ಶುಕ್ರವಾರ, ಜುಲೈ 30, 2021
26 °C
ನೀರ ನೆಮ್ಮದಿಯ ನಾಳೆಗೆ ಬೇಕಿದೆ ಸಂಕಲ್ಪ

ಮಳೆನೀರು ಸಂಗ್ರಹಕ್ಕೆ ಆಸಕ್ತಿಯ ಕೊರತೆ; ವ್ಯರ್ಥವಾಗಿ ಹರಿದು ಹೋಗುತ್ತಿರುವ ಜೀವಜಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಮಳೆನೀರನ್ನು ಹಿಡಿದಿಟ್ಟುಕೊಂಡು ಅದನ್ನು ನೆಮ್ಮದಿಯ ನಾಳೆಗಳಿಗೆ ಬಳಸಬೇಕು ಎಂಬ ಚಿಂತನೆಯು ಜಿಲ್ಲೆಯಲ್ಲಿ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗಿದೆ. ಮಳೆನೀರು ಸಂಗ್ರಹಕ್ಕೆ ಎಲ್ಲೆಡೆ ಅವಕಾಶ ಇದ್ದರೂ ಅನುಷ್ಠಾನಗೊಳಿಸುವಲ್ಲಿ ಮಾತ್ರ ಆಸಕ್ತಿ ಇಲ್ಲದಿರುವುದು ಎದ್ದು ಕಾಣಿಸುತ್ತದೆ. ಹೀಗಾಗಿ ಜಿಲ್ಲೆಯಲ್ಲಿನ ನಗರ, ಪಟ್ಟಣಗಳಲ್ಲಿನ ಮಳೆ ನೀರೆಲ್ಲವೂ ವ್ಯರ್ಥವಾಗಿ ಹರಿದು ರಸ್ತೆ, ಚರಂಡಿಯ ಪಾಲಾಗುತ್ತಿದೆ.

ಮನೆ ಕಟ್ಟುವಾಗ ಮಳೆ ನೀರು ಸಂಗ್ರಹಕ್ಕೆ ಜಾಗ ಬಿಡುವುದು ಕಡ್ಡಾಯ ಎನ್ನುವ ನಿಯಮ ಇದೆ. ಆದರೆ, ಸ್ಥಳೀಯ ಸಂಸ್ಥೆಯಿಂದ ಪರವಾನಗಿ ಪಡೆದು ಮನೆ ಕಟ್ಟಿಸಿದವರು ಮಳೆನೀರು ಕೊಯ್ಲಿನ ಬಗ್ಗೆ ಹೆಚ್ಚಿನ ಆಸಕ್ತಿಯನ್ನೇನೂ ಹೊಂದಿಲ್ಲ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೂಡ ಪರಿಶೀಲನೆಯ ಗೋಜಿಗೆ ಹೋಗುವುದಿಲ್ಲ. ಸರ್ಕಾರಿ ಕಚೇರಿಗಳು ಕೂಡ ಮಳೆನೀರು ಸಂಗ್ರಹಿಸುವ ‍ಪ್ರಯತ್ನಕ್ಕೆ ಮುಂದಾಗಿಲ್ಲ. ನೀರಿನ ಮಹತ್ವ ಅರಿತಿರುವ ಕೆಲವರು ಮಾತ್ರ ತಮ್ಮ ಮನೆಗಳಲ್ಲಿ ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಜಲಶಕ್ತಿ ಅಭಿಯಾನದ ಅಡಿಯಲ್ಲಿ ಮಳೆನೀರು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಗಾರು ಪೂರ್ವದಲ್ಲೇ ನೀರು ಸಂಗ್ರಹಗೊಳ್ಳುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಕಂದಕ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ, ಅಂತರ್ಜಲ ಮಟ್ಟ ಹೆಚ್ಚುವುದರ ಜತೆಗೆ ಮಣ್ಣಿನಲ್ಲಿ ತೇವಾಂಶವೂ ಹೆಚ್ಚಿದೆ. ಕಲ್ಯಾಣಿಗಳ ಪುನಶ್ಚೇತನ, ಕೆರೆಗಳ ವಿಸ್ತರಣೆ, ಹೂಳೆತ್ತೆಸುವಿಕೆ ಕೂಡ ನಿರಂತರವಾಗಿ ನಡೆಯುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ತಿಳಿಸಿದ್ದಾರೆ.

‘15ನೇ ಹಣಕಾಸು ಯೋಜನೆ ಅನುದಾನ ಬಳಸಿ ಸರ್ಕಾರಿ ಕಚೇರಿಗಳು, ಸ್ಥಳೀಯ ಸಂಸ್ಥೆಗಳ ಕಟ್ಟಡದಲ್ಲಿ ಮಳೆನೀರು ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗುರುಪ್ರಸಾದ್‌ ತಿಳಿಸಿದ್ದಾರೆ.

ಮಳೆನೀರು ಸಂಗ್ರಹ ಸಮರ್ಪಕ ಅನುಷ್ಠಾನ ಅಗತ್ಯ

ಮುಂಡರಗಿ: ಉತ್ತರ ಕರ್ನಾಟಕದಲ್ಲಿ ಅತ್ಯಲ್ಪ ಮಳೆ ಬೀಳುವ ಪ್ರದೇಶಗಳಲ್ಲಿ ಮುಂಡರಗಿಯೂ ಒಂದಾಗಿದ್ದು, ಇಲ್ಲಿ ಮಳೆ ನೀರು ಸಂಗ್ರಹ ಹಾಗೂ ಘಟಕ ಸ್ಥಾಪನೆಯಲ್ಲಿ ಹೇಳಿಕೊಳ್ಳುವಂತಹ ಕೆಲಸ ಕಾರ್ಯಗಳಾಗಿಲ್ಲ.

ಸರ್ಕಾರದ ನಿರ್ದೇಶನದಂತೆ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ನೂತನವಾಗಿ ಮನೆ ಕಟ್ಟಿಕೊಳ್ಳುವವರು ಕಡ್ಡಾಯವಾಗಿ ಮಳೆನೀರು ಸಂಗ್ರಹ ಘಟಕ ಸ್ಥಾಪಿಸಬೇಕು ಎಂಬ ಕರಾರನ್ನು ಹಾಕಲಾಗುತ್ತಿದೆ. ಇದರಿಂದಾಗಿ ತೀರಾ ಇತ್ತೀಚಿನವರೆಗೆ ಹೊಸ ಮನೆ ನಿರ್ಮಿಸಿಕೊಳ್ಳುತ್ತಿರುವವರು ಮಳೆನೀರು ಸಂಗ್ರಹ ಘಟಕ ಸ್ಥಾಪಿಸಿಕೊಳ್ಳುತ್ತಿದ್ದಾರೆ. ಮಳೆಕೊಯ್ಲು ಘಟಕ ಸ್ಥಾಪಿಸಿಕೊಳ್ಳದ ಮನೆಯ ಮಾಲೀಕರಿಗೆ ದಂಡ ಹಾಕಲಾಗುತ್ತಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅದು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ.

ತಾಲ್ಲೂಕಿನ ಮುಷ್ಟಿಕೊಪ್ಪ, ವಿರುಪಾಪೂರ ಹಾಗೂ ಕಲಕೇರಿ ಗ್ರಾಮಗಳು ಮೂರು ದಶಕಗಳ ಹಿಂದೆ ರಾಜ್ಯದಲ್ಲಿಯೇ ಅತಿ ಹೆಚ್ಚು ಫ್ಲೋರೈಡ್‌ ಅಂಶವುಳ್ಳ ನೀರನ್ನು ಬಳಸುವ ಗ್ರಾಮಗಳೆಂದು ಪರಿಗಣಿಸಲ್ಪಟ್ಟಿದ್ದವು. ಶಿವಮೊಗ್ಗ ಮೂಲದ ಬೈಫ್ ಸಂಸ್ಥೆಯ
ಆರ್ಥಿಕ ನೆರವಿನಿಂದ ಈ ಗ್ರಾಮಗಳಲ್ಲಿ ಶೇ 90ರಷ್ಟು ಜನರು ಅಂದು ತಮ್ಮ ಮನೆಗಳಲ್ಲಿ ಮಳೆನೀರು ಸಂಗ್ರಹ ಘಟಕಗಳನ್ನು ಸ್ಥಾಪಿಸಿಕೊಂಡಿದ್ದರು.

