ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರೆಂದು ಪರಿಗಣಿಸಿ ಸವಲತ್ತು ಒದಗಿಸಿ: ಪತ್ರಿಕಾ ವಿತರಕರ ಒತ್ತಾಯ

ಪತ್ರಿಕಾ ವಿತರಕರ ದಿನಾಚರಣೆ ಇಂದು–
Last Updated 4 ಸೆಪ್ಟೆಂಬರ್ 2021, 3:41 IST
ಅಕ್ಷರ ಗಾತ್ರ

ಗದಗ: ರೈತರು, ಸೈನಿಕರಂತೆ ಪತ್ರಿಕಾ ವಿತರಕರು ಕೂಡ ಚಳಿ, ಗಾಳಿ, ಮಳೆ ಎನ್ನದೇ ವರ್ಷದ 365 ದಿನಗಳೂ ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಕೋವಿಡ್‌–19 ಸಂದರ್ಭದಲ್ಲೂ ಕೆಚ್ಚೆದೆಯಿಂದ ಕೆಲಸ ನಿರ್ವಹಿಸಿ, ಮನೆಮನೆಗೆ ಪತ್ರಿಕೆಗಳನ್ನು ತಲುಪಿಸಿ ಕರ್ತವ್ಯ ನಿಷ್ಠೆ ಮೆರೆಯುತ್ತಾರೆ.

ಪತ್ರಿಕಾ ವಿತರಕ ಒಂದು ದಿನ ಕೆಲಸಕ್ಕೆ ಹಾಜರಾಗದಿದ್ದರೆ ಪತ್ರಿಕೆಗಳನ್ನು ಮನೆಮನೆಗೆ ಹಂಚುವ ಕೆಲಸ ಏರುಪೇರಾಗುತ್ತದೆ. ಪತ್ರಿಕೆ ಸರಿಯಾದ ಸಮಯಕ್ಕೆ ಸಿಗದೇ ಹೋದಾಗ ಓದುಗರು ಕೂಡ ಕಸಿವಿಸಿಗೊಳ್ಳುತ್ತಾರೆ. ಆದರೆ, ಇಂತಹ ತೊಂದರೆಯನ್ನು ಓದುಗರಿಗೆ ಕೊಡದೇ ಪ್ರತಿದಿನವೂ ಹಲವು ಸವಾಲುಗಳನ್ನು ಎದುರಿಸುತ್ತ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಪತ್ರಿಕಾ ವಿತರಕರ ಶ್ರಮವನ್ನು ಸರ್ಕಾರ ಗುರುತಿಸಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ.

ಕೋಳಿ ಕೂಗುವ ಮುನ್ನ ಎದ್ದು, ಪತ್ರಿಕೆಗಳನ್ನು ಜೋಡಿಸಿಟ್ಟುಕೊಂಡು, ಜನರು ಕಾಫಿ–ಟೀ ಕುಡಿಯುವ ವೇಳೆಗೆ ಅವರ ಕೈಯಲ್ಲಿ ಪತ್ರಿಕೆ ಇರುವಂತೆ ನೋಡಿಕೊಳ್ಳುವ ಪತ್ರಿಕಾ ವಿತರಕರ ಬದುಕು ಅನ್‌ಲಾಕ್‌ ಘೋಷಣೆ ನಂತರವೂ ಸುಧಾರಿಸಿಲ್ಲ. ಸರ್ಕಾರ ಪತ್ರಿಕಾ ವಿತರಕರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಗುರುತಿಸಿ, ಅವರಿಗೆ ಸಿಗುವ ಸೌಲಭ್ಯಗಳನ್ನು ನಮಗೂ ದೊರಕಿಸಿಕೊಡಬೇಕು ಎಂಬ ಒತ್ತಾಯ ಪತ್ರಿಕಾ ವಿತರಕರದ್ದು.

ಕೊರೊನಾ ವಾರಿಯರ್ಸ್‌ ರೀತಿ ಕೆಲಸ ಮಾಡಿದರೂ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಯಾವುದೇ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ. ವರ್ಷಪೂರ್ತಿ ಕೆಲಸ ಮಾಡುವ ನಮಗೆ ವಿಶೇಷ ‌ಭತ್ಯೆ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಆಗ ಮಾತ್ರ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕೂ ಸಾರ್ಥಕತೆ ಸಿಗುತ್ತದೆ ಎಂಬುದು ಅವರ ಅನಿಸಿಕೆಯಾಗಿದೆ.

ಎಲ್ಲ ಋತುವಿನಲ್ಲೂ ಕಷ್ಟಪಟ್ಟು ದುಡಿಯುವ ಪತ್ರಿಕಾ ವಿತರಕರ ಬದುಕು ಹಲವು ಸಿಕ್ಕುಗಳಿಂದ ಕೂಡಿದೆ. ಆದರೆ, ಕಷ್ಟದ ಪರಿಸ್ಥಿತಿಯಲ್ಲೂ ಶ್ರದ್ಧೆಯಿಂದ ದುಡಿಯುತ್ತಿರುವ ಪ್ರತಿಕಾ ಯೋಧರು ಎಂಬ ಹೆಮ್ಮೆ ಎಂದೆಂದಿಗೂ ಅವರಿಗೆ ಇದೆ.

ವಿತರಕರ ಬದುಕು ಕಷ್ಟದಲ್ಲಿ...

ಕೊರೊನಾ ಸಂಕಷ್ಟದಿಂದ ಪತ್ರಿಕಾ ವಿತರಕರ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪತ್ರಿಕಾ ವಿತರಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು
ಶಂಕರ್ ಕುದರಿಮೋತಿ, ಪತ್ರಿಕಾ ವಿತರಕ

ಹಬ್ಬದಂತೆ ಸಂಭ್ರಮಿಸಲು ಕಾರಣಗಳಿಲ್ಲ...

ಪತ್ರಿಕಾ ವಿತರಕರ ದಿನಾಚರಣೆ ಬಂತೆಂದರೆ ನಮಗೆಲ್ಲ ವಿಶೇಷ ಹಬ್ಬ ಇದ್ದಂತೆ. ಹಲವು ಸಂದಿಗ್ಧ ಪರಿಸ್ಥಿತಿಗಳಲ್ಲೂ ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಇನ್ನಾದರೂ ಗಮನ ಹರಿಸಿ, ನಮ್ಮನ್ನೂ ಅಸಂಘಟಿತ ವಲಯದ ಕಾರ್ಮಿಕರೆಂದು ಪರಿಗಣಿಸಬೇಕು

-ದತ್ತಾತ್ರೇಯ ರಾಮಚಂದ್ರ, ಗದಗ

ಜೀವನ ರೂಪಿಸಿದ ಕಾಯಕ

ಪತ್ರಿಕೆ ಹಂಚುವ ಕಾಯಕದಿಂದ ಎಷ್ಟೋ ಬಡವರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಸಾಕಷ್ಟು ಬಡ ಹುಡುಗರು ಇದರಿಂದ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿಕೊಂಡು, ಸಾಧನೆ ಮಾಡಿ ಜೀವನ ರೂಪಿಸಿಕೊಂಡಿದ್ದಾರೆ

-ಮಾರುತಿ ಮುಂಡರಗಿ, ಗದಗ

ಆರ್ಥಿಕ ಸಂಕಷ್ಟ

ಕೊರೊನಾ ಬಂದಾಗಿನಿಂದಲೂ ಓದುಗರ ಸಂಖ್ಯೆ ಬಹಳ ಕಡಿಮೆಯಾಗಿದೆ. ಇದರಿಂದ ವಿತರಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಪತ್ರಿಕಾ ವಿತರಕರನ್ನು ಸರ್ಕಾರ ಕಾರ್ಮಿಕರೆಂದು ಪರಿಗಣಿಸಿ ಸವಲತ್ತಗಳನ್ನು ಒದಗಿಸಬೇಕು

- ವೀರಬಸಯ್ಯ ವಿರಕ್ತಮಠ, ಗದಗ

ಬದುಕು ಸುಧಾರಿಸಲು ನೆರವಾಗಿ

ಎಲ್ಲ ಪತ್ರಿಕಾ ವಿತರಕರಿಗೂ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪತ್ರಿಕಾ ವಿತರಕರನ್ನು ಅಸಂಘಟಿತ ವಲಯಕ್ಕೆ ಸೇರಿಸಿ, ನಮ್ಮ ಬದುಕನ್ನೂ ಸುಧಾರಿಸಲು ಸರ್ಕಾರ ಕ್ರಮವಹಿಸಬೇಕು

- ಸಂಜು, ಗದಗ

ಸಿಎಂ ನಮ್ಮತ್ತ ಗಮನ ಹರಿಸಲಿ

ಹಿಂದಿನ ಸರ್ಕಾರಗಳು ಪತ್ರಿಕಾ ವಿತರಕರ ಬಗ್ಗೆ ಯಾವುದೇ ಗಮನಹರಿಸಿಲ್ಲ. ಈಗಿನ ಸರ್ಕಾರವಾದರೂ ನಮ್ಮ ಬಗ್ಗೆ ಗಮನಹರಿಸಿ ನಮ್ಮನ್ನು ಕಾರ್ಮಿಕ ಇಲಾಖೆಯಲ್ಲಿ ಸೇರಿಸಬೇಕು

- ಮಂಜುನಾಥ್ ಕಬನೂರ, ಗದಗ

ಸರ್ಕಾರಿ ಸೌಲಭ್ಯ ಒದಗಿಸಿ

ಪತ್ರಿಕಾ ವಿತರಕರು ಕೊರೊನಾ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಪತ್ರಿಕಾ ವಿತರಕರಿಗೆ ಈವರೆಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಕ್ಕಿಲ್ಲ. ಆದ್ದರಿಂದ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಏಳಿಗೆಗೆ ಹಣ ಮೀಸಲಿಡಬೇಕು. ಪತ್ರಿಕಾ ವಿತರಕರಿಗೆ ಕಾರ್ಮಿಕರಿಗೆ ನೀಡುವ ಸೌಲಭ್ಯ ಒದಗಿಸಲು ಕ್ರಮವಹಿಸಬೇಕು

ಸಿದ್ಧಲಿಂಗೇಶ ಮಡಿವಾಳರ, ಗದಗ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಮಾಜಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT