ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಪೆಟ್ಟಿಗೆಗೂ ಕಾಡುತ್ತಿದೆ ಅನಾಥ ಪ್ರಜ್ಞೆ..!

ಅಂಚೆ ಪೇಮೆಂಟ್ಸ್‌ ಬ್ಯಾಂಕ್‌ ಕಾಲದಲ್ಲಿ ಮೂಲೆಗುಂಪಾಗುತ್ತಿರುವ ಡಬ್ಬಿಗಳು
Last Updated 8 ಸೆಪ್ಟೆಂಬರ್ 2018, 13:29 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಪತ್ರ ಬರಲಿ, ಬರದೇ ಇರಲಿ, ಅಂಚೆಯಣ್ಣ ಮಾತ್ರ ದಿನವೂ ಮನೆಗೆ ಬಂದು ಹೋಗುತ್ತಿರಲಿ’ಇದು ಚೆಂಬೆಳಕಿನ ಕವಿ ಚನ್ನವೀರ ಕವಿ ಅವರು ಅಂಚೆಯಣ್ಣಂದಿರ ಬಗ್ಗೆ ಬರೆದಿರುವ ಸಾಲುಗಳು. ಅದೊಂದು ಕಾಲವಿತ್ತು. ಅಂಚೆಯಣ್ಣ ಸೈಕಲ್ ಏರಿ ಬರುತ್ತಿದ್ದರೆ, ಆತನ ಹಿಂದೆ ಮಕ್ಕಳ ಹಿಂಡೇ ಓಡಿಬರುತ್ತಿತ್ತು. ಯಾರ ಮನೆಗೆ ಪತ್ರ ಬಂದರೂ, ಓಣಿಗೆಲ್ಲಾ ಸಂಭ್ರಮ. ಅಂಚೆಯಣ್ಣ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಈಗ ಪತ್ರ ಬರುವುದೇ ಅಪರೂಪ. ಅಷ್ಟೇ ಅಲ್ಲ, ಪತ್ರ ರವಾನೆಗೆ ಸೇತುವಾಗಿದ್ದ ಅಂಚೆ ಪೆಟ್ಟಿಗೆಗಳಿಗೂ ಇಂದು ಅನಾಥ ಪ್ರಜ್ಞೆ ಕಾಡುತ್ತಿವೆ.

ಅಂಚೆ ಪೇಮೆಂಟ್ಸ್‌ ಬ್ಯಾಂಕ್‌ ಮೂಲಕ ಅಂಚೆ ಇಲಾಖೆಯು ಕಾಗದ ರಹಿತ,ಡಿಜಿಟಲ್‌ ವಹಿವಾಟಿನತ್ತ ಮುಖ ಮಾಡಿದ್ದು, ಅಂಚೆ ಡಬ್ಬಿಗಳು ಸಂಪೂರ್ಣ ಮೂಲೆಗುಂಪಾಗಿವೆ. ಇಂದಿಗೂ ಪಟ್ಟಣದಲ್ಲಿ ಅಲ್ಲಲ್ಲಿ ಪಳೆಯುಳಿಕೆಗಳಂತೆ ಅಂಚೆಪೆಟ್ಟಿಗೆಗಳನ್ನು ಕಾಣಬಹುದು. ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿ, ಯಾವುದೋ ಕಟ್ಟಡದ ಮೂಲೆಯೊಂದರಲ್ಲಿ ಅಥವಾ ಸಿಮೆಂಟ್‌ ಕಂಬದ ಆಸರೆಯಲ್ಲಿ ಈ ಡಬ್ಬಿಗಳು ನೇತು ಬಿದ್ದಿರುತ್ತವೆ. ಬಣ್ಣ ಕಳೆದುಕೊಂಡ, ತುಕ್ಕು ಹಿಡಿದ ಈ ಅಂಚೆಪೆಟ್ಟಿಗೆಗಳ ಸ್ಥಿತಿ ನೋಡಿದರೆ ಅದರತ್ತ ಸುಳಿಯುವುದಕ್ಕೂ ಭಯ ಪಡುವ ಸ್ಥಿತಿ ಇದೆ.

