ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಅಪ್ಪು ಅಭಿಮಾನಿ ಸೈಕಲ್‌ ಸವಾರಿ

ನರೇಗಲ್‌ ಪಟ್ಟಣದಲ್ಲಿ ಮುತ್ತುಸೆಲ್ವಂಗೆ ಸನ್ಮಾನ
Published 3 ಫೆಬ್ರುವರಿ 2024, 5:54 IST
Last Updated 3 ಫೆಬ್ರುವರಿ 2024, 5:54 IST
ಅಕ್ಷರ ಗಾತ್ರ

ನರೇಗಲ್:‌ ನಟ ಪುನೀತ್‌ ರಾಜ್‌ಕುಮಾರ್ ಅವರ ಅಭಿಮಾನಿ, ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಗ್ರಾಮದ ನಿವಾಸಿ ಮುತ್ತುಸೆಲ್ವಂ ಅವರು ಸೈಕಲ್‌ ಮೂಲಕ ದೇಶದಾದ್ಯಂತ ಸವಾರಿ ಮಾಡುತ್ತಿದ್ದು, ಶುಕ್ರವಾರ ಅವರು ನರೇಗಲ್‌ ಪಟ್ಟಣಕ್ಕೆ ಭೇಟಿ ನೀಡಿದರು.

ಪುನೀತ್ ಅವರ ಮಾನವೀಯ ಮುಖವನ್ನು ಪರಿಚಯಿಸುವ ಹಾಗೂ ಅವರ ಹೆಸರಿನಲ್ಲಿ ಸಸಿಗಳನ್ನು ನೆಡುವ ಕೆಲಸವನ್ನು ಮುತ್ತುಸೆಲ್ವಂ ಮಾಡುತ್ತಿದ್ದಾರೆ. ನರೇಗಲ್‌ನಲ್ಲಿ ಅವರನ್ನು ಸ್ಥಳೀಯ ಎಸ್.‌ಆರ್.‌ಕೆ. ಫಿಟ್ನೆಸ್‌ ಹಾಗೂ ಅಪ್ಪು ಅಭಿಮಾನಿಗಳ ವತಿಯಿಂದ ಸನ್ಮಾನಿಸಿ ಜೈಕಾರ ಹಾಕಿದರು.

ಈ ವೇಳೆ ಮಾತನಾಡಿದ ಮುತ್ತುಸೆಲ್ವಂ, ‘ನನ್ನ ಗೆಳೆಯನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಚಿಕಿತ್ಸೆಗೆ ಅಪ್ಪು ಅವರು ಸಹಾಯ ಮಾಡಿದ್ದರು. ನಂತರ ಅವರಿಗೆ ಕೃತಜ್ಞತೆ ಸಲ್ಲಿಸಲು ಆಗಲಿಲ್ಲ. ಹಾಗಾಗಿ ಪುನೀತ್‌ ಅವರ ಮಾನವೀಯ ಗುಣವನ್ನು ಅಕ್ಕಪಕ್ಕದ ದೇಶಗಳಿಗೆ ಹಾಗೂ ಭಾರತದ ಎಲ್ಲ ತಾಲ್ಲೂಕು, ಹೋಬಳಿ ಕೇಂದ್ರಗಳಿಗೆ ತಲುಪಿಸಬೇಕು ಮತ್ತು ಅವರ ಹೆಸರಿನಲ್ಲಿ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದೊಂದಿಗೆ ಸೈಕಲ್‌ ಸವಾರಿ ಮಾಡುತ್ತಿದ್ದೇನೆ’ ಎಂದರು.

‘ಸೈಕಲ್‌ ಸೇರಿದಂತೆ 192 ಕೆ.ಜಿ. ವಸ್ತುಗಳ ಸಮೇತ ಸವಾರಿ ಮಾಡುತ್ತಿದ್ದೇನೆ. ಸೈಕಲ್‌ ಮೇಲೆ ತ್ರಿವರ್ಣ ಧ್ವಜ, ಪಕ್ಕದಲ್ಲಿಯೇ ನಾಡಧ್ವಜ, ಅದರಲ್ಲಿ ಕರ್ನಾಟಕ ರತ್ನ ಪುನೀತ್‌ ಭಾವಚಿತ್ರ ಇದೆ. 2021ರ ಡಿ.21ಕ್ಕೆ ಆರಂಭಿಸಿ ಸವಾರಿಯು ನೇಪಾಳ, ಬಾಂಗ್ಲಾದೇಶ ಹಾಗೂ ವಿಯೆಟ್ನಾಂ ದೇಶಗಳನ್ನು, ಭಾರತದ 19 ರಾಜ್ಯಗಳಲ್ಲಿ 448 ಜಿಲ್ಲೆಗಳನ್ನು ಸುತ್ತಿದ್ದೇನೆ. 2025ರ ಜ.5ಕ್ಕೆ ಇಂಡಿಯಾ ಗೇಟ್‌ ಬಳಿ ಸವಾರಿ ಮುಕ್ತಾಯಗೊಳ್ಳಲಿದೆ’ ಎಂದು ಅವರು ತಿಳಿಸಿದರು.

‘ಸದ್ಯ 20,600 ಕಿ.ಮೀ. ಸಂಚರಿಸಿದ್ದು 2,49,600 ಸಸಿಗಳನ್ನು ನೆಟ್ಟಿದ್ದೇನೆ. ಇದು ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದೆ. ಸೈಕಲ್‌ಗೆ ಜಿಪಿಎಸ್‌ ಅಳವಡಿಸಿದ್ದು, ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ತಾಲ್ಲೂಕಿನ ತಹಶೀಲ್ದಾರ್, ಪಿ.ಎಸ್.‌ಐ ಹಾಗೂ ಹೋಬಳಿಯ ಪಿಡಿಒಗಳ ಸಹಿ, ಫೋಟೊ ತೆಗೆದುಕೊಳ್ಳುತ್ತಿದ್ದೇನೆ. ದೇಶ ವಿದೇಶಕ್ಕೆ ಹೋದರೂ ಅಪ್ಪು ಅಭಿಮಾನಿ ಎಂದ ತಕ್ಷಣ ಎಲ್ಲರೂ ಗೌರವ ಕೊಡುತ್ತಾರೆ. ಊಟ ನೀಡಿ ಆಶ್ರಯ ಕೊಡುತ್ತಾರೆ. ಕೆಲವರು ಕೈಲಾದಷ್ಟು ಸಹಾಯವನ್ನೂ ಮಾಡಿ ಶುಭ ಹಾರೈಸುತ್ತಿದ್ದಾರೆ’ ಎಂದು ತಮ್ಮ ಸವರಿಯ ಅನುಭವ ಹಂಚಿಕೊಂಡರು.

ವೈದ್ಯ ನಾಗರಾಜ ಎಲ್.‌ ಗ್ರಾಮಪುರೋಹಿತ್‌ ಮಾತನಾಡಿ, ‘ಮಳೆ, ಚಳಿಯನ್ನೂ ಲೆಕ್ಕಿಸದೇ 34 ಸಾವಿರ ಕಿ.ಮೀ.ಗೂ ಅದಿಕ ಸೈಕಲ್ ಸವಾರಿ ಮಾಡುತ್ತಿರುವುದು ಕೃತಜ್ಞತಾ ಭಾವಕ್ಕೆ ಮಾದರಿ ಆಗಿದೆ’ ಎಂದರು.

ಈ ಸಂದರ್ಭದಲ್ಲಿ ಅಪ್ಪು ಎಸ್.ಆರ್., ಮೊಹಮ್ಮದ್ ನಶೇಖಾನ್, ನಾನು ಮಾಳೋತ್ತರ, ಗಂಗಾಧರ್ ಮಡಿವಾಳರ, ಸಿದ್ದಲಿಂಗಯ್ಯ ಎಂ.ಜಿ., ರೈಮಾನ್‌ ಮಾರನಬಸರಿ, ಯೂಸುಫ್ ನವಲಗುಂದ, ಅನಿಲ ಪಾಚಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT