ನರೇಗಲ್: ಜಿಲ್ಲೆಯ ಅತಿ ದೊಡ್ಡ ಹೋಬಳಿಯಾದ ನರೇಗಲ್ ಪಟ್ಟಣದಲ್ಲಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಇದ್ದೂ, ಇಲ್ಲದಂತಾಗಿದೆ. ಆರು ದಶಕಗಳಿಂದ ಇಲ್ಲಿಯವರೆಗೆ ಯಾವುದೇ ವ್ಯಾಪಾರ, ವಹಿವಾಟು ನಡೆಸಿಲ್ಲ. ಯಾವುದೇ ತರಹದ ಚಟುವಟಿಕೆಗಳನ್ನು ಆರಂಭಿಸಿಲ್ಲ ಎನ್ನುವುದು ಈ ಭಾಗದ ರೈತರಿಗೆ ನೋವಿನ ಸಂಗತಿಯಾಗಿದೆ.
ಮಳಿಗೆಗಳ ನಿರ್ಮಾಣ, ಮೂಲಸೌಕರ್ಯಗಳ ಪೂರೈಕೆ ಹಾಗೂ ಸಿಬ್ಬಂದಿ ನಿಯೋಜನೆ ಕಾರ್ಯಗಳು ಕುಂಠಿತಗೊಂಡಿರುವ ಕಾರಣ ಇಲ್ಲಿನ ಎಪಿಎಂಸಿ ಬಯಲು ಶೌಚದ ಆವರಣವಾಗಿ ಪರಿವರ್ತನೆಗೊಂಡಿದೆ. ಹೊಲದಲ್ಲಿ ಬೆಳೆಯುವ ಪ್ರತಿ ಉತ್ಪನವನ್ನು ಮಾರಾಟ ಮಾಡಲು ದೂರದ ಕೊಪ್ಪಳ, ಗದಗ, ಗಜೇಂದ್ರಗಡ ಹಾಗೂ ಇತರೆ ಪಟ್ಟಣಗಳಿಗೆ ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದ ರೈತರಿಗೆ, ಕೃಷಿಕರಿಗೆ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ತೊಂದರೆ ಆಗುತ್ತಿದೆ.
ನರೇಗಲ್ ಪಟ್ಟಣದಿಂದ ಜಕ್ಕಲಿ ಕಡೆಗೆ ಹೋಗುವ ಮಾರ್ಗದ ರಸ್ತೆ ಬದಿಯಲ್ಲಿರುವ ನರೇಗಲ್ ಉಪ ಕೃಷಿ ಉತ್ಪನ ಮಾರುಕಟ್ಟೆಯು ಹೊಳೆಆಲೂರು ಕೃಷಿ ಉತ್ಪನ್ನ ಮುಖ್ಯ ಮಾರುಕಟ್ಟೆಯ ಉಪ ಮಾರುಕಟ್ಟೆಯಾಗಿದೆ. ಇದರ ಮುಖ್ಯ ಕಚೇರಿ ಹೊಳೆಆಲೂರಿನಲ್ಲಿದೆ. ಸದ್ಯ ಇಲ್ಲಿನ ಎಪಿಎಂಸಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅದರಲ್ಲೊಂದು ಕಚೇರಿ ಇದ್ದರೂ ಯಾವಾಗಲೂ ಬಾಗಿಲು ಮುಚ್ಚಿರುತ್ತದೆ. ಚುನಾವಣೆಗಳು ನಡೆಯುವ ಸಂದರ್ಭಗಳಲ್ಲಿ ಮಾತ್ರ ತೆರೆದಿರುತ್ತದೆ.
ಎಪಿಎಂಸಿಯಲ್ಲಿ ಮುಳ್ಳಿನ ಕಂಟಿಗಳು ಅಪಾರ ಪ್ರಮಾಣದಲ್ಲಿ ಬೆಳೆದು ನಿಂತಿವೆ. ಅದೇ ಮುಳ್ಳಿನ ಕಂಟಿಗಳು ಮರೆಯಲ್ಲಿ ಜನರು ಶೌಚಕ್ಕೆ ಹೋಗುತ್ತಿದ್ದಾರೆ. ಇದರಿಂದ ದುರ್ನಾತ, ಸೊಳ್ಳೆ ಉತ್ಪತ್ತಿ ಜಾಸ್ತಿಯಾಗಿದೆ. ರೈತರಿಗೆ, ವ್ಯಾಪಾರಿಗಳಿಗೆ, ಗ್ರಾಹಕರಿಗೆ ತೊಂದರೆ ಎದುರಾಗುತ್ತಿದೆ.
ಎಪಿಎಂಸಿ ನಿಗಮ ಹಾಗೂ ಕೇಂದ್ರ ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಂಡು ತಡೆಗೋಡೆ, ಸಿಸಿ ರಸ್ತೆ, ಮುಚ್ಚು ಹರಾಜು ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಆದರೆ, ವ್ಯಾಪಾರ ಮಳಿಗೆಯನ್ನು ನಿರ್ಮಿಸಿಕೊಂಡು ವಹಿವಾಟು ನಡೆಸದೇ ಇರುವ ಕಾರಣ ಹರಾಜು ಮಾರುಕಟ್ಟೆಯ ತಗಡಿನ ಶೀಟ್‌ಗಳು ಹಾರಿವೆ. ಶೌಚಾಲಯಗಳು ದುಃಸ್ಥಿತಿಗೆ ತಲುಪಿವೆ. ಮಾರುಕಟ್ಟೆ ಜಾಗ ಮಳೆಗಾಲದಲ್ಲಿ ರೈತರು ಬೆಳೆಗಳನ್ನು ರಾಶಿ ಮಾಡಲು, ಕಾಳುಗಳನ್ನು ರಕ್ಷಣೆ ಮಾಡಲು ಬಳಕೆ ಮಾಡಿಕೊಳ್ಳುತ್ತಾರೆ. ಇತರೆ ಸಂದರ್ಭದಲ್ಲಿ ಎಪಿಎಂಸಿ ಸ್ಥಳವು ಜೂಜು, ಇಸ್ಪೀಟು ಆಟವಾಡುವವರ ಅಕ್ರಮ ಚಟುವಟಿಕೆಯ ತಾಣವಾಗಿ ಪರಿವರ್ತನೆಗೊಂಡಿದೆ.
ಮಳಿಗೆಗಳನ್ನು ನಿರ್ಮಾಣ ಮಾಡಿಕೊಳ್ಳಲು, ಕೃಷಿ ಉತ್ಪನಗಳನ್ನು ಖರೀದಿ ಮಾಡಲು ಸದ್ಯ ಯಾವುದೇ ಮೂಲಸೌಲಭ್ಯಗಳು ಹಾಗೂ ಭದ್ರತೆ ಇಲ್ಲದಿರುವುದರಿಂದ ಕಟ್ಟಡಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಅಥವಾ ವಹಿವಾಟು ನಡೆಸುವುದಕ್ಕೆ ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕಾಗಿ ನಿವೇಶನಗಳು ಹಂಚಿಕೆ ಮಾಡಿದರೂ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ.
‘ಇತ್ತೀಚೆಗಷ್ಟೇ ಎರಡು ಮಳಿಗೆಗಳ ಕಟ್ಟಡ ನಿರ್ಮಾಣ ನಡೆದಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಅಲ್ಲಲ್ಲಿ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಅಲ್ಲದೆ, ಎಪಿಎಂಸಿಗೆ ಪ್ರತಿ ವರ್ಷ ನೀಡಬೇಕಾದ ಹಣವನ್ನು ಕಟ್ಟುತ್ತಿದ್ದೇವೆ’ ಎನ್ನುತ್ತಾರೆ ಜಾಗ ಖರೀದಿಸಿದ ವ್ಯಾಪಾರಸ್ಥರು.
ಆದರೆ, ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವುದಕ್ಕಾಗಿ ಸೂಕ್ತವಾದ ಮಾರುಕಟ್ಟೆ ಇಲ್ಲವಾಗಿದೆ. ಅದಕ್ಕಾಗಿ ಅಧಿಕಾರಿಗಳು ರೈತರ ಸಮಸ್ಯೆಯನ್ನು ಅರ್ಥೈಸಿಕೊಳ್ಳಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹವಾಗಿದೆ.
ವಿಶಾಲವಾದ ಕೃಷಿ ಭೂಮಿ ಹೊಂದಿರುವ ನರೇಗಲ್ ಹೋಬಳಿಯ ವ್ಯಾಪ್ತಿಗೆ ನರೇಗಲ್, ಮಾರನಬಸರಿ, ಕಳಕಾಪುರ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ, ಹೊಸಳ್ಳಿ, ಜಕ್ಕಲಿ, ತೋಟಗಂಟಿ, ಬೂದಿಹಾಳ, ಕೋಚಲಾಪುರ, ದ್ಯಾಂಪುರ, ಯರೇಬೇಲೇರಿ, ಕುರುಡಗಿ, ಅಬ್ಬಿಗೇರಿ ಗ್ರಾಮಗಳು ಅವಲಂಬನೆಯಾಗಿವೆ.
ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ ತೊಂಡಿಹಾಳ, ಬಂಡಿಹಾಳ, ಹಂಚಿನಾಳ, ಮುಧೋಳ, ಕರಮುಡಿ ಭಾಗದ ರೈತರು ಸಹ ವ್ಯಾಪಾರ, ವಹಿವಾಟಿಗಾಗಿ ನರೇಗಲ್ ಪಟ್ಟಣದ ಮೇಲೆ ಅವಲಂಬಿತರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಗಡಿ ಹೊಂದಿರುವ ಕಾರಣ ಗಡಿ ಜಮೀನುಗಳ ರೈತರಿಗೂ ಇಲ್ಲಿನ ಎಪಿಎಂಸಿ ಅನುಕೂಲವಾಗಲಿದೆ. ಆದರೆ, ಎಪಿಎಂಸಿ ಇದೆ ಎನ್ನುವ ಮಾಹಿತಿಯೇ ರೈತ ಸಮುದಾಯಕ್ಕೆ ಇಲ್ಲವಾಗಿದೆ ಎಂಬುದೇ ಈ ಭಾಗದ ಜನರ ಕೊರಗಾಗಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದಾಸ್ತಾನು ರಕ್ಷಣೆಗೆ ಗೋದಾಮು
ನಿರ್ಮಿಸಲು ಆಗ್ರಹ ಅಪಾರ ಪ್ರಮಾಣದ ಕೃಷಿ ಭೂಮಿಯನ್ನು ಹೊಂದಿರುವ ನರೇಗಲ್ ಪಟ್ಟಣದಲ್ಲಿ ಹಾಗೂ ಇಲ್ಲಿನ ಎಪಿಎಂಸಿಯಲ್ಲಿ ಕಾಳು ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಒಂದೂ ಗೋದಾಮುಗಳಿಲ್ಲ. ಬೆಲೆ ಕುಸಿತ ಕಂಡಾಗ ಈರುಳ್ಳಿ ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳನ್ನು ಕಾಪಾಡಿಕೊಳ್ಳಲು ಉಗ್ರಾಣಗಳಿಲ್ಲ. ಇದರಿಂದ ರೈತರು ಎಲ್ಲೆಂದರಲ್ಲಿ ಸಿಕ್ಕಸಿಕ್ಕ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೃಷಿ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಸ್ಥಾಪಿಸಬೇಕಾದರೆ ಎಪಿಎಂಸಿ ಇಲಾಖೆ ವತಿಯಿಂದ ಮೊದಲು ಗೋದಾಮುಗಳನ್ನು ನಿರ್ಮಿಸಿ ಕಾಳುಗಳನ್ನು ಸಂಗ್ರಹ ಮಾಡುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಜಾಗ ಖರೀದಿಸಿದ ವ್ಯಾಪಾರಸ್ಥರ ಆಗ್ರಹವಾಗಿದೆ. ನರೇಗಲ್ ಭಾಗದ ರೈತರ ಬಗ್ಗೆ ಕಾಳಜಿ ವಹಿಸಿ ಗೋದಾಮುಗಳನ್ನು ನಿರ್ಮಾಣ ಮಾಡಲು ಸರ್ಕಾರದ ಪರವಾಗಿ ಜನಪ್ರತಿನಿಧಿಗಳು ಮುಂದಾಗಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.
ಗದಗ-ಗಜೇಂದ್ರಗಡ ಎಪಿಎಂಸಿ ಅವಲಂಬನೆ
ಇಲ್ಲಿನ ಕೃಷಿ ಉತ್ಪನ ಉಪ ಮಾರುಕಟ್ಟೆಯನ್ನು ಅಭಿವೃದ್ದಿ ಮಾಡದ ಕಾರಣ ನರೇಗಲ್ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನೇಕ ಹಮಾಲರು ಕಾರ್ಮಿಕರು ಗದಗ ಹಾಗೂ ಗಜೇಂದ್ರಗಡ ನಗರದ ಕೃಷಿ ಮಾರುಕಟ್ಟೆಗೆ ದಿನವೂ ಹೋಗುತ್ತಾರೆ. ಬೆಳಿಗ್ಗೆ ಹೋಗಿ ರಾತ್ರಿವರೆಗೆ ಹಮಾಲಿ ಕೆಲಸ ಮಾಡಿ ಬರುತ್ತಾರೆ. ಕೆಲವೊಮ್ಮೆ ರಾತ್ರಿ ಬರುವಾಗ ಬಸ್ ಸಿಗದೆ ಅಲ್ಲಿಯೇ ಉಳಿಯುತ್ತಾರೆ. ಎಪಿಎಂಸಿ ಮಾರುಕಟ್ಟೆ ಸ್ವಂತ ಊರಲ್ಲಿದ್ದರೂ ಬೇರೆ ಊರಿಗೆ ಹೋಗಿ ದುಡಿಯುವ ಹಮಾಲರ ಸಮೂಹಕ್ಕೆ ಬದುಕು ಕಟ್ಟಿಕೊಳ್ಳಲು ಇಲ್ಲಿ ವ್ಯಾಪಾರ ವಹಿವಾಟು ಆದಷ್ಟು ಬೇಗ ಆರಂಭವಾಗಬೇಕಿದೆ.
ಜನರು ಏನಂತಾರೆ?
ರೈತ ಸಂಘಗಳ ಒಕ್ಕೂಟದಿಂದ ಹೋರಾಟದ ಎಚ್ಚರಿಕೆ 60 ವರ್ಷಗಳ ಹಿಂದೆಯೇ ಎಪಿಎಂಸಿ ಉಪ ಮಾರುಕಟ್ಟೆ ಪಟ್ಟಣದಲ್ಲಿ ಆರಂಭವಾಗಿದೆ. ಆದರೆ ಅಭಿವೃದ್ಧಿಯಾಗದೆ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಎಪಿಎಂಸಿ ಅಧಿಕಾರಿಗಳು ಇಲ್ಲಿನ ಉಪ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಅಂಗಡಿಗಳನ್ನು ನಿರ್ಮಿಸಿ ಮಾರುಕಟ್ಟೆಯನ್ನು ಆರಂಭಿಸದೇ ಇದ್ದರೆ ರೈತ ಸಂಘಗಳ ಒಕ್ಕೂಟದಿಂದ ಉಗ್ರ ಹೋರಾಟ ಆರಂಭಿಸಲಾಗುವುದು
-ಶರಣಪ್ಪ ಧರ್ಮಾಯತ ರೈತ ಸೇನಾ ಸಮಿತಿ ಅಧ್ಯಕ್ಷ
ಬೆಳೆ ಮಾರಾಟಕ್ಕೆ ರೈತರ ಅಲೆದಾಟ ಅಧಿಕಾರಿಗಳ ಅಸಡ್ಡೆ ಭಾವನೆಯಿಂದ ಇಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವುದಕ್ಕಾಗಿ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ. ಇನ್ನಾದರೂ ಅಭಿವೃದ್ದಿಗೆ ಮುಂದಾದರೆ ನರೇಗಲ್ ಉಪ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಖರೀದಿ ಮಾಡಲು ಪ್ರಾರಂಭಿಸಿದರೆ ರೈತರ ಅಲೆದಾಟ ತಪ್ಪಿಸಬಹುದು
- ಲಕ್ಷ್ಮಣ ಕುಷ್ಟಗಿ ರೈತ
ವ್ಯಾಪಾರ ವಹಿವಾಟಿಗೆ ಪುನಶ್ಚೇತನ ನರೇಗಲ್ ಪಟ್ಟಣದಲ್ಲಿ ಎಪಿಎಂಸಿ ಮಾರುಕಟ್ಟೆ ಅಭಿವೃದ್ದಿಯಾದರೆ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗುವ ಜೊತೆಗೆ ಸ್ಥಳೀಯ ಚಹಾ ಅಂಗಡಿ ಬೀದಿಬದಿ ಹಾಗೂ ಇತರೆ ವ್ಯಾಪಾರ ವಹಿವಾಟಿಗೂ ಸಹಾಯ ಆಗಲಿದೆ
- ಸತೀಶ ಮಾಳವಾಡ ರೈತ
ಮೂಲಸೌಕರ್ಯ ಒದಗಿಸಿ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ನೀರು ವಿದ್ಯುತ್ ಸ್ವಚ್ಛತೆಗೆ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು. ಕೃಷಿಕರಿಗೆ ವ್ಯಾಪಾರಸ್ಥರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಆಗ ಎಲ್ಲರೂ ಎಪಿಎಂಸಿಗೆ ಬರುತ್ತಾರೆ
-ಸಿ.ಕೆ.ಹೊನವಾಡ ರೈತ ಮುಖಂಡ
ಅಧಿಕಾರಿಗಳು ಏನಂತಾರೆ?
ಸದ್ಯದಲ್ಲೇ ವ್ಯಾಪಾರ ಆರಂಭ ಕೇಂದ್ರ ಸರ್ಕಾರದ ಹೊಸ ನಿಯಮದಿಂದ ಸಿಬ್ಬಂದಿ ಕೊರತೆ ಎದುರಾಗಿದೆ. ಆದ್ದರಿಂದ ಕಾರ್ಯದರ್ಶಿಯಾಗಿ ನಾವೇ ಎಲ್ಲವನ್ನು ನಿಭಾಯಿಸುತ್ತಿದ್ದೇವೆ. ಆದರೀಗ ಸರ್ಕಾರ ಕೊರತೆಯನ್ನು ಸರಿಪಡಿಸಿಕೊಳ್ಳಲು ಮತ್ತೇ ಅವಕಾಶ ನೀಡಿದೆ. ಸದ್ಯದಲ್ಲಿಯೇ ನರೇಗಲ್‌ಗೆ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ವ್ಯಾಪಾರ ವಹಿವಾಟು ಆರಂಭಿಸಲು ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗುವುದು- ಡಿ.ಜಿ.ಪಟ್ಟಣಶೆಟ್ಟಿ ಕಾರ್ಯದರ್ಶಿ ಹೊಳೆಆಲೂರು ಎಪಿಎಂಸಿ ವ್ಯಾಪಾರಸ್ಥರಿಗೆ ನೋಟಿಸ್ ಸಿಬ್ಬಂದಿ ಕೊರತೆಯಿಂದ ಕಾರ್ಯದರ್ಶಿಗಳು ವಾರಕ್ಕೊಮ್ಮೆ ನರೇಗಲ್‌ಗೆ ಹೋಗಿ ಬರುತ್ತಾರೆ. ಆದರೆ ಅಲ್ಲಿನ ಎಪಿಎಂಸಿಯಲ್ಲಿ ಜಾಗ ಖರೀದಿ ಮಾಡಿಕೊಂಡ 11 ವ್ಯಾಪಾರಸ್ಥರಿಗೆ ಕೂಡಲೇ ಅಂಗಡಿಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ನೋಟಿಸ್ ನೀಡಲಾಗಿದೆ
- ಹೊಳೆಆಲೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಿಬ್ಬಂದಿ ನೀಡಿದ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.