ಇತ್ತೀಚೆಗೆ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿರುವುದರಿಂದ ಜನರು ಮಳೆಕೊಯ್ಲು ಘಟಕಗಳನ್ನು ಸ್ಥಗಿತಗೊಳಿಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಈಗಲೂ ಜನರು ಕುಡಿಯಲು ನಿತ್ಯ ಮಳೆಕೊಯ್ಲು ಘಟಕದ ನೀರನ್ನೇ ಬಳಸುತ್ತಿದ್ದಾರೆ.

ಮನೆ ಕಟ್ಟುವಾಗ ನಿಯಮ ಪಾಲನೆ ಇಲ್ಲ

ನರೇಗಲ್: ಮನೆ ಕಟ್ಟುವಾಗ ಮಳೆನೀರು ಸಂಗ್ರಹಕ್ಕೆ ಜಾಗ ಬಿಡುವುದು ಕಡ್ಡಾಯ ಇದ್ದರೂ ಪಟ್ಟಣದಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ. ಪಟ್ಟಣದ ಸುತ್ತಲೂ ಎಲ್ಲಿಯೂ ಮಳೆನೀರು ಸಂಗ್ರಹದ ಮಾದರಿಗಳು ಇಲ್ಲದೆ ಇರುವುದರಿಂದ ನೀರು ಪೋಲಾಗಿ ಹೋಗುತ್ತಿದೆ.

ಸಾರ್ವಜನಿಕರಸಹಭಾಗಿತ್ವದಲ್ಲಿ ನೆಲ, ಜಲ ಸಂರಕ್ಷಣಾ ಸಮಿತಿ ವತಿಯಿಂದ ಐತಿಹಾಸಿಕ ಹಿರೇಕೆರೆ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಕೆರೆಗೆ ಹರಿದು ಬರುವ ದಾರಿಗಳು ಒತ್ತುವರಿಯಾಗಿರುವ ಕಾರಣ ನೀರು ಸಂಗ್ರಹ ಆಗುತ್ತಿಲ್ಲ. ಆದ್ದರಿಂದ ಪ್ರತಿವರ್ಷ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆ ಆಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತದೆ.

ಮಳೆನೀರು ಸಂಗ್ರಹ ಸರಿಯಾಗಿ ಅನುಷ್ಠಾನ ಗೊಂಡಿಲ್ಲ

ಲಕ್ಷ್ಮೇಶ್ವರ: ಹೊಸದಾಗಿ ಮನೆ ಕಟ್ಟಿಸುವವರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಅಂತವರಿಗೆ ಮಾತ್ರ ಪುರಸಭೆಯಿಂದ ಮನೆ ನಿರ್ಮಿಸಿಕೊಳ್ಳಲು ಪರವಾನಗಿ ಕೊಡಲಾಗುತ್ತದೆ ಎಂದು ಪುರಸಭೆ ನಿರ್ಣಯ ಕೈಗೊಂಡಿದ್ದರೂ ಸಹ ಇನ್ನೂ ಸಾಕಷ್ಟು ಜನರು ಈ ಯೋಜನೆಯನ್ನು ಹೆಸರಿಗೆ ಮಾತ್ರ ಎಂಬಂತೆ ಅಳವಡಿಸಿಕೊಂಡಿದ್ದಾರೆ.

ಮನೆ ನಿರ್ಮಾಣಕ್ಕಾಗಿ ಪರವಾನಗಿಗೆ ಬಂದಾಗ ಪುರಸಭೆ ಈ ನಿಯಮವನ್ನು ವಿಧಿಸುತ್ತದೆ. ಪರವಾನಗಿ ಸಿಗುವವರೆಗೆ ಎಲ್ಲರೂ ನಿಯಮವನ್ನು ಪಾಲಿಸುತ್ತೇವೆ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ನಂತರದ ದಿನಗಳಲ್ಲಿ ಯಾರೂ ಅದನ್ನು ಪಾಲಿಸುತ್ತಿಲ್ಲ.

ಆದರೆ ಮಳೆ ನೀರಿನ ಮಹತ್ವ ಅರಿತ ಸಾರ್ವಜನಿಕರು ಮಳೆನೀರು ಕೊಯ್ಲು ಯೋಜನೆಯನ್ನು ಪಾಲಿಸಿದ್ದಾರೆ. ಹತ್ತಾರು ನೂತನ ಮನೆಗಳ ಒಳಾಂಗಣದಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಅಂತವರ ಸಂಖ್ಯೆ ತೀರಾ ಕಡಿಮೆ.

ಪಾಲನೆಯಾಗದ ನಿಯಮ

ಶಿರಹಟ್ಟಿ: ಬೆಳೆಯುತ್ತಿರುವ ಪಟ್ಟಣ ಹಾಗೂ ಜನಸಂಖ್ಯೆ ಹಾಗೂ ಅಧಿಕವಾಗುತ್ತಿರುವ ನೀರಿನ ಬಳಕೆಯಿಂದ ನೀರಿಗೆ ಪರ್ಯಾಯ ಮೂಲಗಳನ್ನು ಹುಡುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದ್ದರಿಂದ ಮನೆ ಕಟ್ಟುವಾಗ ಮಳೆನೀರು ಸಂಗ್ರಹಿಸಲು ಸ್ಥಳ ಬಿಡುವುದು ಕಡ್ಡಾಯವಾಗಿದ್ದರೂ ಪಟ್ಟಣ ಸೇರಿದಂತೆ ಎಲ್ಲಿಯೂ ಈ ನಿಯಮ ಪಾಲನೆಯಾಗುತ್ತಿಲ್ಲ. ಇದರಿಂದ ಮಳೆ ನೀರು ಪೋಲಾಗಿ ಹೋಗುತ್ತಿದೆ.

ಪಟ್ಟಣದಲ್ಲಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಸ್ಥಳೀಯ ಆಡಳಿತ ವತಿಯಿಂದ ಮನೆ, ವಾಣಿಜ್ಯ ಮಳಿಗೆಗಳ ಕಟ್ಟಡಗಳನ್ನು ನಿರ್ಮಿಸುವಾಗ ಮಳೆಕೊಯ್ಲು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದರೂ ಅಧಿಕಾರಿಗಳು ಮತ್ತು ಸಾರ್ವಜನಿಕರ ನಿರ್ಲಕ್ಷ್ಯದಿಂದ ಕಾರ್ಯರೂಪಕ್ಕೆ ಬಂದಿಲ್ಲ. ಪಟ್ಟಣದ ಸುತ್ತಮುತ್ತ ಎಲ್ಲಿಯೂ ಮಳೆನೀರು ಸಂಗ್ರಹ ಮಾದರಿಗಳಿಲ್ಲ.

ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಆದ್ದರಿಂದ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಹಿಡಿದಿಡುವುದು ಅನಿವಾರ್ಯ. ಮನೆಗೆ ನೀರು ಬಂದಿಲ್ಲ ಎಂದು ದೂರುವ ಬದಲು ನೀರಿನ ಕೊರತೆ ನೀಗಿಸುವುದಕ್ಕೆ ಹೊಸ ಮನೆಗಳ ನಿರ್ಮಾಣ ಸಂದರ್ಭದಲ್ಲಿ ಮಳೆನೀರು ಸಂಗ್ರಹ ಮಾದರಿಯನ್ನು ಅಳವಡಿಸಿಕೊಳ್ಳುವುದು ಉತ್ತಮ’ ಎಂದು ಪಟ್ಟಣದ ನಿವಾಸಿ ರಮೇಶ, ಸಂತೋಷ ಕುರಿ ಹೇಳಿದರು.

ಮಳೆ ನೀರು ಸಂಗ್ರಹಕ್ಕೆ ಇಲ್ಲ ವ್ಯವಸ್ಥೆ

ನರಗುಂದ: ಪಟ್ಟಣದಲ್ಲಿ ಮಳೆನೀರು ಸಂಗ್ರಹಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಬಿದ್ದ ಮಳೆ ನೀರು ವ್ಯರ್ಥವಾಗಿ ಚರಂಡಿ ಸೇರುತ್ತದೆ. ನೆಮ್ಮದಿಯ ನಾಳೆಗೆ ನೀರು ಉಳಿಸುವ ಕೆಲಸ ನಡೆಯುತ್ತಿಲ್ಲ.

ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಆದರೆ ಆ ಬಡಾವಣೆಗಳಲ್ಲಿ ಮನೆ ಕಟ್ಟುವಾಗ ಮಳೆ ನೀರು ಸಂಗ್ರಹಕ್ಕೆ ಜಾಗ ಬಿಡುವುದು ಕಡ್ಡಾಯ ಎನ್ನುವ ನಿಯಮ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿ ಎಳ್ಳಷ್ಟೂ ಪಾಲನೆಯಾಗುತ್ತಿಲ್ಲ. ಪಟ್ಟಣದಲ್ಲಿ ಮಳೆನೀರು ಪೋಲಾಗುವುದು ಸಾಮಾನ್ಯವಾಗಿದೆ.
ಸರ್ಕಾರ ಈಚೆಗೆ ಪುರಸಭೆಗೆ ಸರ್ಕಾರಿ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹಿಸಿ ಅಂತರ್ಜಲ ಹೆಚ್ಚಿಸಲು ಸೂಚಿಸಿ ಹಣ ಬಳಕೆಗೆ ಅನುಮತಿ ನೀಡಿದೆ. .

‘ಹೊಸ ಕಟ್ಟಡ ನಿರ್ಮಾಣದಲ್ಲಿ ಮಳೆನೀರು ಸಂಗ್ರಹಕ್ಕೆ ಜಾಗ ಬಿಡಬೇಕು ಎಂಬ ನಿಯಮವಿದೆ. ಆದರೆ ಯಾರಿಂದಲೂ ಪಾಲನೆಯಾಗುತ್ತಿಲ್ಲ. ಈಗ ಪುರಸಭೆ 15ನೇ ಹಣಕಾಸು ಯೋಜನೆಯಲ್ಲಿ ಶೇ 5ರಷ್ಟು ಹಣವನ್ನು ಮಳೆನೀರು ಸಂಗ್ರಹಕ್ಕೆ ಮೀಸಲಿಡಲಾಗಿದ್ದು, ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸರ್ಕಾರಿ ಸಿದ್ದೇಶ್ವರ ಕಾಲೇಜಿನಲ್ಲಿ ಮಳೆ ನೀರು ಸಂಗ್ರಹ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮುಖ್ಯಾಧಿಕಾರಿ ಎಸ್.ಎಸ್. ಬ್ಯಾಳಿ ತಿಳಿಸಿದ್ದಾರೆ.

ಕಾಲುವೆ ಹೂಳು ತೆರವು, ಮಳೆ ನೀರು ಕೆರೆಯಲ್ಲಿ ಸಂಗ್ರಹ

ಮುಳಗುಂದ: ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 7 ಕೆರೆಗಳ ಪೈಕಿ 3 ಕೆರೆಗಳನ್ನು ಸ್ಥಳೀಯ ಅನುದಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.