ಗಜೇಂದ್ರಗಡದ ಈಗಿನ ದುರ್ಗಾ ವೃತ್ತದ ಸಮೀಪದ ಬಾಡಿಗೆ ಕಟ್ಟಡದಲ್ಲಿ ಬಹಳಷ್ಟು ವರ್ಷಗಳ ಕಾಲ ಅಂಚೆ ಕಚೇರಿ ಇತ್ತು. ಆಗ ಅದು ಪ್ರಮುಖ ಸಾರ್ವಜನಿಕ ಸ್ಥಳವಾಗಿತ್ತು. ಪ್ರತಿನಿತ್ಯ ನೂರಾರು ಜನರು ಬಂದು ಹೋಗುತ್ತಿದ್ದರು. ಈಗ ಅದು ಸ್ಥಳಾಂತರಗೊಂಡು ಎಪಿಎಂಸಿ ಆವರಣದಲ್ಲಿ ಸ್ವಂತ ಕಟ್ಟಡ ಹೊಂದಿದೆ. ಎರಡು ದಶಕಗಳ ಹಿಂದೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ 7 ರಿಂದ 8 ಅಂಚೆ ಪೆಟ್ಟಿಗೆಗಳನ್ನು ಕಟ್ಟಲಾಗಿತ್ತು. ಇದರಲ್ಲಿ ದುರ್ಗಾ ವೃತ್ತದಲ್ಲಿದ್ದ ಕಟ್ಟಿದ್ದ ಮತ್ತು ಬಸವೇಶ್ವರ ವೃತ್ತದಲ್ಲಿ ಅಳವಡಿಸಿದ್ದ ಇನ್ನೊಂದು ಅಂಚೆ ಪೆಟ್ಟಿಗೆ ಪ್ರಮುಖವಾಗಿದ್ದವು. ಇದರಲ್ಲಿ ಪ್ರತಿನಿತ್ಯ ನೂರಕ್ಕೂ ಹೆಚ್ಚು ಪತ್ರಗಳು ಸಂಗ್ರಹಗೊಳ್ಳುತ್ತಿದ್ದವು. ಬೆಳಿಗ್ಗೆ ಮತ್ತು ಮಧ್ಯಾಹ್ನದ ನಂತರ ಎರಡು ಪಾಳಿಗಳಲ್ಲಿ ಅಂಚೆಯಣ್ಣ ಬಂದು,ಪೆಟ್ಟಿಗೆ ತರೆದು, ಪತ್ರಗಳನ್ನು ವಿಲೇವಾರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಪಟ್ಟಣ ಬೆಳೆಯಿತು.ಈಅಂಚೆ ಡಬ್ಬಿಗಳೂ ಕಣ್ಮರೆಯಾದವು.

‘ಕೊರಿಯರ್ ಸೇವೆ, ಮೊಬೈಲ್‌, ಇಂಟರ್‌ನೆಟ್ ಬಂದ ನಂತರ ಅಂಚೆ ಪೆಟ್ಟಿಗೆಗಳತ್ತ ಯಾರೂ ಸುಳಿಯದಂತೆ ಆದರು’ಎನ್ನುತ್ತಾರೆ ಗಜೇಂದ್ರಗಡ ಹಿರಿಯರಾದ ತಿಮ್ಮಣ್ಣ ವನ್ನಾಲ, ಕೆ.ಎಂ.ಕೊಡಗಾನೂರ.‘ಕಾಲಕಾಲೇಶ್ವರ ವೃತ್ತದ ಸಮೀಪದ ಬೀದಿ ದೀಪದ ಕಂಬಕ್ಕೆ ಕಟ್ಟಿದ ಅಂಚೆ ಪೆಟ್ಟಿಗೆ ಮೊದಲು ಎಲ್ಲರಿಗೂ ಕಾಣಿಸುವಂತಿತ್ತು. ಆದರೆ, ಈಗ ಅದೇ ಕಂಬಕ್ಕೆ ಪ್ಲೆಕ್ಸ್‌ ಅಳವಡಿಸಿರುವುದರಿಂದ ಅಂಚೆ ಪೆಟ್ಟಿಗೆ ಅಲ್ಲಿದೆ ಎನ್ನುವುದೇ ತಿಳಿಯುವುದಿಲ್ಲ ಎನ್ನುತ್ತಾರೆ ಅವರು.

‘ಈಗಲೂ ಎರಡು ಸಲ ಅಂಚೆಯಣ್ಣ ಬಂದು ಅಂಚೆಪೆಟ್ಟಿಗೆ ತೆರೆಯುತ್ತಾನೆ. ಆದರೆ, ಅದರಲ್ಲಿ ಪತ್ರಗಳು ಇರುವುದಿಲ್ಲ.ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದು, ಪೇಮೆಂಟ್ಸ್‌ ಬ್ಯಾಂಕ್‌ನ ಖಾತೆ ತೆರೆಯಿರಿ, ಬೆರಳ ತುದಿಯಲ್ಲೇ ಎಲ್ಲ ಸೇವೆಗಳು ಸಿಗುತ್ತದೆ ಎನ್ನುತ್ತಾನೆ. ಕಾಲಕ್ಕೆ ತಕ್ಕಂತೆ ಅಂಚೆ ಇಲಾಖೆಯೂ ಬದಲಾಗುತ್ತಿದೆ. ಆದರೆ, ಅಂಚೆ ಡಬ್ಬ ಮಾತ್ರ ಗತ ವೈಭವ ನೆನೆಯುತ್ತಾ ಮೂಕವಾಗಿ ರೋಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT