಭಾರತ ಹುಣ್ಣಿಮೆ ಸಂದರ್ಭದಲ್ಲಂತೂ ಎರಡು ತಿಂಗಳ ಕಾಲ ವಾಹನ ದಟ್ಟಣೆ ಹೆಚ್ಚಿ ಪಟ್ಟಣದ ನಾಗರಿಕರು, ವಿದ್ಯಾರ್ಥಿಗಳು ಮನೆಗೆ ತೆರಳಲು ತೀವ್ರ ಹರಸಾಹಸ ಪಡಬೇಕಿದೆ. ಪಾದಚಾರಿ ಮಾರ್ಗಗಳು ಅತಿಕ್ರಮಣವಾಗಿರುವ ಕಾರಣ ಪಾದಚಾರಿಗಳು ರಸ್ತೆಯಲ್ಲೇ ನಡೆದು ಹೋಗಬೇಕಿದೆ. ಆದರೆ, ಈ ರಸ್ತೆಯಲ್ಲಿ ವಾಹನ ದಟ್ಟಣೆ ಕೂಡ ಅಧಿಕವಾಗಿರುವುದರಿಂದ ಜನರು ಇಲ್ಲಿ ಓಡಾಡಲು ಹಿಂದೆ ಮುಂದೆ ನೋಡುವಂತಾಗಿದೆ.

ರಸ್ತೆಯ ಎರಡು ಬದಿಯಲ್ಲಿ ಬೈಕ್‌ಗಳು, ಗೂಡ್ಸ್‌ ವಾಹನಗಳನ್ನು ಎರ‍್ರಾಬಿರ‍್ರಿಯಾಗಿ ನಿಲ್ಲಿಸುವುದು ಸಾಮಾನ್ಯ ಎನಿಸಿದೆ. ವಿವಿಧ ಅಂಗಡಿಗಳು ಫುಟ್‌ಪಾತ್‌ ಸ್ಥಳವನ್ನೇ ಆಕ್ರಮಿಸಿಕೊಂಡಿವೆ. ನೂತನವಾಗಿ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ. ಆದರೆ, ಪಾರ್ಕಿಂಗ್ ಮಾಡಲು ಸೂಕ್ತ ವ್ಯವಸ್ಥೆ ಆಗಬೇಕಿದೆ. ಈ ಅವ್ಯವಸ್ಥೆಯಿಂದ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ಈಗಾಗಲೇ ಹಲವು ಅಪಘಾತಗಳು ನಡೆದಿದ್ದು, ಸಂಚಾರ ಸುಗಮವಾಗಿಸಲು ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರಿಕರು ಒತ್ತಾಯಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಆಹ್ವಾನ: ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿನ ಕಲಕೇರಿ ಮಾರ್ಗದ ಹಿರೇಹಳ್ಳದಿಂದ ವಿಜಯಪುರ ರಸ್ತೆಯಲ್ಲಿನ ಕೊಣ್ಣೂರ ಮಾರ್ಗದ ವೀರನಗೌಡ್ರ ಪೆಟ್ರೋಲ್ ಪಂಪ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಪಟ್ಠಣದ ಮಧ್ಯಭಾಗ ಬಸ್ ನಿಲ್ದಾಣ, ಶಿವಾಜಿ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿದೆ.

ಸುಮಾರು 5 ಕಿ.ಮೀ.ವರೆಗೆ ಹೆದ್ದಾರಿ ಮಧ್ಯೆ ರಸ್ತೆವಿಭಜಕ ಇದೆ. ಹೆದ್ದಾರಿ ಎರಡು ಬದಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಫುಟ್‌ಪಾತ್‌ಗಳು ನಿರ್ಮಾಣಗೊಂಡಿಲ್ಲ. ಅರ್ಧಂಬರ್ಧ ನಿರ್ಮಾಣಗೊಂಡ ಫುಟ್‌ಪಾತ್‌ಗಳ ಅತಿಕ್ರಮಣದ ಪರಿಣಾಮ ಇದ್ದು ಇಲ್ಲದಂತಾಗಿ ಪಾದಚಾರಿಗಳು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ.

ಪೊಲೀಸ್‌ ಠಾಣೆ, ಬಸ್ ನಿಲ್ದಾಣ, ಸರ್ಕಾರಿ ತಾಲ್ಲೂಕು ಆಸ್ಪತ್ರೆ, ಶಾಸಕರ ಮಾದರಿ ಪ್ರಾಥಮಿಕ ಶಾಲೆ ನಂ.1, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಅಂಚೆ ಕಚೇರಿ, ಕೃಷಿ ಇಲಾಖೆ ಕಚೇರಿ, ಮಿನಿ ವಿಧಾನಸೌಧ, ಡಿಪ್ಲೊಮಾ ಕಾಲೇಜು ಸೇರಿದಂತೆ ಮುಖ್ಯ ಕಚೇರಿ ಸ್ಥಳಗಳು ಈ ಹೆದ್ದಾರಿಗೆ ಹೊಂದಿಕೊಂಡೇ ಇವೆ. ಆದ್ದರಿಂದ ನಿತ್ಯ ಈ ಹೆದ್ದಾರಿ ವಾಹನ, ಜನದಟ್ಟಣೆಯಿಂದ ಕೂಡಿರುತ್ತದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ವಾಣಿಜ್ಯ ಮಳಿಗೆಗಳು ಹೆದ್ದಾರಿ ಒಂದು ಬದಿಯಲ್ಲಿ ನಿರ್ಮಾಣಗೊಂಡಿವೆ. ಅವು ಫುಟ್‌ಪಾತ್‌ ಆಕ್ರಮಿಸಿವೆ. ಮತ್ತೊಂದು ಬದಿಯಲ್ಲಿಯೂ ವಿವಿಧ ಅಂಗಡಿಗಳಿದ್ದು ಅವು ಅತಿಕ್ರಮಣ ಮಾಡಿಕೊಂಡಿವೆ. ಇದರಿಂದ ಸಂಚಾರ ದುಸ್ತರವಾಗಿದೆ.

ಕೆಲವೊಮ್ಮೆ ಜನರನ್ನು ತಪ್ಪಿಸಲು ಹೋಗಿ ಹೆಚ್ಚಿನ ವಾಹನಗಳು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿವೆ. ಆದ್ದರಿಂದ ಇದೇ ಮಾರ್ಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಸಾವನ್ನಪ್ಪಿದ್ದಾರೆ. ಬಸ್ ನಿಲ್ದಾಣದ ಹತ್ತಿರದ ಫುಟ್‌ಪಾತ್‌ ಅನ್ನು ಅಂಗಡಿಕಾರರು ಅತಿಕ್ರಮಣ ಮಾಡಿದ್ದಲ್ಲದೇ ರಸ್ತೆಗೆ‌ ಕಸವನ್ನು ಚೆಲ್ಲಿ ಗಲೀಜು ಮಾಡುತ್ತಿದ್ದಾರೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿಯಾದರೂ ಅತಿಕ್ರಮಣ ತೆರವುಗೊಳಿಸಿ. ಪಾದಚಾರಿಗಳ ಸಂಚಾರಕ್ಕೆ ಸುಗಮ ಮಾರ್ಗ ರೂಪಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ‌.

ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಇಲ್ಲ ಕಡಿವಾಣ: ಪಟ್ಟಣ ಹೆಚ್ಚಿನ ರೀತಿಯಲ್ಲಿ ಬೆಳೆದ ಪರಿಣಾಮ ಜನರ ಸಂಚಾರ ಹೆಚ್ಚಾಗಿದೆ. ಪಟ್ಟಣದ ಮುಖ್ಯರಸ್ತೆಗಳಾದ ಪುರಸಭೆ ರಸ್ತೆ, ಮಾರುಕಟ್ಟೆ ರಸ್ತೆ, ತರಕಾರಿ ಮಾರುಕಟ್ಟೆ ಪ್ರದೇಶ, ಜವಳಿ ಬಜಾರ್ ಸೇರಿದಂತೆ ಮುಖ್ಯಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬೈಕ್, ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಬುಧವಾರ ಸಂತೆ ದಿನವಾಗಿದ್ದರಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವ ಪರಿಣಾಮ ಸಂತೆ ಮಾಡಲು ಮಹಿಳೆಯರು, ವೃದ್ಧರು ತೀವ್ರ ತೊಂದರೆಗೆ ಒಳಗಾಗಬೇಕಿದೆ. ಇದನ್ನು ನೋಡಿದಾಗ ಪಟ್ಟಣದೆಲ್ಲೆಡೆ ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಕಡಿವಾಣ ಇಲ್ಲವಾಗಿದೆ. ಇದರಿಂದ ಅಪಘಾತ ಸೇರಿದಂತೆ ವಿವಿಧ ತೊಂದರೆಗಳಿಗೆ ಸಿಲುಕುವಂತಾಗಿದೆ. ಆದ್ದರಿಂದ, ವಾಹನ ಪಾರ್ಕಿಂಗ್‌ಗೆ ಪುರಸಭೆ, ಪೊಲೀಸ್ ಇಲಾಖೆ ಜಂಟಿಯಾಗಿ ಸರಿಯಾದ ವ್ಯವಸ್ಥೆ ರೂಪಿಸಬೇಕಿದೆ. ಇಲ್ಲವಾದರೆ ಸಂಚಕಾರ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

ನರಗುಂದ ಪಟ್ಟಣದಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ಬೈಕ್‌ಗಳು
ನರಗುಂದ ಪಟ್ಟಣದಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ಬೈಕ್‌ಗಳು
ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿರುವ ವಾಹನಗಳು
ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿರುವ ವಾಹನಗಳು
ಸವದತ್ತಿ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್‌ಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿದರೆ ಪ್ರಕರಣ ದಾಖಲಿಸಲಾಗುವುದು
ಮಂಜುನಾಥ್ ನಡುವಿನಮನಿ ಸಿಪಿಐ ನರಗುಂದ
ನರಗುಂದ ಪಟ್ಠಣ ವೇಗವಾಗಿ ಬೆಳೆಯುತ್ತಿದ್ದು ಸಂಚಾರ ವ್ಯವಸ್ಥೆ ಸುಗಮವಾಗಿ ನಡೆಯಬೇಕು. ಫುಟ್‌ಪಾತ್‌ ತೆರವುಗೊಳಿಸಬೇಕು
ಬಸವರಾಜ ತಾವರೆ ನರಗುಂದ
ಪ್ರಯಾಣಿಕರಿಗೆ ನಾಗರಿಕರಿಗೆ ತೊಂದರೆಯಾಗದಂತೆ ಸುರಕ್ಷಿತ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್‌ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಸಹಕಾರದೊಂದಿಗೆ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲಾಗುವುದು
ಅಮಿತ ತಾರದಾಳೆ ಮುಖ್ಯಾಧಿಕಾರಿ ಪುರಸಭೆ ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT