ನರಗುಂದ: ತಾಲ್ಲೂಕಿನ ಶಿರೋಳದ ‘ವಾಸಂತಿ ಐ ಕೇರ್’ನ ನೇತ್ರ ವೈದ್ಯ ಡಾ.ವೀರಣ್ಣ ಬ್ಯಾಳಿ ಸ್ವತಃ ತಾವೇ ಮಂತ್ರಾಲಯದ ರಾಘವೇಂದ್ರ ರೂಪದ ಮಾದರಿಯ ಗಣಪತಿಯನ್ನು ಮಣ್ಣಿನಿಂದ ತಯಾರಿಸಿ, ಪ್ರತಿಷ್ಠಾಪಿಸಿ ಗಮನ ಸೆಳೆದಿದ್ದಾರೆ.
ಬಾಲ್ಯದಿಂದಲೂ ಗಣಪತಿ ತಯಾರಿಸುವ ಆಸಕ್ತಿ ಹೊಂದಿದ ಇವರು ವೈದ್ಯ ವೃತ್ತಿಗೆ ಬಂದ ನಂತರವೂ ಅದನ್ನು ಮುಂದುವರಿಸಿದ್ದು ಅವರ ಕಲಾ ಕೌಶಲ ಹಾಗೂ ಭಕ್ತಿಗೆ ಸಾಕ್ಷಿಯಾಗಿದೆ. ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿಯವರಾದ ಡಾ.ವೀರಣ್ಣ ತಾವು ತಯಾರಿಸಿದ ಬೃಹತ್ ಮಣ್ಣಿನ ಗಣಪತಿಗೆ ವಿಭೂತಿ, ಚಂದನ, ಹಳದಿಯನ್ನು ಮಾತ್ರ ಬಳಕೆ ಮಾಡಿ ಆಕರ್ಷಕಗೊಳಿಸಿದ್ದಾರೆ. ಕಣ್ಣುಗಳನ್ನು ಮಸೂರಗಳ ಮೂಲಕ ತಯಾರಿಸಿ ಹೊಳೆಯುವಂತೆ ಮಾಡಿದ್ದಾರೆ. ಗಣಪತಿಯ ಕೋರೆ ಹಲ್ಲುಗಳನ್ನು ಬಿಳಿ ಎಕ್ಕೆ ಗಿಡಗಳ ಬೇರನ್ನು ತಂದು ರೂಪಿಸಿರುವುದು ವಿಶೇಷ.
ಪುರಾಣ ಕಾವ್ಯಗಳಲ್ಲಿ ಗಣಪತಿ ಬಿಳಿ ಎಕ್ಕೆ ಬೇರುಗಳಲ್ಲಿ ವಾಸ ಮಾಡುತ್ತಿದ್ದನೆಂದು ಉಲ್ಲೇಖವಿದೆ. ಅದೇ ಇದಕ್ಕೆ ಪ್ರೇರಣೆ. ಇದರ ಜೊತೆಗೆ ಗೌರಿ, ರಿದ್ದಿ, ಸಿದ್ದಿ ಆಮೆ, ಮೂರ್ತಿಗಳನ್ನು ಶುದ್ಧ ಮಣ್ಣಿನಿಂದ ತಯಾರಿಸುವ ಮೂಲಕ ಮಾದರಿಯಾಗಿದ್ದಾರೆ.
ಹಿಂದಿನ ಕಾಲದಲ್ಲಿ ಕೆಲವೇ ಜನಾಂಗದವರು ಗಣಪತಿ ತಯಾರಿಸುತ್ತಿದ್ದರು. ಆಗ ನೋಡಿ ಕಲಿತ ಪರಿಣಾಮ ಇಂದು ಮುಕ್ತವಾಗಿ ಗಣಪತಿ ತಯಾರಿಸಲು ಬರುತ್ತಿದೆ ಎನ್ನುತ್ತಾರೆ. ಹೊಟ್ಟೆ ಹಾಗೂ ಎದೆಗೆ ತೆಂಗಿನಕಾಯಿ ಬಳಸಿ ಕಲಾಕೃತಿಯನ್ನು ಮತ್ತಷ್ಟು ಆಕರ್ಷಕಗೊಳಿಸಿದ್ದಾರೆ. ಗಣಪಗೆ ತುಳಸಿ ಮಾಲೆ ಹಾಕಿದ್ದಾರೆ.
‘ಗಣಪತಿ ಮೂರ್ತಿ ತಯಾರಿಸುವುದು ನನ್ನ ಹವ್ಯಾಸ. ಈ ಸಲ ನನಗೆ ಕಲಾವಿದ ಬಸವರಾಜ ಗಾಣಿಗೇರ ಸಹಾಯ ಮಾಡಿದ್ದಾರೆ. ಪರಿಸರ ಸ್ನೇಹಿ ಗಣಪತಿಗಳನ್ನು ತಯಾರಿಸಿ ಬೇರೆಯವರಿಗೆ ಉಚಿತವಾಗಿ ಕೊಡಬೇಕೆಂಬುದು ನನ್ನ ಆಸೆ. ಆದರೆ ಬಣ್ಣಗಳಿಗೆ ಮಾರುಹೋಗುವ ಯುವಕರು ಇಂಥ ಗಣಪತಿಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಈ ರೀತಿ ಮಣ್ಣಿನ ರಾಘವೇಂದ್ರ ರೂಪದ ಗಣಪತಿಯನ್ನು ನಾನೇ ನನ್ನ ಆಸ್ಪತ್ರೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಿರುವೆ. ಎಲ್ಲರೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಬೇಕು’ ಎಂದು ಅವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.