ಮುಂಗಾರು ಮಳೆ ಆರಂಭದ ಪೂರ್ವದಲ್ಲಿ ಅಬ್ಬಿ ಕೆರೆ, ಕೆಂಪಿ ಕೆರೆ, ಮೊಕಾಶಿ ಹಾಗೂ ಪಟ್ಟಣಶೆಟ್ಟಿ ಕೆರೆಗಳಿಗೆ ಹರಿದು ಬರುವ ಮಳೆ ನೀರಿನ ಕಾಲುವೆಗಳ ಹೂಳು ತೆಗೆಸಲಾಗಿದೆ. ಇದರ ಪರಿಣಾಮ ಮಳೆ ನೀರು ಸರಾಗವಾಗಿ ಹರಿದು ಕೆರೆಯಲ್ಲಿ ಸಂಗ್ರಹವಾಗಿದೆ. ಹಲವು ವರ್ಷಗಳಿಂದ ಕಾಲುವೆ ಹೂಳು ತುಂಬಿಕೊಂಡು ಅಬ್ಬಿ ಕೆರೆಗೆ ನೀರು ಬಾರದೇ ಹಳ್ಳ ಸೇರುತ್ತಿತ್ತು. ಕಾಲುವೆ ಸ್ವಚ್ಛಗೊಳಿಸಿದ ನಂತರ ಮೊದಲ ಮಳೆಗೆ ಕೆರೆ ಭರ್ತಿಯಾಗಿ ಕೊಡಿಬಿದ್ದು ಹರಿಯುತ್ತಿದೆ.

‘ಜಲಮೂಲ ಹಾಗೂ ಪರಿಸರ ರಕ್ಷಣೆಗೆ ಪಟ್ಟಣ ಪಂಚಾಯ್ತಿ ಮೊದಲ ಆದ್ಯತೆ ನೀಡಿದೆ. ಅಲ್ಲದೇ ಪಂಚಾಯ್ತಿ ಕಾರ್ಯಾಲಯದಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಂಡಿದ್ದು, ₹1.80 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು 2 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಬರುವ ದಿನಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, ವಾಣಿಜ್ಯ ಮಳಿಗೆಗಳಿಗೆ 15ನೇ ಹಣಕಾಸು ಯೋಜನೆ ಅಡಿ ಮಳೆ ನೀರು ಸಂಗ್ರಹ ಅಳವಡಿಸುವ ಯೋಜನೆ ಇದೆ’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

ಭೂಮಿಗೆ ನೀರು ಇಂಗಿಸಲು ನರೇಗಾ ಸಹಕಾರಿ

ಗಜೇಂದ್ರಗಡ: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿಗಳು, ಅರಣ್ಯ ಇಲಾಖೆ ನರೇಗಾ ಯೋಜನೆ ಅಡಿಯಲ್ಲಿ ಇಂಗು ಗುಂಡಿ, ಬದು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಮಣ್ಣಿನ ಸವಕಳಿ ತಪ್ಪಿಸಿ ಮಳೆ ನೀರು ಭೂಮಿಗೆ ಇಂಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

ಇತ್ತೀಚೆಗೆ ಅರಣ್ಯ ಇಲಾಖೆ ಶಾಂತಗೇರಿ ಗ್ರಾಮದ ಗುಡ್ಡ ಹಾಗೂ ಮುಶಿಗೇರಿ ಗ್ರಾಮಗಳಲ್ಲಿನ ಅರಣ್ಯ ಇಲಾಖೆಯ ಜಾಗದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ನರೇಗಾ ಯೋಜನೆ ಅಡಿಯಲ್ಲಿ ಇಂಗು ಗುಂಡಿ ನಿರ್ಮಿಸುತ್ತಿದ್ದು, ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಪಟ್ಟಣದಲ್ಲಿ ಮನೆ ಕಟ್ಟುವಾಗ ಮಳೆನೀರು ಸಂಗ್ರಹಕ್ಕೆ ಜಾಗ ಬಿಡುವುದು ಕಡ್ಡಾಯವಿದ್ದರೂ ಸಹ ಈ ನಿಯಮವನ್ನು ಹಲವರು ಗಾಳಿಗೆ ತೂರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಚಂದ್ರಶೇಖರ ಭಜಂತ್ರಿ, ಕಾಶೀನಾಥ ಬಿಳಿಮಗ್ಗದ, ಖಲೀಲಅಹ್ಮದ ಶೇಖ, ನಾಗರಾಜ ಹಣಗಿ, ಡಾ.ಬಸವರಾಜ ಹಲಕುರ್ಕಿ, ಚಂದ್ರು ಎಂ.ರಾಥೋಡ್‌, ಶ್ರೀಶೈಲ ಎಂ. ಕುಂಬಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು