ಶನಿವಾರ, ಜನವರಿ 16, 2021
17 °C
ಚುನಾವಣೆ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ವಿಶ್ವಾಸ

ಗದಗ: 117 ಗ್ರಾ.ಪಂ. ಪೈಕಿ ಬಿಜೆಪಿ 110ರಲ್ಲಿ ಗೆಲ್ಲುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯ 117 ಗ್ರಾಮ ಪಂಚಾಯ್ತಿಗಳ ಪೈಕಿ ಬಿಜೆಪಿ ಬೆಂಬಲಿಗರು ಕನಿಷ್ಠ 110ರಲ್ಲಿ ಗೆಲವು ಸಾಧಿಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪಕ್ಷದ ನಾಯಕರನ್ನು ಗೆಲ್ಲಿಸಲು ಶ್ರಮಿಸಿದ ಕಾರ್ಯಕರ್ತರ ಗೆಲುವಿಗಾಗಿ ಬಿಜೆಪಿ ನಾಯಕರೆಲ್ಲರೂ ಕೆಲಸ ಮಾಡಲಿದ್ದಾರೆ. ಇದೊಂದು ಇತಿಹಾಸ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರ ಗೆಲುವಿಗೆ ಪಂಚರತ್ನ ಸೂತ್ರದಡಿ ಕಾರ್ಯತಂತ್ರ ರೂಪಿಸಲಾಗಿದೆ’ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಾದರೂ ಗದಗ ಶಾಸಕರ ಸ್ವಗ್ರಾಮ ಹುಲಕೋಟಿ, ಕುರ್ತಕೋಟಿಯ ಜನತೆಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ’ ಎಂದು ಆರೋಪ ಮಾಡಿದರು. 

‘70 ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್, ಗಾಂಧೀಜಿ ಹೆಸರು ಬಳಸಿಕೊಂಡು ರಾಜಕಾರಣ ಮಾಡಿತೇ ಹೊರತು ಗಾಂಧೀಜಿ ಕನಸುಗಳನ್ನು ನನಸಾಗಿಸಲಿಲ್ಲ’ ಎಂದು ದೂರಿದರು.

‘ಗದಗ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಹಿಂದಿನ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಬಯಲು ಬಹಿರ್ದೆಸೆ ಮುಕ್ತ ಗ್ರಾಮ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಘೋಷಿಸ
ಅನುದಾನ ಖರ್ಚು ಮಾಡಿದರು. ಆದರೆ, ತಮ್ಮದೇ ಸ್ವಗ್ರಾಮದಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಲೇವಡಿ ಮಾಡಿದರು. 

‘ತುಂಗಭದ್ರಾ ನದಿ ನೀರನ್ನು ತಮ್ಮ ಗ್ರಾಮಕ್ಕೆ ಒದಗಿಸುವುದರ ಜತೆಗೆ ತಾಲ್ಲೂಕಿನ 12 ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಿಗೂ ಒದಗಿಸಿದ್ದರೆ ಅನುಕೂಲವಾಗುತ್ತಿತ್ತು’ ಎಂದರು.

‘ಹುಲಕೋಟಿ ಮಿಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹಲವರು ಮಿಲ್ ಬಂದ ಆದ ಬಳಿಕ ಬೇರೆ ಕಡೆಗೆ ಹೋಗಿದ್ದರೂ ಅವರ ಹೆಸರು ಇನ್ನೂ ಅಲ್ಲಿನ ಮತದಾರರ ಪಟ್ಟಿಯಲ್ಲಿದೆ. ಜತೆಗೆ ಅಸುಂಡಿ, ಶ್ಯಾಗೋಟಿಯ ಕೆಲವರ ಹೆಸರೂ ಹುಲಕೋಟಿಯ ಮತದಾರರ ಪಟ್ಟಿಯಲ್ಲಿವೆ’ ಎಂದು ಆರೋಪಿಸಿದ ಅವರು, ಈ ಬಗ್ಗೆ ಜಿಲ್ಲಾಡಳಿತಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಯುತ ಚುನಾವಣೆಗಾಗಿ ಕರ್ತವ್ಯಕ್ಕೆ ಸ್ಥಳೀಯ ಅಧಿಕಾರಿಗಳನ್ನು ನೇಮಿಸದೇ ಹೊರ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಕಾಂತಿಲಾಲ್‌ ಬನ್ಸಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ರಾಘವೇಂದ್ರ ಯಳವತ್ತಿ, ಭದ್ರೇಶ ಕುಸ್ಲಾಪೂರ, ಅನಿಲ ಅಬ್ಬಿಗೇರಿ, ಜಗದೀಶ ಚಿಂಚಲಿ, ಸುರೇಶ ಚವ್ಹಾಣ, ರಮೇಶ ಸಜ್ಜಗಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು